Asianet Suvarna News Asianet Suvarna News

ಭಾರತ, ಚೀನಾ ಗಡಿ ಸಂಘರ್ಷ ಶಮನಕ್ಕೆ ಪಂಚಸೂತ್ರ!

ಗಡಿ ಸಂಘರ್ಷ ಶಮನಕ್ಕೆ ಪಂಚಸೂತ್ರ| ರಷ್ಯಾದಲ್ಲಿ ಭಾರತ, ಚೀನಾ ವಿದೇಶ ಸಚಿವರ ಸಮ್ಮತಿ| ತಕ್ಷಣವೇ ಸೇನಾಪಡೆಗಳ ಹಿಂತೆಗೆತಕ್ಕೆ ಪರಸ್ಪರ ಒಪ್ಪಿಗೆ| ಸೇನೆ ಜಮಾವಣೆ ಮಾಡಿದ ಚೀನಾಕ್ಕೆ ಭಾರತ ತಪರಾಕಿ

Ready to take conciliatory steps must pull back troops gear from LAC
Author
Bangalore, First Published Sep 12, 2020, 10:55 AM IST

ನವದೆಹಲಿ(ಸೆ.12): ಪೂರ್ವ ಲಡಾಖ್‌ ಗಡಿಯಲ್ಲಿ ಕಳೆದ 4 ತಿಂಗಳಿನಿಂದ ಸೃಷ್ಟಿಯಾಗಿರುವ ತ್ವೇಷಮಯ ಪರಿಸ್ಥಿತಿಯ ಶಮನಕ್ಕೆ ಭಾರತ ಹಾಗೂ ಚೀನಾ ಪಂಚಸೂತ್ರಗಳಿಗೆ ಪರಸ್ಪರ ಒಪ್ಪಿಗೆ ಸೂಚಿಸಿವೆ. ಹೀಗಾಗಿ ಉಭಯ ದೇಶಗಳ ನಡುವೆ ಯುದ್ಧ ರೀತಿಯ ಸನ್ನಿವೇಶ ಸೃಷ್ಟಿಸಿರುವ ಬಿಕ್ಕಟ್ಟು ಸದ್ಯದಲ್ಲೇ ನಿವಾರಣೆಯಾಗಲಿದೆಯಾ ಎಂಬ ಕುತೂಹಲ ಮೂಡಿದೆ.

ಗಡಿಯಿಂದ ಕ್ಷಿಪ್ರವಾಗಿ ಸೇನಾ ಪಡೆಗಳ ಹಿಂತೆಗೆತ, ಸಂಘರ್ಷ ಹೆಚ್ಚಳಕ್ಕೆ ಕಾರಣವಾಗುವ ಚಟುವಟಿಕೆಗಳಿಗೆ ಕಡಿವಾಣ, ಯೋಧರು ಪರಸ್ಪರ ಸೂಕ್ತ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು, ಉಭಯ ದೇಶಗಳ ನಡುವೆ ಏರ್ಪಟ್ಟಿರುವ ಎಲ್ಲ ಒಪ್ಪಂದಗಳಿಗೆ ಬದ್ಧವಾಗಿರುವುದು ಹಾಗೂ ಗಡಿ ವಿಚಾರ ಸಂಬಂಧ ಮಾತುಕತೆಯನ್ನು ಮುಂದುವರಿಸಿಕೊಂಡು ಹೋಗುವುದು ಈ ಐದು ಸೂತ್ರಗಳಾಗಿವೆ.

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹಾಗೂ ಚೀನಾ ವಿದೇಶಾಂಗ ಮಂತ್ರಿ ವಾಂಗ್‌ ಯಿ ನಡುವೆ ಗುರುವಾರ ಸಂಜೆ ಸುಮಾರು ಎರಡೂವರೆ ತಾಸುಗಳ ಕಾಲ ಗಡಿ ವಿಚಾರ ಕುರಿತು ಮಾತುಕತೆ ನಡೆದಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹಾಗೂ ಚೀನಾ ರಕ್ಷಣಾ ಮಂತ್ರಿ ಜನರಲ್‌ ವಿ ಫೆಂಗೆ ನಡುವಣ ಸಮಾಲೋಚನೆ ಬಳಿಕ ನಡೆದ ಎರಡನೇ ಅತ್ಯುನ್ನತ ರಾಜಕೀಯ ಮಾತುಕತೆ ಇದಾಗಿದೆ. ಸದ್ಯದ ಗಡಿ ಸಂಘರ್ಷದಿಂದ ಎರಡೂ ದೇಶಗಳಿಗೂ ಹಿತವಿಲ್ಲ ಎಂಬ ನಿಲುವಿಗೆ ಬರಲಾಗಿದೆ.

