ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸ್ವಲ್ಪವೂ ಬಳಕೆಯಾಗಲ್ಲ ಲೋಹ, ಏನಿದರ ಮರ್ಮ?
ಇಡೀ ರಾಮಮಂದಿರ ನಿರ್ಮಾಣದಲ್ಲಿ ಸ್ವಲ್ಪವೂ ಲೋಹದ ಬಳಕೆಯಾಗಿಲ್ಲ. ಇದರ ಹಿಂದಿರುವ ಕಾರಣವೇನು? ಆಧುನಿಕ ಯುಗದಲ್ಲಿ ಪ್ರತಿ ನಿರ್ಮಾಣಕ್ಕೂ ಬಳಕೆಯಾಗುವ ಕಬ್ಬಿಣ ರಾಮಮಂದಿರ ನಿರ್ಮಾಣದಲ್ಲಿ ಏಕೆ ಬಳಕೆಯಾಗಿಲ್ಲ ಎನ್ನುವ ಮಾಹಿತಿಯನ್ನು ರಾಮ ಮಂದಿರ ನಿರ್ಮಾಣ ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ನೀಡಿದ್ದಾರೆ.
ಅಯೋಧ್ಯೆ (ಮೇ.1): ಕೋಟ್ಯಾಂತರ ಹಿಂದೂಗಳ (Dream Of Hindus) ಕನಸು, ಶ್ರೀರಾಮನ ಕರ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ (Ram Mandir) ಪೂರ್ಣಗೊಳ್ಳುವ ಸಮಯ ನಿಗದಿಯಾಗಿದೆ. 2023 ಡಿಸೆಂಬರ್ ಒಳಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ಗರ್ಭಗುಡಿ (Ram Mandir Garbha Gudi) ನಿರ್ಮಾಣ ಪೂರ್ಣವಾಗಲಿದೆ. ರಾಮ ಮಂದಿರ ನಿರ್ಮಾಣ ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ (Ram Mandir Construction Committee Chairman Nripendra Mishra) ಏಷ್ಯಾನೆಟ್ ನ್ಯೂಸ್ ನೆಟ್ ವರ್ಕ್ ಗೆ (Asianet News) ಈ ಮಾಹಿತಿ ನೀಡಿದ್ದಾರೆ.
ಮಂದಿರ ನಿರ್ಮಾಣದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಅಂಶವೆಂದರೆ ಲೋಹವನ್ನು (Metals) ಬಳಸದೇ ಇರುವುದು. ಸಾಮಾನ್ಯವಾಗಿ ಬುನಾದಿಯಿಂದ ಹಿಡಿದು ಪ್ರತಿಯೊಂದಕ್ಕೇ ಲೋಹ ಬಳಕೆಯಾಗುತ್ತದೆ. ಆದರೆ ರಾಮಮಂದಿರ ನಿರ್ಮಾಣಕ್ಕೆ ಒಂದು ಚೂರೂ ಲೋಹವನ್ನು ಬಳಕೆ ಮಾಡುವುದಿಲ್ಲ ಹಾಗೂ ಮಾಡಿಲ್ಲ ಎಂದು ನೃಪೇಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ. ಹಾಗಾದರೆ ಇದರ ಹಿಂದಿನ ಗುಟ್ಟೇನು? ಕಬ್ಬಿಣ (Iron) ಬಳಕೆ ಮಾಡದಿರಲು ಕಾರಣವೇನು? ಇವೆಲ್ಲಕ್ಕೂ ಸಂದರ್ಶನದಲ್ಲಿ ನೃಪೇಂದ್ರ ಮಿಶ್ರಾ ಉತ್ತರಿಸಿದ್ದಾರೆ.
"
'ಇಲ್ಲಿ ಮಾಡುತ್ತಿರುವ ಕಾಮಗಾರಿಯಲ್ಲಿ ಎಲ್ಲಿಯೂ ಲೋಹದ ಬಳಕೆ ಇಲ್ಲ. ಲೋಹ ಯಾಕಿಲ್ಲ ಅಂದ್ರೆ, ಎರಡು ಕಾರಣಗಳಿವೆ. ಒಂದು ಹಳೇ ಕಾಲದ ದೇಗುಲಗಳನ್ನು ಯಾವುದೇ ಲೋಹ ಬಳಸಿ ಕಟ್ಟಿರಲಿಲ್ಲ. ಹಾಗಾಗಿ ನಾವು ಬಳಕೆ ಮಾಡುತ್ತಿಲ್ಲ. ನಾವು ಮಂದಿರವನ್ನು ಲೋಹವಿಲ್ಲದೇ ಕಟ್ಟುತ್ತಿದ್ದೇವೆ. ಇದು ಸಂಪೂರ್ಣವಾಗಿ ಕಾಂಕ್ರೀಟ್ ನಿಂದ ನಿರ್ಮಿಸಲಾಗುತ್ತಿದೆ. ಇದಕ್ಕೆ ಸಿಸಿಆರ್ ಎನ್ನಲಾಗುತ್ತದೆ' ಎಂದರು.
