ವಂದೇ ಭಾರತ್ ರೈಲೇಕೆ ಮೋದಿಗೆ ಅಚ್ಚುಮೆಚ್ಚು? ಅವರೇ ಯಾಕೆ ಉದ್ಘಾಟಿಸೋದು?
ಇತ್ತೀಚೆಗೆ ಒಡಿಶಾದಲ್ಲಿ ಭೀಕರ ರೈಲು ಅಪಘಾತವಾದಾಗ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮಾಡಿದ ಕೆಲಸಕ್ಕೆ ವಿಪರೀತಿ ಶ್ಲಾಘನೆ ವ್ಯಕ್ತವಾಗೋ ಜೊತೆಗೆ, ಇದುವರೆಗೆ ರೈಲ್ವೆ ಸಚಿವರಿದ್ದಾರೆಂಬುವುದು ಗೊತ್ತಿರಲಿಲ್ಲ ಎಂದೂ ನೆಟ್ಟಿಗರು ಕಾಲೆಳೆದಿದ್ದರು. ವಂದೇ ಭಾರತ್ ರೈಲು ಉದ್ಘಾಟನೆಯಲ್ಲೂ ರೈಲ್ವೆ ಸಚಿವರ ಬದಲು ಮೋದಿಯೇ ಯಾಕಿರುತ್ತಾರೆ ಎಂಬ ಪ್ರಶ್ನೆ ಎದುರಾಗಿತ್ತು. ಯಾಕೆ ಹೀಗೆ?
- ದೇವದತ್ತ ಜೋಶಿ, ಕನ್ನಡ ಪ್ರಭ
ವಂದೇಭಾರತ್.. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸು. ಧಾರವಾಡ-ಬೆಂಗಳೂರು ವಂದೇಭಾರತ್ ರೈಲು ಸೇರಿದಂತೆ 5 ಹೊಸ ರೈಲುಗಳಿಗೆ ಅವರು ಮಂಗಳವಾರ ಭೋಪಾಲ್‌ನಲ್ಲಿ ಏಕಕಾಲಕ್ಕೆ ಚಾಲನೆ ನೀಡಿದರು. 2019ರಲ್ಲಿ ವಂದೇಭಾರತ್ ಸಂಚಾರ ದೇಶದಲ್ಲಿ ಆರಂಭವಾಗಿದ್ದು, ಈವರೆಗೂ 20ಕ್ಕೂ ಹೆಚ್ಚು ವಂದೇಭಾರತ್ ರೈಲುಗಳು ದೇಶದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿವೆ. ಒಂದೇ ಒಂದು ವಂದೇ.. ರೈಲಿನ ಉದ್ಘಾಟನೆಯನ್ನೂ ಮೋದಿ ತಪ್ಪಿಸಿಕೊಂಡಿಲ್ಲ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಒಂದೂ ವಂದೇಭಾರತ್ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಮೋದಿ ಏಕೆ ಹೀಗೆ ಮಾಡುತ್ತಿದ್ದಾರೆ? ಪ್ರಚಾರಕ್ಕೆ ಹೀಗೆ ಮಾಡುತ್ತಿದ್ದಾರಾ? ಎಂಬ ಕುತೂಹಲ ಮೂಡದೇ ಇರದು.
