ಮರು ಅಂಗೀಕೃತ ವಿಧೇಯಕ ರಾಷ್ಟ್ರಪತಿಗೆ ಕಳಿಸಬೇಕಿಲ್ಲ: ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಚಾಟಿ
ರಾಜ್ಯಪಾಲ ರವಿ ಅವರು ವಿಧಾನಸಭೆ ಕಳುಹಿಸಿದ್ದ ಹಲವು ವಿಧೇಯಕಗಳಿಗೆ ಸುದೀರ್ಘ ಅವಧಿಗೆ ಸಹಿ ಹಾಕಿರಲಿಲ್ಲ. ಬಳಿಕ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಅದಾದ ಬಳಿಕ ಸರ್ಕಾರ ಮರು ಅಂಗೀಕರಿಸಿತ್ತು. ಇದೀಗ ರಾಜ್ಯಪಾಲರು 10 ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ ಎಂದು ತಮಿಳುನಾಡು ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಪೀಠದ ಗಮನಕ್ಕೆ ತಂದರು.
ನವದೆಹಲಿ (ಡಿಸೆಂಬರ್ 2, 2023): ವಿಧಾನಸಭೆಯಲ್ಲಿ ಪಾಸಾಗಿರುವ ಹಾಗೂ ಮರು ಅಂಗೀಕಾರವಾಗಿರುವ ಮಸೂದೆಗಳನ್ನು ಯಾವುದೇ ರಾಜ್ಯದ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದೇ ವೇಳೆ, 10 ಮರು ಅಂಗೀಕೃತ ವಿಧೇಯಕಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಚಾಟಿ ಬೀಸಿರುವ ಸರ್ವೋಚ್ಚ ನ್ಯಾಯಾಲಯ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಜತೆ ಕೂತು ವಿವಾದ ಬಗೆಹರಿಸಿಕೊಳ್ಳುವಂತೆ ತಾಕೀತು ಮಾಡಿದೆ.
ರಾಜ್ಯಪಾಲ ರವಿ ಅವರು ವಿಧಾನಸಭೆ ಕಳುಹಿಸಿದ್ದ ಹಲವು ವಿಧೇಯಕಗಳಿಗೆ ಸುದೀರ್ಘ ಅವಧಿಗೆ ಸಹಿ ಹಾಕಿರಲಿಲ್ಲ. ಬಳಿಕ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಅದಾದ ಬಳಿಕ ಸರ್ಕಾರ ಮರು ಅಂಗೀಕರಿಸಿತ್ತು. ಇದೀಗ ರಾಜ್ಯಪಾಲರು 10 ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ ಎಂದು ತಮಿಳುನಾಡು ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಪೀಠದ ಗಮನಕ್ಕೆ ತಂದರು. ರಾಜ್ಯಪಾಲರ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ವೆಂಕಟರಮಣಿ ಅವರು ಅದನ್ನು ಸಮರ್ಥಿಸಿಕೊಂಡರು.
ಇದನ್ನು ಓದಿ: 3 ವರ್ಷ ತಮಿಳ್ನಾಡು ಗೌರ್ನರ್ ಏನು ಮಾಡ್ತಿದ್ದರು: ಸುಪ್ರೀಂ ಕಿಡಿ; ಮಸೂದೆಗಳಿಗೆ ಅಂಕಿತ ಹಾಕದ ಕ್ರಮಕ್ಕೆ ಆಕ್ಷೇಪ
‘ಮಸೂದೆ ಬಂದಾಗಲೇ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗಾಗಿ ಮೀಸಲಿಡಬೇಕಾಗಿತ್ತು. ಒಂದು ವೇಳೆ ಅವರು ವಿಧಾನಸಭೆಗೆ ವಾಪಸ್ ಕಳುಹಿಸಿದ್ದರೆ, ವಿಧಾನಸಭೆಯಿಂದ ಮರು ಅಂಗೀಕಾರವಾಗಿ ಬಂದಿದ್ದರೆ, ಅಂತಹ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸುವಂತಿಲ್ಲ. ಸಂವಿಧಾನದ 200ನೇ ಪರಿಚ್ಛೇದದ ಪ್ರಕಾರ, ರಾಜ್ಯಪಾಲರಿಗೆ ಈ ವಿಚಾರದಲ್ಲಿ ಮೂರು ಆಯ್ಕೆಗಳು ಮಾತ್ರವೇ ಇರುತ್ತವೆ. ಒಂದೋ ಅವರು ಸಹಿ ಹಾಕಬೇಕು. ಇಲ್ಲವೇ ಸಹಿ ಹಾಕದೆ ಇರಬೇಕು ಅಥವಾ ರಾಷ್ಟ್ರಪತಿಗಳ ಪರಿಶೀಲನೆಗೆ ಇಡಬೇಕು. ಇವೆಲ್ಲಾ ಪರ್ಯಾಯ ದಾರಿಗಳು. ಈ ಪ್ರಕರಣದಲ್ಲಿ ರಾಜ್ಯಪಾಲರು ಆರಂಭಿಕವಾಗಿ ಸಹಿ ಹಾಕಿಲ್ಲ. ಅವರು ಹಾಗೆ ಮಾಡಿದ ಬಳಿಕ ಅಂತಹ ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಲು ಬರುವುದಿಲ್ಲ. ಮೂರರ ಪೈಕಿ ಒಂದು ಆಯ್ಕೆಯನ್ನಷ್ಟೇ ಬಳಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಹೇಳಿದರು.
ಹೀಗಾಗಿ ರಾಜ್ಯಪಾಲರು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಬಿಕ್ಕಟ್ಟು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಸರ್ಕಾರ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಅಂಗೀಕರಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ ಮೊರೆ ಹೋಗಿದೆ. ಅದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ರೀತಿ ಹೇಳಿದೆ.
ಕೇಂದ್ರಕ್ಕೆ ಇಂದು ಸುಪ್ರೀಂ ಪರೀಕ್ಷೆ: ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