*  ವಾಯವ್ಯ ಭಾರತದಲ್ಲಿ ಸರಾಸರಿ 35.9 ಡಿಗ್ರಿ, ಕೇಂದ್ರ ಭಾರತದಲ್ಲಿ ಸರಾಸರಿ 37.78 ಡಿಗ್ರಿ*  ಎರಡೂ ಏಪ್ರಿಲ್‌ ತಿಂಗಳ ದಾಖಲೆ*  ದೇಶಾದ್ಯಂತ ಏಪ್ರಿಲ್‌ಲ್ಲಿ 35.05 ಡಿಗ್ರಿ ಬಿಸಿಲು 

ನವದೆಹಲಿ(ಮೇ.01): ಏಪ್ರಿಲ್‌ಗಿಂತ ಮೇನಲ್ಲಿ ಬಿಸಿಲಿನ ಪ್ರತಾಪ ಹೆಚ್ಚಲಿದ್ದು, ದೇಶದೆಲ್ಲೆಡೆ ಸಾಮಾನ್ಯಕ್ಕಿಂತ ಅಧಿಕ ತಾಪವಿರಲಿದೆ. ಮೇ ತಿಂಗಳು ಅತಿ ಬಿರುಬಿಸಿಲಿನ ತಿಂಗಳಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ(Department of Meteorology) ಮುನ್ನೆಚ್ಚರಿಕೆ ನೀಡಿದೆ. 

‘ಪಶ್ಚಿಮ ರಾಜಸ್ಥಾನದಲ್ಲಿ(West Rajasthan) 50 ಡಿಗ್ರಿ ತಾಪಮಾನ ಮೀರುವ ಹಾಗೂ ಕೆಲವೆಡೆ 50 ಡಿಗ್ರಿ ಸನಿಹಕ್ಕೆ ಉಷ್ಣತೆ ಧಾವಿಸುವ ಅಪಾಯವಿದೆ’ ಎಂದು ಅದು ತಿಳಿಸಿದೆ. ಸಾಮಾನ್ಯವಾಗಿ ರಾಜಸ್ಥಾನದ ಚುರುವಿನಲ್ಲಿ ಮಾತ್ರ ಗರಿಷ್ಠ ಉಷ್ಣಾಂಶವಿರುತ್ತದೆ. ಅಲ್ಲಿ 1956ರಲ್ಲಿ ಸಾರ್ವಕಾಲಿಕ ದಾಖಲೆಯ 52.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಂಡುಬಂದಿತ್ತು. 2019ರಲ್ಲಿ 50.8 ಡಿಗ್ರಿ ತಾಪಮಾನ ವರದಿಯಾಗಿತ್ತು.

Heat Wave: ಹೆಚ್ಚುತ್ತಿರುವ ತಾಪಮಾನದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?

ಈ ಬಾರಿಯ ಬೇಸಿಗೆ ಬಿಸಿಲು ವಾಯವ್ಯ ಹಾಗೂ ಮಧ್ಯ ಭಾರತದ(India) 9 ರಾಜ್ಯಗಳಲ್ಲಿ ತನ್ನ ಪ್ರತಾಪ ತೋರುತ್ತಿದೆ. ಈ ಎರಡೂ ವಲಯಗಳಲ್ಲಿ ತಾಪಮಾನ ಏಪ್ರಿಲ್‌ ತಿಂಗಳಲ್ಲಿ 122 ವರ್ಷದ ದಾಖಲೆ ಸ್ಥಾಪಿಸಿದೆ. ಇದೇ ವೇಳೆ, ಇಡೀ ಭಾರತದಲ್ಲಿ 122 ವರ್ಷದಲ್ಲಿ 4ನೇ ಗರಿಷ್ಠ ತಾಪಮಾನ ದಾಖಲಾಗಿದೆ.

‘ವಾಯವ್ಯ ಭಾರತದಲ್ಲಿ ಏಪ್ರಿಲ್‌ನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 35.9 ಡಿಗ್ರಿ ಹಾಗೂ ಕೇಂದ್ರ ಭಾರತದಲ್ಲಿ ಸರಾಸರಿ 37.78 ಡಿಗ್ರಿ ದಾಖಲಾಗಿದ್ದು, ಈ ಎರಡೂ 122 ವರ್ಷಗಳ ದಾಖಲೆಯಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಅವರು ಮಾಹಿತಿ ನೀಡಿದ್ದಾರೆ. ಈ ಭಾಗದ ಜಮ್ಮು-ಕಾಶ್ಮೀರ, ಪಂಜಾಬ್‌, ಹರ್ಯಾಣ, ಗುಜರಾತ್‌, ದಿಲ್ಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಜನರು ಬಿಸಿಲಿನಿಂದ ಬಸವಳಿದಿದ್ದಾರೆ.

ಹಲವು ರಾಜ್ಯಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ: ಅಸಾನಿ ಚಂಡಮಾರುತ, ಭಾರೀ ಮಳೆಯ ಮುನ್ಸೂಚನೆ!

ಮತ್ತೊಂದೆಡೆ, ‘ದೇಶಾದ್ಯಂತ ಏಪ್ರಿಲ್‌ನಲ್ಲಿ ಸರಾಸರಿ 35.05 ಡಿಗ್ರಿ ತಾಪಮಾನ ವರದಿಯಾಗಿದ್ದು, ಇದು 122 ವರ್ಷಗಳಲ್ಲೇ 4ನೇ ಸ್ಥಾನ ಪಡೆದುಕೊಂಡಿದೆ’ ಎಂದು ಮಹಾಪಾತ್ರ ಹೇಳಿದ್ದಾರೆ.

ಎಲ್ಲಿ ಎಷ್ಟು ತಾಪ?:

ಈ ನಡುವೆ, ಉತ್ತರ ಭಾರತದ(North India) ಹಲವೆಡೆ ಉಷ್ಣಾಂಶ ಶನಿವಾರ 47 ಡಿಗ್ರಿ ಸೆಲ್ಸಿಯಸ್‌ ಅನ್ನು ದಾಟಿದೆ. ಉತ್ತರಪ್ರದೇಶದ ಬಂದಾದಲ್ಲಿ ಅತಿ ಗರಿಷ್ಠ 47 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಅಲಹಾಬಾದ್‌, ಝಾನ್ಸಿ, ಲಖನೌದಲ್ಲಿ ಕ್ರಮವಾಗಿ 46.8, 46.2 ಹಾಗೂ 45.1 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು, ಇದು ಏಪ್ರಿಲ್‌ನಲ್ಲಿ ಈವರೆಗೆ ದಾಖಲಾದ ಗರಿಷ್ಠ ತಾಪಮಾನವಾಗಿದೆ. ಹರಾರ‍ಯಣದ ಗುರುಗ್ರಾಮ (45.9 ಡಿಗ್ರಿ) ಹಾಗೂ ಮಧ್ಯಪ್ರದೇಶದ ಸಾತ್ನಾದಲ್ಲಿ (45.3 ಡಿಗ್ರಿ) ದಾಖಲಾದ ತಾಪಮಾನವೂ ಸಾರ್ವಕಾಲಿಕವಾಗಿದೆ. ದಿಲ್ಲಿಯಲ್ಲಿ ಶನಿವಾರ 44 ಡಿಗ್ರಿ ತಾಪವಿತ್ತು.