ಈವರೆಗೆ ದೇಶದಲ್ಲಿ ಶತಾಬ್ದಿ, ರಾಜಧಾನಿ, ಗರೀಬ್‌ರಥ, ತುರಂತ್ (ದುರಂತೋ) ಹೆಸರಿನ ಹಲವು ಸೂಪರ್‌ಫಾಸ್ಟ್ ರೈಲುಗಳಿವೆ. ಆದರೆ ಇವುಗಳಿಗಿಂತ ಹೆಚ್ಚು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಇರುವುದು ವಂದೇಭಾರತ್ ರೈಲಿಗೆ. ಇವುಗಳ ಚಿಂತನೆಯ ಕೂಸು ನರೇಂದ್ರ ಮೋದಿ ಅವರು. ವಂದೇಭಾರತ್ ಮೋದಿಗೆ ಎಷ್ಟು ಅಚ್ಚುಮೆಚ್ಚು ಎಂದರೆ ತಮ್ಮ ತಾಯಿ ಹೀರಾಬಾ ನಿಧನರಾದ ದಿನವೂ ಅವರು ಪಶ್ಚಿಮ ಬಂಗಾಳದ ಹೌರಾ-ಜಲಪೈಗುರಿ ವಂದೇ ಭಾರತ್ ರೈಲಿಗೆ ವರ್ಚುವಲ್ ಆಗಿ ಚಾಲನೆ ನೀಡಿದರು. ಎಷ್ಟೇ ತಮ್ಮ ವೈಯಕ್ತಿಕ ಕೆಲಸಗಳಿದ್ದರೂ ಅವನ್ನು ಬದಿಗೊತ್ತಿ ವಂದೇಭಾರತ್ ರೈಲುಗಳ ಉದ್ಘಾಟನೆಗೆ ಮೋದಿ ಬರುತ್ತಾರೆ.
ಬೆಂಗಳೂರು-ಧಾರವಾಡ ‘ವಂದೇ ಭಾರತ್’ ರೈಲಿನ ದರ ಪರಿಷ್ಕರಣೆ, ಹೊಸ ರೇಟ್ ಹೀಗಿದೆ
ಮೋದಿ 2017ರಲ್ಲಿ ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್‌ನಲ್ಲಿ ವಿಲೀನಗೊಳಿಸಿದರು. ಬುಲೆಟ್ ರೈಲನ್ನು ಅವರು ದೇಶಕ್ಕೆ ತರಲು ಯತ್ನ ಆರಂಭಿಸಿದ್ದರೂ, ಅದು ಸಾಕಾರಗೊಳ್ಳುವ ದಿನಗಳು ಇನ್ನೂ ದೂರದಲ್ಲಿವೆ. ಹೀಗಾಗಿ ಮೋದಿ ಅವರಿಗೆ ದೇಶದ ವೇಗದ ರೈಲೊಂದು ತಕ್ಷಣವೇ ಬೇಕು ಎನ್ನಿಸಿತು. ಆ ಕ್ಷಣವೇ ಅವರಿಗೆ ಹೊಳೆದ ಐಡಿಯಾ ಸೆಮಿ ಹೈಸ್ಪೀಡ್ ರೈಲಾದ ‘ವಂದೇಭಾರತ್’ ಎಂಬುದು ಅವರ ಆಪ್ತರ ಅಂಬೋಣ. ಹೀಗಾಗಿ ಗಂಟೆಗೆ 180 ಕಿ.ಮೀ.ವರೆಗೂ ವೇಗದಲ್ಲಿ ಸಾಗಬಲ್ಲ ವಂದೇಭಾರತ್ ರೈಲು 2019ರಲ್ಲಿ ಸಾಕಾರಗೊಂಡಿತು.
ಲಾಲು ಯಾದವ್ ರೈಲು ಮಂತ್ರಿಗಳಾಗಿದ್ದಾಗ ‘ಗರೀಬ್ ರಥ’ ರೈಲು ಸಂಚಾರ 2007ರಲ್ಲಿ ಆರಂಭವಾಯಿತು. ಮಮತಾ ಬ್ಯಾನರ್ಜಿ ರೈಲ್ವೆ ಮಂತ್ರಿಗಳಾಗಿದ್ದಾಗ ‘ತುರಂತ್’ ರೈಲು ಸಂಚಾರವನ್ನು ಆರಂಭಿಸಿದರು. ಆದರೆ ಇದಕ್ಕಿಂತ ಮಹತ್ತರವಾದ ಕೊಡುಗೆಯನ್ನು ರೈಲ್ವೆಗೆ ನೀಡಬೇಕು. ಈ ಮೂಲಕ ರೈಲ್ವೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ (Revolutionaly Change) ನಾಂದಿ ಹಾಡಬೇಕು ಎಂಬ ತುಡಿತ ಮೋದಿ ಅವರಲ್ಲಿತ್ತು. ಅದೀಗ ಸಾಕಾರಗೊಂಡಿದೆ. ಹೀಗಾಗಿ ತಮ್ಮ ನೆಚ್ಚಿನ ವಂದೇಭಾರತ್ ಎಲ್ಲಿ ಆರಂಭವಾಗುತ್ತೋ ಅಲ್ಲಿ ಮೊದಲ ದಿನವೇ ಮೋದಿ ಹಸಿರು ಧ್ವಜ ಹಿಡಿದು ಹಾಜರ್.
ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ, ಕರ್ನಾಟಕದ 2ನೇ ಎಕ್ಸ್‌ಪ್ರೆಸ್ ರೈಲು ಹೆಗ್ಗಳಿಕೆ!
ಅಲ್ಲದೆ, ರಾಜಕೀಯ ಲೆಕ್ಕಾಚಾರಗಳನ್ನು ರಾಜಕಾರಣಿಗಳು ಹಾಕುತ್ತಲೇ ಇರುತ್ತಾರೆ. ಮೋದಿ ಕೂಡ ಇದಕ್ಕೆ ಹೊರತಲ್ಲ ಎನ್ನಬಹುದು. ಮಧ್ಯಪ್ರದೇಶದಲ್ಲಿ ಈ ವರ್ಷಾಂತ್ಯಕ್ಕೆ ಚುನಾವಣೆ ಇದೆ. ಹೀಗಾಗಿ ಈಗಾಗಲೇ ಚುನಾವಣೆ ಮುಗಿದಿರುವ ಅಥವಾ ಚುನಾವಣೆ ಸದ್ಯಕ್ಕಿಲ್ಲದ ರಾಜ್ಯಗಳನ್ನು ಬಿಟ್ಟು ಮೋದಿ ಅವರು ಮಧ್ಯಪ್ರದೇಶವನ್ನೇ ಮಂಗಳವಾರ ‘ವಂದೇ..’ ರೈಲು ಸಂಚಾರ ಆರಂಭಕ್ಕೆ ಆಯ್ಕೆ ಮಾಡಿಕೊಂಡರು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಇತ್ತೀಚೆಗೆ ಅವರು, ಚುನಾವಣೆ ಎದುರಿಸುವ ರಾಜ್ಯವಾದ ರಾಜಸ್ಥಾನಕ್ಕೂ ಹೋಗಿ ವಂದೇಭಾರತ್‌ಗೆ ಚಾಲನೆ ಕೊಟ್ಟರು. ಮೇಲಾಗಿ 2024ರ ಲೋಕಸಭೆ ಚುನಾವಣೆಗೆ ಇನ್ನು 9 ತಿಂಗಳು ಮಾತ್ರ ಬಾಕಿ ಇವೆ. ಹೀಗಾಗಿ ಭಾರತೀಯ ರೈಲ್ವೆಯಲ್ಲಿ ಮಹತ್ತರ ಬದಲಾವಣೆಯೂ ಆಗಬೇಕು. ಜತೆಗೆ ಅದರಿಂದ ತಮಗೆ ಹಾಗೂ ಬಿಜೆಪಿಗೆ ಲಾಭವೂ ಆಗಬೇಕು ಎಂಬ ಲೆಕ್ಕಾಚಾರದಿಂದ ‘ವಂದೇಭಾರತ್’ ಶುರುವಾದಾಗಲೆಲ್ಲ ಮೋದಿ ಹೋಗುತ್ತಾರಂತೆ. ಅದೂ ಅಲ್ಲದೇ ದೇಶವನ್ನು ಒಗ್ಗೂಡಿಸುವ ಹೆಸರಿರುವ ಕಾರಣವೂ ಈ ರೈಲಿನೊಂದಿಗೆ ಮೋದಿಗೆ ವಿಶೇಷ ಅಕ್ಕರೆ ಎಂದು ವಿಶ್ಲೇಷಿಸಲಾಗುತ್ತಿದೆ.