* ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ತಾಪಮಾನ ಹೆಚ್ಚಳ* ಮುಂಬರುವ ವಾರದಲ್ಲಿ ದೇಶದ ಹಲವೆಡೆ ಸೆಕೆ ಮತ್ತಷ್ಟು ಹೆಚ್ಚಾಗಲಿದೆ* ಅಸಾನಿ ಚಂಡಮಾರುತ, ಭಾರೀ ಮಳೆಯ ಮುನ್ಸೂಚನೆ

ನವದೆಹಲಿ(ಮಾ.19): ಈ ವರ್ಷ ಬೇಸಿಗೆ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ತನ್ನ ನಿಜ ಬಣ್ಣ ತೋರಿಸಲಾರಂಭಿಸಿದೆ. ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ತಾಪಮಾನ ಈಗಾಗಲೇ 40 ಡಿಗ್ರಿ ದಾಟಿದೆ. ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮುಂಬರುವ ವಾರದಲ್ಲಿ ದೇಶದ ಹಲವೆಡೆ ಸೆಕೆ ಮತ್ತಷ್ಟು ಹೆಚ್ಚಾಗಲಿದೆ. ಏತನ್ಮಧ್ಯೆ, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಶೀಘ್ರದಲ್ಲೇ 'ಅಸಾನಿ' ಚಂಡಮಾರುತವಾಗಿ ಬದಲಾಗಲಿದೆ. ಇದರಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಳೆ ಆರಂಭವಾಗಿದೆ.

ಪಶ್ಚಿಮ ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ತಾಪಮಾನ ಭಾರೀ ಹೆಚ್ಳವಾಗಿದೆ. ಇದಲ್ಲದೆ, ಸೌರಾಷ್ಟ್ರ-ಕಚ್, ವಿದರ್ಭ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಬಿಸಿ ಗಾಳಿ ಈಗಾಗಲೇ ಜನರಿಗೆ ಆತಂಕ ಉಂಟು ಮಾಡಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4.5⁰C ಹೆಚ್ಚಾಗಿದೆ. ಪಂಜಾಬ್, ಹರಿಯಾಣ-ಚಂಡೀಗಢ-ದೆಹಲಿ, ಪಶ್ಚಿಮ ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಸೌರಾಷ್ಟ್ರ ಮತ್ತು ಕಚ್ ಮತ್ತು ವಿದರ್ಭದಲ್ಲೂ ಸೆಕೆ ಹೆಚ್ಚಾಗಿದೆ.

ಈ ರಾಜ್ಯಗಳಲ್ಲಿ ಮಳೆ

ಸ್ಕೈಮೆಟ್ ಹವಾಮಾನ ವರದಿ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು. ಅಂಡಮಾನ್ ಮತ್ತು ನಿಕೋಬಾರ್ ಕರಾವಳಿಯ ಸಮುದ್ರದಲ್ಲಿ ಹೆಚ್ಚಿನ ಅಲೆಗಳು ಉಂಟಾಗಬಹುದು ಮತ್ತು ಗಾಳಿಯ ವೇಗ ಗಂಟೆಗೆ 50 ರಿಂದ 60 ಕಿ.ಮೀ ವೇಗವಾಗಿರಬಹುದೆನ್ನಲಾಗಿದೆ. ಮಾರ್ಚ್ 20 ಮತ್ತು 21ರಂದು ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮ ಬೀಳಬಹುದು. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಾಗಬಹುದು.

ಅಸಾನಿ ಚಂಡಮಾರುತ

ಏತನ್ಮಧ್ಯೆ, ವರ್ಷದ ಮೊದಲ ಚಂಡಮಾರುತ, ಅಸಾನಿ, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಹುಟ್ಟುಕೊಂಡಿದೆ ಮತ್ತು ಶುಕ್ರವಾರದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯ ನಿರೀಕ್ಷೆಯಿದೆ, ಆದಾಗ್ಯೂ ಪೂರ್ವ ಕರಾವಳಿ ಪ್ರದೇಶಗಳಲ್ಲಿ ಮಳೆ ಇರುವುದಿಲ್ಲ. ಇಂದು ಈ ಚಂಡಮಾರುತವು ಪೂರ್ವ-ಈಶಾನ್ಯಕ್ಕೆ ಚಲಿಸುತ್ತದೆ ಮತ್ತು ನಂತರ ಉತ್ತರಕ್ಕೆ ಚಲಿಸುತ್ತದೆ ಮತ್ತು ಮಾರ್ಚ್ 20 ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುತ್ತದೆ.

7 ಜಿಲ್ಲೆ​ಗಳ​ಲ್ಲಿ ದಿಢೀರ್‌ ಮಳೆಯ ಅಬ್ಬರ! 

ಬಿಸಿಲ ಧಗೆ ಏರು​ತ್ತಿ​ರುವ ನಡು​ವೆಯೇ ಉತ್ತರ ಕನ್ನಡ ಸೇರಿ ರಾಜ್ಯದ ಏಳು ಜಿಲ್ಲೆ​ಗ​ಳಲ್ಲಿ ಶುಕ್ರವಾರ ಕೆಲ​ಗಂಟೆ​ಗಳ ಕಾಲ ದಿಢೀರ್‌ ಉತ್ತಮ ಮಳೆ​ಯಾ​ಗಿ​ದೆ. ಮಳೆ-ಗಾಳಿ ಅಬ್ಬ​ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಇತಿ​ಹಾಸ ಪ್ರಸಿದ್ಧ ಶಿರಸಿ ಮಾರಿ​ಕಾಂಬಾ ಜಾತ್ರಾ ಗದ್ದುಗೆ ಮಂಟ​ಪಕ್ಕೆ ಹಾನಿ​ಯಾ​ಗಿದ್ದ​ಲ್ಲದೆ, ಮನೋ​ರಂಜ​ನೆ​ಗೆಂದು ಹಾಕ​ಲಾ​ಗಿದ್ದ ಜೈಂಟ್‌ ವ್ಹೀಲ್‌ನ ಐದು ತೊಟ್ಟಿಲು ಕುಸಿದು ಬಿದ್ದಿದೆ.

