ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿದೆ. ಈ ನಡುವೆ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್‌ ಬಳಸಲಾಗಿದೆ ಎಂದು ಗೊತ್ತಾಗಿದೆ.

ನವದೆಹಲಿ (ನ.12): ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿದೆ. ಈ ನಡುವೆ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್‌ ಬಳಸಲಾಗಿದೆ ಎಂದು ಗೊತ್ತಾಗಿದೆ. ಈ ಕೃತ್ಯವನ್ನು ‘ಬಾಂಬ್ ಸ್ಫೋಟ’ ಹಾಗೂ ‘ಉಗ್ರ ಕೃತ್ಯ’ ಎಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಉಗ್ರವಾದದ ಪ್ರಕರಣಗಳ ತನಿಖೆಗೆಂದೇ ಇರುವ ರಾಷ್ಟ್ರೀಯ ತನಿಖಾ ತಂಡದ (ಎನ್‌ಐಎ) ಹೆಗಲಿಗೆ ತನಿಖೆ ಹಸ್ತಾಂತರಿಸಲಾಗಿದೆ.

ಈ ಮಧ್ಯೆ, ಅಪಾರ ಸಂಖ್ಯೆಯ ಸಾವು- ನೋವಿಗೆ ಕಾರಣವಾದ ಹ್ಯುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ ಡಾ। ಉಮರ್‌ ನಬಿ ಎಂದು ಗುರುತಿಸಲಾಗಿದೆ. ಇದು ಆತ್ಮಹತ್ಯಾ ದಾಳಿ, ಇದರ ಹಿಂದೆ ಪಾಕಿಸ್ತಾನದ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಕೈವಾಡ ಇರಬಹುದು ಎಂದು ಬಲವಾಗಿ ಶಂಕಿಸಲಾಗಿದೆ.

ಏಕೆಂದರೆ ಈತ ಫರೀದಾಬಾದ್‌ನ ಅಲ್‌ ಫಲಾ ವೈದ್ಯಕೀಯ ಕಾಲೇಜು/ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ. ಇದೇ ಕಾಲೇಜಿನ ಹಲವು ವೈದ್ಯರನ್ನು ಉಗ್ರ ಚಟುವಟಿಕೆ ಆರೋಪದ ಮೇರೆಗೆ ಕಳೆದ 2 ದಿನದಲ್ಲಿ ಬಂಧಿಸಲಾಗಿದೆ. ಈ ವೈದ್ಯರ ಪೈಕಿ ಭಾರತದಲ್ಲಿ ಮಹಿಳಾ ಜೈಷ್‌-ಎ-ಮೊಹಮ್ಮದ್‌ ಘಟಕದ ಹೊಣೆ ಹೊರಲು ಸಿದ್ಧಳಾಗಿದ್ದ ಡಾ। ಶಾಹೀನ್‌ ಶಾಹಿದ್ ಕೂಡ ಇದ್ದಾಳೆ. ಶಾಹೀನ್‌ಗೂ ಡಾ। ಉಮರ್‌ ನಬಿಗೂ ಉತ್ತಮ ನಂಟು ಇತ್ತೆನ್ನಲಾಗಿದೆ. ಹೀಗಾಗಿ ಈ ಇಡೀ ಕೃತ್ಯದ ಹಿಂದೆ ಪಾಕಿಸ್ತಾನ ಮೂಲದ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯ ಕೈವಾಡವಿದೆಯೇ ಎಂಬ ಗುಮಾನಿ ವ್ಯಕ್ತವಾಗಿದೆ. ಎನ್‌ಐಎ ಕೂಡ ಇದೇ ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿದೆ.

ಸಿಕ್ಕಿಬೀಳುವ ಭಯದಲ್ಲಿ ಪರಾರಿ, ಹತಾಶ ಕೃತ್ಯ: ಫರೀದಾಬಾದ್ ಅಲ್‌ ಫಲಾ ವೈದ್ಯ ಕಾಲೇಜಿನಲ್ಲಿನ 3 ವೈದ್ಯರು ಸೇರಿ 8 ಜನರನ್ನು ಉಗ್ರ ಕೃತ್ಯದ ಆರೋಪ ಹೊರಿಸಿ ಸೋಮವಾರ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಬಂಧಿತರ ಜತೆ ನಂಟು ಹೊಂದಿದ್ದ ಅದೇ ಕಾಲೇಜಿನ ವೈದ್ಯ ಡಾ। ಉಮರ್‌ ನಬಿ ಆತಂಕಿತನಾಗಿದ್ದ ಎಂದು ಗೊತ್ತಾಗಿದೆ. ಹೀಗಾಗೇ ಆತ ಫರೀದಾಬಾದ್‌ನಿಂದ ಪರಾರಿ ಆಗಿ ದಿಲ್ಲಿಗೆ ಐ20 ಕಾರಿನಲ್ಲಿ ಬಂದಿದ್ದ. ಕೃತ್ಯ ಎಸಗುವ ಮುನ್ನ ದಿಲ್ಲಿಯ ಅನೇಕ ಭಾಗ ಸುತ್ತಿದ್ದ.