ಜತೆಗೆ ಇದರ ಮುಖ್ಯ ಉದ್ದೇಶವೆಂದರೆ ಸಾವಿರ ವರ್ಷಕ್ಕೂ ಅಧಿಕ ಕಾಲ ಬಾಳಿಕೆ ಬರಬೇಕು ಎಂಬುದು. ಹಳೆ ತಲೆಮಾರಿನ ದೇವಸ್ಥಾನಗಳನ್ನು ನೀವು ಗಮನಿಸಿರಬಹುದು. ಅದರಲ್ಲಿ ಯಾವ ಲೋಹವನ್ನೂ ಬಳಸಿಲ್ಲ. ಆ ಕಾಲಕ್ಕೆ ಸಿಮೆಂಟ್ ಕೂಡ ಇರಲಿಲ್ಲ. ಸುಣ್ಣವನ್ನೇ ಸಿಮೆಂಟ್ ರೀತಿಯಲ್ಲಿ ಬಳಕೆ ಮಾಡಲಾಗುತ್ತಿತ್ತು. ಆದರೂ ಸಾವಿರಾರು ವರ್ಷಗಳ ಕಾಲ ದೇವಸ್ಥಾನಗಳು ಶಿಥಿಲವಾಗದೇ ಸದಾ ಕಂಗೊಳಿಸುತ್ತಿವೆ. ಇದೇ ವಿಜ್ಞಾನವನ್ನು ರಾಮಮಂದಿರ ನಿರ್ಮಾಣಕ್ಕೂ ಬಳಸಲಾಗುತ್ತಿದೆ. ಇದರಿಂದ ದೇವಸ್ಥಾನ ಕನಿಷ್ಠ ಸಾವಿರ ವರ್ಷ ಗಟ್ಟಿಮುಟ್ಟಾಗಿರುತ್ತದೆ ಎನ್ನುತ್ತಾರೆ ನೃಪೇಂದ್ರ ಮಿಶ್ರಾ.
Hanuman Birthplace: ಅಯೋಧ್ಯೆ, ರಾಮಮಂದಿರ ಬಳಿಕ ಅಂಜನಾದ್ರಿ ಅಭಿವೃದ್ಧಿ: ಸಿಎಂ ಬೊಮ್ಮಾಯಿ
ಮಳೆಗೂ ಜಗ್ಗಲ್ಲ, ಭೂಕಂಪಕ್ಕೂ ಬಗ್ಗಲ್ಲ: ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಮತ್ತೊಂದು ವಿಶೇಷತೆ ಏನೆಂದರೆ ಇದು ಯಾವ ಸುನಾಮಿ, ಬಿಸಿಲು ಅಥವಾ ಭೂಕಂಪಕ್ಕೂ ಬಗ್ಗುವುದಿಲ್ಲ. ಎಂತಾ ದೊಡ್ಡ ಪ್ರಕೃತಿ ವಿಕೋಪವಾದರೂ ಅದನ್ನೆಲ್ಲಾ ಹಿಮ್ಮೆಟ್ಟಿಸುವ ಶಕ್ತಿ ಮಂದಿರಕ್ಕಿರಲಿದೆ. ಇದರ ಬಗ್ಗೆ ಮಾತನಾಡಿದ ಮಿಶ್ರಾ ಅವರು, 'ನಾವು ಅಧ್ಯಯನ ಮಾಡಿದಂತೆ ನೇಪಾಳ ಹಾಗೂ ಐನೂರು ಕಿಲೋ ಮೀಟರ್ ದೂರದಿಂದಲೂ ದಾಖಲೆಗಳನ್ನು ತರಿಸಿ ಅಧ್ಯಯನ ಮಾಡಿದ್ದೇವೆ. ಕನಿಷ್ಠ ಅಥವಾ ಗರಿಷ್ಠ ಏನಾಗಲಿ ಈ ಹಿಂದೆ ಇತಿಹಾಸದಲ್ಲಿ ಆಗಿರೋ ಭೂಕಂಪಗಳನ್ನು ನೋಡಿದ್ರೆ, ಇದು ಅದಕ್ಕಿಂತ ಗಟ್ಟಿಯಾಗಿ ನಿಲ್ಲುವ ಸಾಮ್ಯರ್ಥವಿದೆ. ಮೂರು ಲೇಯರ್ ಗಳನ್ನು ಹಾಕಿದ್ದೇವೆ. ನಾವು ಒಟ್ಟು ಏಳು ಲೇಯರ್ ಗಳನ್ನು ಹಾಕಬೇಕಿದೆ. ಅದರ ಮೇಲೆ ರಾಜಸ್ಥಾನ ಮೂಲದ ಕಲ್ಲು ಇದೆ ಅದನ್ನು ಹಾಕಬೇಕು. ಅದಾದ ಮೇಲೆ ಗರ್ಭಗುಡಿಯ ಕೆಲಸ ಕಾರ್ಯಗಳು ಆರಂಭವಾಗುತ್ತದೆ' ಎಂದರು.
Udupi: ಅಯೋಧ್ಯಾ ರಾಮಮಂದಿರ-2024 ಜನವರಿಯಿಂದ ಪ್ರತಿಷ್ಠಾ ಕಾರ್ಯ: ಪೇಜಾವರ ಶ್ರೀ
ಕೋಟ್ಯಂತರ ಹಿಂದೂಗಳ ಆಶಯದಂತೆ ರಾಮಮಂದಿರ ನಿರ್ಮಾಣವಾಗುತ್ತಿದೆ. ಜತೆಗೆ ಮುಂದಿನ ವರ್ಷ ಡಿಸೆಂಬರ್ ವೇಳೆಗೆಲ್ಲಾ ಗರ್ಭಗುಡಿ ಕೆಲಸ ಮುಕ್ತಾಯವಾಗಲಿದ್ದು, ರಾಮನ ವಿಗ್ರಹವನ್ನು ತಾತ್ಕಾಲಿಕ ಜಾಗದಿಂದ ಗರ್ಭಗುಡಿಗೆ ಸ್ಥಳಾಂತರಿಸಲಾಗುವುದು. ಅದಾದ ಬಳಿಕ, 2024ರ ಡಿಸೆಂಬರ್‌ನಲ್ಲಿ ರಾಮಮಂದಿರ ಸಂಪೂರ್ಣವಾಗಿ ನಿರ್ಮಾಣವಾಗಲಿದೆ. ನಂತರ ಮಂದಿರವನ್ನು ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.