ಪಂಚಸೂತ್ರಗಳು

1. ಗಡಿಯಿಂದ ಕೂಡಲೇ ಸೇನಾ ಪಡೆಗಳ ಹಿಂತೆಗೆತ

2. ಸಂಘರ್ಷಕ್ಕೆ ಹೆಚ್ಚಿಸುವ ಚಟುವಟಿಕೆಗೆ ಕಡಿವಾಣ

3. ಯೋಧರು ಪರಸ್ಪರ ಸೂಕ್ತ ಅಂತರ ಕಾಯ್ದುಕೊಳ್ಳುವುದು

4. ಹಾಲಿ ಇರುವ ಎಲ್ಲ ಒಪ್ಪಂದಗಳಿಗೆ ಬದ್ಧವಾಗಿರುವುದು

5. ಗಡಿ ವಿಚಾರ ಸಂಬಂಧ ಮಾತುಕತೆ ಮುಂದುವರಿಸುವುದು

ಗಡಿ ಕ್ಯಾತೆಗೆ ಭಾರತ ಪ್ರಬಲ ಆಕ್ಷೇಪ

ಈ ವೇಳೆ, ಗಡಿಯಲ್ಲಿ ಚೀನಾ ತೋರುತ್ತಿರುವ ಆಕ್ರಮಣಕಾರಿ ವರ್ತನೆ ವಿರುದ್ಧ ಭಾರತ ಅತ್ಯಂತ ಪ್ರಬಲವಾಗಿ ದನಿ ಎತ್ತಿದೆ. ನೈಜ ಗಡಿ ರೇಖೆ (ಎಲ್‌ಎಸಿ) ಉದ್ದಕ್ಕೂ ಚೀನಾ ಭಾರಿ ಸಂಖ್ಯೆಯಲ್ಲಿ ಯೋಧರು ಹಾಗೂ ಸಲಕರಣೆಗಳನ್ನು ಜಮಾವಣೆ ಮಾಡಿದೆ. ಇದು ಕಳವಳಕಾರಿ ಬೆಳವಣಿಗೆ ಆಗಿದೆ ಎಂದು ಭಾರತ ಆಕ್ಷೇಪ ಎತ್ತಿದೆ. ಇದಕ್ಕೆ ಚೀನಾ ಅತ್ಯಂತ ಸೂಕ್ತ ವಿವರಣೆ ನೀಡಲು ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿ ಚೀನಾ ತನ್ನ ಯೋಧರನ್ನು ಭಾರಿ ಸಂಖ್ಯೆಯಲ್ಲಿ ಜಮಾವಣೆ ಮಾಡಿರುವುದು 1993 ಹಾಗೂ 1996ರಲ್ಲಿ ಗಡಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳು ಮಾಡಿಕೊಂಡಿರುವ ಒಪ್ಪಂದಕ್ಕೆ ವಿರುದ್ಧವಾಗಿದೆ. ಗಡಿಯಲ್ಲಿನ ಸಂಘರ್ಷದ ಸ್ಥಳಗಳಲ್ಲಿ ಚೀನಾ ಪ್ರಚೋದನಕಾರಿ ನಡವಳಿಕೆ ತೋರಿದೆ. ಇದು ದ್ವಿಪಕ್ಷೀಯ ಒಪ್ಪಂದ ಹಾಗೂ ಶಿಷ್ಟಾಚಾರಗಳಿಗೆ ಚೀನಾ ಅಗೌರವ ತೋರಿರುವುದನ್ನು ನಿರೂಪಿಸಿದೆ. ಹೀಗಾಗಿ ಗಡಿ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದಗಳಿಗೆ ಚೀನಾ ಸಂಪೂರ್ಣ ಬದ್ಧವಾಗಿರಬೇಕು ಎಂಬುದನ್ನು ಭಾರತ ನಿರೀಕ್ಷೆ ಮಾಡುತ್ತದೆ. ಗಡಿಯಲ್ಲಿನ ಯಥಾಸ್ಥಿತಿ ಬದಲಿಸುವ ಯಾವುದೇ ಪ್ರಯತ್ನಗಳಿಗೆ ಸಮ್ಮತಿ ಇರುವುದಿಲ್ಲ ಎಂದು ತೀಕ್ಷ$್ಣವಾಗಿ ಹೇಳಿದೆ. ಗಡಿ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಒಪ್ಪಂದಗಳನ್ನು ಭಾರತೀಯ ಪಡೆಗಳು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿವೆ ಎಂದು ತಿಳಿಸಿದೆ.