ರಾಜ್ಯ​ದಲ್ಲಿ ಕಳೆದ ಕೆಲ ದಿನ​ಗ​ಳಿಂದ ಬಿಸಿ​ಲಿನ ಝಳ ಏರು​ತ್ತಲೇ ಇದ್ದು, ಇದರ ನಡು​ವೆಯೇ ಉತ್ತರ ಕನ್ನಡ, ಹಾವೇರಿ, ಗದಗ, ಕೊಡಗು, ದಕ್ಷಿಣ ಕನ್ನ​ಡ, ​ಉ​ಡುಪಿ, ಚಿಕ್ಕ​ಮ​ಗ​ಳೂರು ಜಿಲ್ಲೆ​ಯಲ್ಲಿ ಸುಮಾರು ಅರ್ಧ​ಗಂಟೆ​ಯಿಂದ ಒಂದು ಗಂಟೆ​ಗಳ ಕಾಲ ಉತ್ತಮ ಮಳೆ​ ಸುರಿ​ದಿ​ದೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಮಳೆಯಾದ ಬಗ್ಗೆ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಮಾರಿ​ಕಾಂಬಾ ಜಾತ್ರೆಗೆ ಅಡ್ಡಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲ​ವೆಡೆ ಸಂಜೆ ವೇಳೆಗೆ ಸುಮಾರು ಒಂದ​ರಿಂದ ಒಂದೂ​ವರೆ ಗಂಟೆ​ಗಳ ಕಾಲ ಭಾರೀ ಗಾಳಿ ಸಹಿತ ಉತ್ತಮ ಮಳೆ​ಯಾ​ಗಿದ್ದು, ಸಿದ್ದಾ​ಪು​ರ​ದಲ್ಲಿ ಮನೆ ಮೇಲೆ ತೆಂಗಿ​ನ​ಮ​ರ​ವೊಂದು ಬಿದ್ದು, ನಾಲ್ವ​ರಿಗೆ ಗಾಯ​ಗ​ಳಾ​ಗಿದೆ. ಮಳೆ-ಗಾಳಿ​ಯಿಂದಾಗಿ ಶಿರ​ಸಿ​ಯಲ್ಲಿ ಮಾರಿಕಾಂಬಾದೇವಿ ದೇವಸ್ಥಾನದ ಬಿಡ್ಕಿಬೈಲಿನಲ್ಲಿ ಜಾತ್ರಾ ಗದ್ದುಗೆಗಾಗಿ ನಿರ್ಮಿಸಿದ್ದ ಮಂಟಪಕ್ಕೆ ಹಾನಿಯಾಗಿದೆ. ಸಂಜೆ ಸುಮಾರು 6 ಗಂಟೆ ವೇಳೆ ದಿಢೀರ್‌ ಬಿರುಗಾಳಿ ಬೀಸಿದೆ. ಇದರಿಂದಾಗಿ ಜಾತ್ರಾ ಮಂಟಪದ ಮೇಲ್ಭಾಗ ಕುಸಿದಿದೆ. ಭಾರೀ ಗಾಳಿಗೆ ಅಂಗಡಿ ಮುಂಗ​ಟ್ಟು​ಗಳ ಮುಂದೆ ಕಟ್ಟಿದ್ದ ಟಾರ್ಪ​ಲ್‌ ಹಾರಿ ಹೋದ ಹಿನ್ನೆ​ಲೆ​ಯಲ್ಲಿ ​ಕೆ​ಲ​ಕಾಲ ಆತಂಕದ ವಾತಾ​ವ​ರಣ ನಿರ್ಮಾ​ಣ​ವಾ​ಗಿ​ತ್ತು.

ತಪ್ಪಿದ ದುರಂತ: ಜಾತ್ರೆ ಹಿನ್ನೆ​ಲೆ​ಯಲ್ಲಿ ಸಾರ್ವ​ಜ​ನಿ​ಕರ ಮನೋರಂಜನೆಗಾಗಿ ಅಳವಡಿಸಲಾಗಿದ್ದ ಜೈಂಟ್‌ ವ್ಹೀಲ್‌​ಗೂ ಗಾಳಿ-ಮಳೆ​ಯಿಂದಾ​ಗಿ ಹಾನಿಯಾಗಿ​ದೆ. ಗಾಳಿ​ಯ​ಬ್ಬ​ರಕ್ಕೆ ಸುಮಾರು 5 ತೊಟ್ಟಿಲು ಕಳಚಿ ಕೆಳ ಬಿದ್ದಿದೆ. ಗಾಳಿ ಜೋರಾಗುತ್ತಿದ್ದಂತೆ ಅಧಿ​ಕಾ​ರಿ​ಗ​ಳು ಜಾಯಿಂಟ್‌ ವ್ಹೀಲ್‌ ಅನ್ನು ತಕ್ಷಣ ಸ್ಥಗಿ​ತ​ಗೊ​ಳಿ​ಸಿ ಜನ​ರನ್ನು ಸ್ಥಳ​ದಿಂದ ಹೊರ ಕಳು​ಹಿ​ಸಿದ ಹಿನ್ನೆ​ಲೆ​ಯಲ್ಲಿ ಭಾರೀ ಅನಾ​ಹುತವೊಂದು ತಪ್ಪಿ​ದಂತಾ​ಗಿ​ದೆ.