ಚುನಾವಣೆಯಲ್ಲಿ ಗೆದ್ದ ರೇಖಾ ಗುಪ್ತಾ ದೆಹಲಿಯ 9ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಮಲೀಲಾ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮಾರ್ಚ್ 8ರೊಳಗೆ ಮಹಿಳೆಯರಿಗೆ ಸಹಾಯಧನ ನೀಡುವ ಭರವಸೆ ನೀಡಿದ್ದಾರೆ.
ನವದೆಹಲಿ (ಫೆ.20): ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಗೆದ್ದಿದ್ದ ಶಾಲಿಮಾರ್ ಭಾಗ್ ಕ್ಷೇತ್ರದ ಶಾಸಕಿ 50 ವರ್ಷದ ರೇಖಾ ಗುಪ್ತಾ ದೆಹಲಿಯ 9ನೇ ಮುಖ್ಯಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು. ರಾಮಲೀಲಾ ಮೈದಾನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರೇಖಾ ಗುಪ್ತಾ ಸಿಎಂ ಅಗಿ ಅಧಿಕಾರ ವಹಿಸಿಕೊಂಡರೆ, ನವದೆಹಲಿ ಕ್ಷೇತ್ರದಲ್ಲಿ ಆಪ್‌ನ ಅರವಿಂದ್ ಕೇಜ್ರಿವಾಲ್‌ರನ್ನು ಸೋಲಿಸಿದ್ದ ಪರ್ವೇಶ್ ವರ್ಮ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂ ಹಾಗೂ ಡಿಸಿಎಂಗಳು ವೇದಿಕೆಯಲ್ಲಿದ್ದರು. ಎನ್‌ಡಿಎ ಭಾಗವಾಗಿರುವ ಚಂದ್ರಬಾಬು ನಾಯ್ಡು ಕೂಡ ವೇದಿಕೆಯಲ್ಲಿದ್ದರು. ರೇಖಾ ಗುಪ್ತಾ, ಪರ್ವೇಶ್ ವರ್ಮ ಅಲ್ಲದೆ ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದ್ ಇಂದ್ರಜ್ ಸಿಂಗ್, ಕಪಿಲ್‌ಮಿಶ್ರಾ ಹಾಗೂ ಪಂಕಜ್ ಕುಮಾರ್ ಸಿಂಗ್ ಕೂಡ ಸಚಿವರಾಗಿ ಅಧಿಕಾರ ವಹಿಸಿಕೊಂಡರು.
ಪ್ರಮಾಣವಚನ ಸ್ವೀಕರಿಸುವ ಮೊದಲು ಗುರುವಾರ ಬೆಳಿಗ್ಗೆ ಮಾಧ್ಯಮಗಳಿಗೆ ಮಾತನಾಡಿದ ರೇಖಾ ಗುಪ್ತಾ 'ಇದು ಒಂದು ದೊಡ್ಡ ಜವಾಬ್ದಾರಿ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಪಕ್ಷದ ಹೈಕಮಾಂಡ್‌ಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ದೆಹಲಿಯ ಸಿಎಂ ಆಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನಾನು ಶೀಶ್‌ಮಹಲ್‌ನಲ್ಲಿ ವಾಸಿಸುವುದಿಲ್ಲ' ಎಂದು ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿಯ ಅಧಿಕೃತ ನಿವಾಸಕ್ಕೆ ಬಿಜೆಪಿ ಶೀಶ್‌ಮಹಲ್ ಎಂದು ಹೆಸರಿಸಿತು. ಅರವಿಂದ್ ಕೇಜ್ರಿವಾಲ್ ಅದನ್ನು ನಿರ್ಮಿಸಿದ್ದರು. ನಿಯಮಗಳನ್ನು ಉಲ್ಲಂಘಿಸಿ ಕೇಜ್ರಿವಾಲ್ ಅದನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಇದನ್ನು ಚುನಾವಣಾ ವಿಷಯವನ್ನಾಗಿಯೂ ಮಾಡಿತ್ತು.
Rekha Gupta: ಸ್ಪೇರ್ ಪಾರ್ಟ್ಸ್ ಉದ್ಯಮಿಯ ಪತ್ನಿಈಗ ದೆಹಲಿಯ ಸಿಎಂ!
ಮಾರ್ಚ್ 8ಕ್ಕೆ ಬರಲಿದೆ ಹಣ: ಸರ್ಕಾರ ಮಹಿಳೆಯರಿಗೆ ಮಾಸಿಕ 2,500 ರೂ.ಗಳ ಸಹಾಯಧನವನ್ನು ನೀಡುವ ಭರವಸೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಮಾರ್ಚ್ 8 ರೊಳಗೆ ಅರ್ಹ ಮಹಿಳೆಯರ ಖಾತೆಗಳಿಗೆ ಮಾಸಿಕ ಸಹಾಯಧನದ ಮೊದಲ ಕಂತನ್ನು ಜಮಾ ಮಾಡಲಾಗುವುದು ಎಂದು ರೇಖಾ ಗುಪ್ತಾ ತಿಳಿಸಿದ್ದಾರೆ.
Breaking: ಆರೆಸ್ಸೆಸ್ ಸೂಚಿಸಿದ್ದ ರೇಖಾ ಗುಪ್ತಾಗೆ ಒಲಿದ ದೆಹಲಿ ಸಿಎಂ ಪಟ್ಟ!
ರೇಖಾ ಗುಪ್ತಾ ಸಿಎಂ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ಪತಿ ಮನೀಶ್ ಗುಪ್ತಾ, 'ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿ ಆಗ್ತಾರೆ ಅಂತ ನಾವು ಅಂದ್ಕೊಂಡಿರಲಿಲ್ಲ. ಇದು ಒಂದು ರೀತಿಯ ಅದ್ಭುತ... ಪಕ್ಷ ನಮಗೆ ಇಷ್ಟೊಂದು ಗೌರವ ಕೊಟ್ಟಿರೋದು ನಮಗೆ ಖುಷಿ ತಂದಿದೆ" ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ರೇಖಾ ಗುಪ್ತಾ, 'ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸ್ತೀನಿ... ನಮ್ಮ ಪಕ್ಷ ಕೊಟ್ಟಿರೋ ಎಲ್ಲಾ ಭರವಸೆಗಳನ್ನು ಈಡೇರಿಸೋದು ನನ್ನ ಮೊದಲ ಆದ್ಯತೆ. ನಮ್ಮ 48 ಶಾಸಕರು ಟೀಮ್ ಮೋದಿ ತರ ಕೆಲಸ ಮಾಡ್ತಾರೆ. ನಾನು ದೆಹಲಿ ಸಿಎಂ ಆಗ್ತೀನಿ ಅಂತ ಅಂದ್ಕೊಂಡಿರಲಿಲ್ಲ. ಹಿಂದಿನ ಭ್ರಷ್ಟ ಸರ್ಕಾರ ಜನರಿಗೆ ಸೇರಬೇಕಾದ ಪ್ರತಿಯೊಂದು ರೂಪಾಯಿಯ ಲೆಕ್ಕ ಕೊಡಬೇಕು" ಅಂತ ಹೇಳಿದ್ದಾರೆ.