ಸೋಮವಾರ ಮಧ್ಯಾಹ್ನ 3.19ಕ್ಕೆ ಕೆಂಪುಕೋಟೆ ಪಾರ್ಕಿಂಗ್‌ಗೆ ಬಂದು ಸತತ 3 ತಾಸುಗಳ ಕಾಲ ಅಲ್ಲಿಯೇ ಕಾರು ನಿಲ್ಲಿಸಿದ್ದ. ಕಾರಿನಿಂದ ಹೊರಬರದೇ ಆತ ಅಲ್ಲೇ ಕಾದಿದ್ದ. ಬಹುಶಃ ಯಾರದ್ದೋ ಸಂದೇಶ ಅಥವಾ ಬರುವಿಕೆಗೆ ಆತ ಕಾದಿರಬಹುದು. ಬಳಿಕ ಅಲ್ಲಿಂದ ಸಂಜೆ 6.30ರ ಸುಮಾರಿಗೆ ಹೊರಟ ಆತ ಸಂಜೆ 6.52ಕ್ಕೆ ಕೆಂಪುಕೋಟೆ ಮೆಟ್ರೋ ಸ್ಟೇಷನ್‌ ಸಿಗ್ನಲ್‌ನಲ್ಲಿ ಕಾರು ಸ್ಫೋಟ ನಡೆಸಿದ, ತನ್ನವರ ಬಂಧನದಿಂದ ಹತಾಶೆಗೆ ಒಳಗಾಗಿ ಆತ ಈ ಕೃತ್ಯ ಎಸಗಿರಬಹುದು ಎಂದು ತನಿಖಾ ತಂಡಗಳು ಶಂಕಿಸಿವೆ.

ಆದರೆ ಇನ್ನೂ ಕೆಲವು ಮೂಲಗಳು, ತನ್ನ ಹ್ಯಾಂಡ್ಲರ್‌ಗಳ ಸೂಚನೆ ಮೇರೆಗೆ ಆತ್ಮಹತ್ಯಾ ದಾಳಿ ಕೂಡ ನಡೆಸಿರಬಹುದು ಎಂದು ಶಂಕಿಸಿವೆ. ಈ ಕಾರಿನಲ್ಲಿ ಆತ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್, ಇಂಧನ ತೈಲ ಮತ್ತು ಡಿಟೋನೇಟರ್‌ಗಳನ್ನು ಬಳಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ, ಆತನ ಅಂಗಾಂಗಗಳು ಕಾರಿನ ಬಳಿ ಸಿಕ್ಕಿದ್ದು, ಅವು ಆತನದ್ದೇ ಹೌದೇ ಎಂದು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆಗೆ ಪೊಲೀಸರು ನಿರ್ಧರಿಸಿದ್ದಾರೆ.

ಕಾರು ಯಾರದ್ದು?

ಸ್ಫೋಟ ಮತ್ತು ಭಯೋತ್ಪಾದಕ ಮಾಡ್ಯೂಲ್ ಬಗ್ಗೆ ತನಿಖೆ ಮುಂದುವರೆದಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತಾರೀಖ್‌ ಎಂಬ ವ್ಯಕ್ತಿ ಉಮರ್‌ಗೆ ಐ20 ಮಾರಿದ್ದ. ಇದಕ್ಕೂ ಮುನ್ನ ತಾರೀಖ್, ಹರ್ಯಾಣದ ವ್ಯಕ್ತಿಯೊಬ್ಬನಿಂದ ಈ ಕಾರು ಖರೀದಿಸಿದ್ದ ಎಂದು ಗೊತ್ತಾಗಿದೆ. ತಾರೀಖ್ ಈಗಾಗಲೇ ಪೊಲೀಸ್ ವಶದಲ್ಲಿದ್ದಾನೆ.