Asianet Suvarna News Asianet Suvarna News

2000 ಇಸವಿಯಲ್ಲೇ ಕನಿಷ್ಠಕ್ಕೆ ಇಳಿದ ರೆಪೋ ದರ: ಗೃಹ, ವಾಹನ ಸೇರಿ ಹಲವು ಸಾಲಗಳ ಬಡ್ಡಿ ದರ ಇಳಿಕೆ

ಕೊರೋನಾ ವೈರಸ್‌ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದೇಶದ ಆರ್ಥಿಕತೆಗೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಮತ್ತೊಮ್ಮೆ ಟಾನಿಕ್‌ ನೀಡಿದೆ.

RBI cut the repo rate by 40 basis points
Author
Bangalore, First Published May 23, 2020, 9:05 AM IST
  • Facebook
  • Twitter
  • Whatsapp

ಮುಂಬೈ(ಮೇ 23): ಕೊರೋನಾ ವೈರಸ್‌ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದೇಶದ ಆರ್ಥಿಕತೆಗೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಮತ್ತೊಮ್ಮೆ ಟಾನಿಕ್‌ ನೀಡಿದೆ.

ಶುಕ್ರವಾರ ಇಲ್ಲಿ ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಬಡ್ಡಿ ದರ ಇಳಿಕೆ, ಸಾಲಗಾರರಿಗೆ ಸಾಲದ ಕಂತು ಪಾವತಿಯಿಂದ ಇನ್ನೂ 3 ತಿಂಗಳು ಹೆಚ್ಚುವರಿ ವಿನಾಯ್ತಿ, ಕಾರ್ಪೊರೆಟ್‌ ಕಂಪನಿಗಳು ಮತ್ತು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಸಾಲ ಒದಗಿಸುವುದು ಸೇರಿದಂತೆ ಹಲವು ನಿರ್ಧಾರ ಪ್ರಕಟಿಸಿದೆ.

ಬಡ್ಡಿ, ಠೇವಣಿ ದರ ಇಳಿಕೆ:

ಆರ್‌ಬಿಐ ರೆಪೋ ದರವನ್ನು ಶೇ.0.4ರಷ್ಟುಇಳಿಸಿ ಶೇ.4ಕ್ಕೆ ನಿಗದಿಪಡಿಸಿದೆ. ಇದು 2000ನೇ ಇಸ್ವಿಯ ನಂತರ ಅತ್ಯಂತ ಕನಿಷ್ಠ ದರವಾಗಿದೆ. ಅದೇ ರೀತಿ, ರಿವರ್ಸ್‌ ರೆಪೋ ದರವನ್ನೂ ಶೇ.3.75ರಿಂದ ಶೇ.3.35ಕ್ಕೆ ಇಳಿಸಿದೆ. ಇದರ ಪರಿಣಾಮ ಗೃಹ, ವಾಹನ ಇತ್ಯಾದಿ ಸಾಲಗಳ ಮೇಲಿನ ಬಡ್ಡಿ ದರ ಮತ್ತು ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ.

ಇಎಂಐ ವಿನಾಯ್ತಿ ವಿಸ್ತರಣೆ:

ಸಾಲದ ಕಂತು (ಇಎಂಐ) ಪಾವತಿಸುವುದಕ್ಕೆ ಸಾಲಗಾರರಿಗೆ ಈ ಹಿಂದೆ ನೀಡಿದ್ದ 3 ತಿಂಗಳ ವಿನಾಯ್ತಿಯನ್ನು ಆರ್‌ಬಿಐ ಇನ್ನೂ 3 ತಿಂಗಳು, ಅಂದರೆ ಜೂ.1ರಿಂದ ಆ.31ರವರೆಗೆ ವಿಸ್ತರಿಸಿದೆ. ಹೀಗಾಗಿ ಹಣದ ಕೊರತೆಯಿರುವವರು ಇನ್ನೂ 3 ತಿಂಗಳು ಸಾಲ ಮರುಪಾವತಿ ಮಾಡುವ ಅಗತ್ಯವಿಲ್ಲ. ಜೊತೆಗೆ 6 ತಿಂಗಳ ವಿನಾಯ್ತಿ ಅವಧಿಗೆ ಗ್ರಾಹಕರಿಗೆ ಹೊರೆಯಾಗುವ ಹೆಚ್ಚುವರಿ ಬಡ್ಡಿಯನ್ನು ಸಾಲಕ್ಕೆ ಪರಿವರ್ತಿಸಿಕೊಳ್ಳುವ ಅವಕಾಶವನ್ನೂ ಆರ್‌ಬಿಐ ನೀಡಿದ್ದು, ಈ ಮೊತ್ತಕ್ಕೆ ಹೊಸ ಸಾಲ ಪಡೆಯಬಹುದಾಗಿದೆ.