ಉಭಯ ದೇಶಗಳ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಪೂರ್ವ ಲಡಾಖ್‌ನಲ್ಲಿ ನಡೆದ ಬೆಳವಣಿಗೆಗಳು ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪರಿಣಾಮ ಬೀರಿವೆ. ಉಭಯ ದೇಶಗಳ ಹಿತದೃಷ್ಟಿಯಿಂದ ಈ ಪರಿಸ್ಥಿತಿಗೆ ತುರ್ತು ಪರಿಹಾರದ ಅವಶ್ಯಕತೆ ಇದೆ ಎಂದು ಜೈಶಂಕರ್‌ ತಿಳಿಸಿದ್ದಾರೆ.

ಇದೇ ವೇಳೆ, ಭಾರತ ಹಾಗೂ ಚೀನಾ ಎರಡು ಬೃಹತ್‌ ನೆರೆಹೊರೆಯ ದೇಶಗಳು. ಎರಡೂ ರಾಷ್ಟ್ರಗಳ ಮಧ್ಯೆ ಭಿನ್ನಾಭಿಪ್ರಾಯ ಸಹಜ. ಆದರೆ ದ್ವಿಪಕ್ಷೀಯ ಬಾಂಧವ್ಯಕ್ಕಾಗಿ ಅದನ್ನು ಬದಿಗೊತ್ತುವುದು ಮುಖ್ಯವಾಗಿದೆ. ಎರಡೂ ದೇಶಗಳು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿವೆ. ಭಾರತ ಹಾಗೂ ಚೀನಾಕ್ಕೆ ಈಗ ಸಹಕಾರ ಬೇಕೆ ಹೊರತು, ಸಂಘರ್ಷವಲ್ಲ. ಪರಸ್ಪರ ನಂಬಿಕೆಯೇ ಹೊರತು ಅಪನಂಬಿಕೆ ಅಲ್ಲ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್‌ ತಿಳಿಸಿದ್ದಾರೆ.

ದ್ವಿಪಕ್ಷೀಯ ಸಂಬಂಧ ಮುಂದುವರಿಕೆಗೆ ಗಡಿಯಲ್ಲಿ ಶಾಂತಿ ಅತ್ಯವಶ್ಯ. ಗಡಿ ಸಂಘರ್ಷದಿಂದ ಎರಡೂ ದೇಶಗಳ ಬಾಂಧವ್ಯಕ್ಕೆ ಧಕ್ಕೆಯಾಗಿದೆ. ಉಭಯ ದೇಶಗಳ ಹಿತಾಸಕ್ತಿಯಿಂದ ಸಂಘರ್ಷಕ್ಕೆ ತುರ್ತು ಪರಿಹಾರ ಅಗತ್ಯ.

- ಎಸ್‌. ಜೈಶಂಕರ್‌, ಭಾರತದ ವಿದೇಶಾಂಗ ಸಚಿವ

ಭಾರತ ಹಾಗೂ ಚೀನಾ ನೆರೆಹೊರೆಯಲ್ಲಿರುವ ಬೃಹತ್‌ ದೇಶಗಳು. ಹೀಗಾಗಿ ಭಿನ್ನಾಭಿಪ್ರಾಯ ಸರ್ವೇಸಾಮಾನ್ಯ. ಎರಡೂ ದೇಶಗಳಿಗೆ ಈ ಸಹಕಾರ ಬೇಕೆ ಹೊರತು ಸಂಘರ್ಷವಲ್ಲ. ಪರಸ್ಪರ ನಂಬಿಕೆ ಬೇಕೆ ಹೊರತು ಅಪನಂಬಿಕೆ ಅಲ್ಲ.

- ವಾಂಗ್‌ ಯಿ, ಚೀನಾ ವಿದೇಶಾಂಗ ಮಂತ್ರಿ

Follow Us:
Download App:
  • android
  • ios