* ಮಹಾರಾಷ್ಟ್ರದಲ್ಲಿ ಹನುಮಾಣ್ ಚಾಲೀಸಾ ಪಠಿಸಿ ಸದ್ದು ಮಾಡಿದ್ದ ಸಂಸದೆ ನವನೀತ್ ರಾಣಾ* ಹನುಮಾನ್ ಚಾಲೀಸಾ ಪಠಿಸಿ ಜೈಲು ಸೇರಿ, ಜಾಮೀನಿನ ಮೇಲೆ ಬಿಡುಗಡೆ* ಬಿಡುಗಡೆಯಾದ ಸಂಸದೆಗೆ ಈಗ ಜೀವ ಬೆದರಿಕೆ
ಮುಂಬೈ(ಮೇ.27): ಮಾತೋಶ್ರೀ-ಹನುಮಾನ್ ಚಾಲೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಮುಂಬೈ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅಮರಾವತಿ ಸಂಸದ ನವನೀತ್ ರಾಣಾ ಅವರು ತಮಗೆ ಕೊಲೆ ಬೆದರಿಕೆ ಹಾಕಿರುವ ಕುರಿತು ದೂರು ದಾಖಲಿಸಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರಿಗೆ ಬುಧವಾರ ದೂರು ನೀಡಲಾಗಿದೆ. ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಮರಾವತಿ ಸಂಸದೆ ನವನೀತ್ ರಾಣಾ ತನಗೆ ಪದೇ ಪದೇ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.
ಮಂಗಳವಾರ ಸಂಜೆ 5.27ರಿಂದ 5.47ರವರೆಗೆ ಸಂಸದರ ವೈಯಕ್ತಿಕ ಮೊಬೈಲ್ ಸಂಖ್ಯೆಗೆ 11 ಕರೆಗಳು ಬಂದಿವೆ ಎಂದು ಅವರ ಆಪ್ತ ಸಹಾಯಕರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇನ್ನೊಂದು ತುದಿಯಲ್ಲಿದ್ದ ವ್ಯಕ್ತಿ ತನ್ನೊಂದಿಗೆ ಅತ್ಯಂತ ಅನುಚಿತವಾಗಿ ಮಾತನಾಡಿ, ನಿಂದಿಸಿದ್ದಾನೆ ಮತ್ತು ಮಹಾರಾಷ್ಟ್ರಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನೊಮ್ಮೆ ಹನುಮಾನ್ ಚಾಲೀಸಾ ಪಠಿಸಿದರೆ ಕೊಲೆ ಮಾಡುವುದಾಗಿ ಅಮರಾವತಿ ಸಂಸದರಿಗೆ ಕರೆ ಮಾಡಿದವರು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರು ಸ್ವೀಕರಿಸಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಮನಾರ್ಹವಾಗಿ, ಏಪ್ರಿಲ್‌ನಲ್ಲಿ, ನವನೀತ್ ರಾಣಾ ಮತ್ತು ಅವರ ಶಾಸಕ ಪತಿ ರವಿ ರಾಣಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಮುಂಬೈನಲ್ಲಿರುವ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸವಾದ ಮಾತೋಶ್ರೀ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿದ್ದರು. ಏಪ್ರಿಲ್ 23 ರಂದು, ಮಾತೋಶ್ರೀ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲು ಒತ್ತಾಯಿಸಿದ್ದಕ್ಕಾಗಿ ದೇಶದ್ರೋಹ ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ಮುಂಬೈ ಪೊಲೀಸರು ಅವರನ್ನು ಬಂಧಿಸಿದರು. ಮೇ 4 ರಂದು ಮುಂಬೈ ನ್ಯಾಯಾಲಯವು ಪ್ರಕರಣದಲ್ಲಿ ಇಬ್ಬರೂ ಸಂಸದರಿಗೆ ಜಾಮೀನು ನೀಡಿತ್ತು.
ಮಾತೋಶ್ರೀ ಮಸೀದಿಯೇ?: ಉದ್ಧವ್ ವಿರುದ್ಧ ರಾಜ್ ಠಾಕ್ರೆ ಪ್ರಹಾರ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ನಿವಾಸ ‘ಮಾತೋಶ್ರೀ’ ಎದುರು ಹನುಮಾನ್ ಚಾಲೀಸಾ ಪಠಣಕ್ಕೆ ವಿರೋಧ ವ್ಯಕ್ತಪಡಿದ್ದನ್ನು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಟೀಕಿಸಿದ್ದಾರೆ. ‘ಮಾತೋಶ್ರೀ ಎದುರು ಚಾಲೀಸಾ ಪಠಣೆಗೆ ಯಾಕೆ ವಿರೋಧ? ಅದೇನು ಮಸೀದಿಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.
ಪುಣೆಯಲ್ಲಿ ರಾರಯಲಿಯನ್ನುದ್ದೇಶಿ ಮಾತನಾಡಿದ ಅವರು, ‘ನಾನು ನನ್ನ ಬೆಂಬಲಿಗರಿಗೆ ಧ್ವನಿವರ್ಧಕ ಮೂಲಕ ಹನುಮಾನ್ ಚಾಲೀಸಾ ಪ್ರಸಾರ ಮಾಡಲು ಹೇಳಿದ ನಂತರ, ರಾಣಾ ದಂಪತಿಗಳು ಮಾತೋಶ್ರೀ ಎದುರು ಚಾಲೀಸಾ ಪಠಿಸುವುದಾಗಿ ಹೇಳಿದರು. ಆನಂತರ ಅವರಿಬ್ಬರು ಮತ್ತು ಶಿವ ಸೈನಿಕರ ಜೊತೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ಹೇಳಿದರು. ಇದೇ ವೇಳೆ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಮತ್ತು ಔರಂಗಾಬಾದ್ ಹೆಸರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಪ್ರಕರಣ ದಾಖಲಿಸುವ ಸಂಚು:
ಅಯೋಧ್ಯೆಗೆ ಹೋಗುವ ಯೋಜನೆಯನ್ನು ಕೈಬಿಟ್ಟಿದ್ದಕ್ಕೆ ಸ್ಪಷ್ಟನೆ ನೀಡಿದ ರಾಜ್ ಠಾಕ್ರೆ, ‘ಅಯೋಧ್ಯೆಗೆ ಹೋದರೆ ನಮ್ಮ ಕಾರ್ತಕರ್ತರ ಹಳೆ ಕೇಸು ಕೆದಕಿ ಪ್ರಕರಣ ದಾಖಲಿಸಲು ಮಹಾರಾಷ್ಟ್ರ ಸರ್ಕಾರ ಸಂಚು ರೂಪಿಸಿತ್ತು. ಹಾಗಾಗಿ ನಾನು ಅಯೋಧ್ಯೆಗೆ ಹೋಗಲಿಲ್ಲ’ ಎಂದರು.