ಹೆಚ್ಚಿನ ಸಾಲ:

ಆಮದು ಮತ್ತು ರಫ್ತು ವ್ಯವಹಾರ ನಡೆಸುವವರಿಗೆ ನೀಡುವ ಸಾಲದ ಅವಧಿಯನ್ನು 1 ವರ್ಷದಿಂದ 15 ತಿಂಗಳಿಗೆ ಏರಿಕೆ ಮಾಡಿದೆ. ಜೊತೆಗೆ, ಬ್ಯಾಂಕುಗಳು ಕಾರ್ಪೊರೇಟ್‌ ಕಂಪನಿಗಳಿಗೆ ಸಾಲ ನೀಡಲು ವಿಧಿಸಿದ್ದ ಮಿತಿಯನ್ನು ಶೇ.25ರಿಂದ ಶೇ.30ಕ್ಕೆ ಏರಿಸಿದೆ. ಅಂದರೆ, ಬ್ಯಾಂಕುಗಳು ಇನ್ನುಮುಂದೆ ಕಾರ್ಪೊರೇಟ್‌ ಕಂಪನಿಗಳ ಒಟ್ಟು ಆಸ್ತಿಯ ಶೇ.30ರಷ್ಟುಸಾಲವನ್ನು ಅವುಗಳಿಗೆ ನೀಡಬಹುದು.

ರಾಜ್ಯಗಳಿಗೆ ಇನ್ನಷ್ಟುಹಣ ಡ್ರಾ ಮಾಡಲು ಅವಕಾಶ

ಸಂಕಷ್ಟದಲ್ಲಿರುವ ರಾಜ್ಯಗಳಿಗೆ ಸಂಚಿತ ಋುಣ ಪರಿಹಾರ ನಿಧಿ (ಸಿಎಸ್‌ಎಫ್‌)ಯಿಂದ ಒಟ್ಟು 13,300 ಕೋಟಿ ರು. ಹಣ ಹಿಂಪಡೆಯಲು ಆರ್‌ಬಿಐ ಅವಕಾಶ ನೀಡಿದೆ. ಹೀಗಾಗಿ, ರಾಜ್ಯಗಳು ಆರ್‌ಬಿಐನಲ್ಲಿ ಆಪತ್ಕಾಲಕ್ಕೆ ಬೇಕಾಗುತ್ತದೆ ಎಂಬ ಕಾರಣಕ್ಕೆ ಇರಿಸಿದ್ದ ಹೆಚ್ಚುವರಿ ಹಣವನ್ನು ಡ್ರಾ ಮಾಡಲು ಅವಕಾಶ ಸಿಗಲಿದೆ. ಇದಕ್ಕೆ ಬೇಕಾದ ನಿಯಮಗಳನ್ನು ಆರ್‌ಬಿಐ ಸಡಿಲಿಸಿದೆ. ಸಾಲದ ಬಡ್ಡಿ ಪಾವತಿಸಲು ರಾಜ್ಯಗಳು ಈ ಹಣ ಬಳಸಿಕೊಳ್ಳಬಹುದಾಗಿದೆ.

ಲಾಕ್‌ಡೌನ್: 70 ಲಕ್ಷ ಕೇಸ್‌, 2.1 ಲಕ್ಷ ಸಾವಿನಿಂದ ಭಾರತ ಬಚಾವ್..‌!

ದೇಶದಲ್ಲಿ ಆರ್ಥಿಕ ಸ್ಥಿರತೆ ಕಾಪಾಡುವುದು ನಮ್ಮ ಮುಖ್ಯ ಗುರಿ. ಇದಕ್ಕೆ ಏನು ಬೇಕೋ ಎಲ್ಲವನ್ನೂ ಮಾಡುತ್ತೇವೆ. ಮಾರುಕಟ್ಟೆಯಲ್ಲಿ ಹಣ ಹರಿಯುತ್ತಿರಬೇಕು. ಅಗತ್ಯವಿರುವವರ ಕೈಗೆ ಹಣ ಸಿಗಬೇಕು. ಆರ್‌ಬಿಐ ಇನ್ನುಮುಂದೆಯೂ ಇದೇ ರೀತಿ ಯುದ್ಧಸನ್ನದ್ಧ ಸ್ಥಿತಿಯಲ್ಲಿರುತ್ತದೆ. ಅನಿಶ್ಚಿತ ಭವಿಷ್ಯದಲ್ಲಿ ಬಂದೆರಗುವ ಎಲ್ಲ ಸವಾಲುಗಳನ್ನೂ ಎದುರಿಸುತ್ತೇವೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

Follow Us:
Download App:
  • android
  • ios