Asianet Suvarna News Asianet Suvarna News

ತನಿಖೆಗೆ ತೆರಳಿದ್ದಾಗ ಮಾರಣಾಂತಿಕ ಹಲ್ಲೆ ಬಂಗಾಳದಲ್ಲಿ ಇಡಿ ಮೇಲೆಯೇ ದಾಳಿ!

ರಾಜ್ಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪಡಿತರ ಹಗರಣದ ತನಿಖೆಗೆ ಆಗಮಿಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ಮೇಲೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷದ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Ration scam case ED team conducting raids in West Bengal attacked by Locals gow
Author
First Published Jan 6, 2024, 12:45 PM IST

ಕೋಲ್ಕತಾ (ಜ.6): ರಾಜ್ಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪಡಿತರ ಹಗರಣದ ತನಿಖೆಗೆ ಆಗಮಿಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ಮೇಲೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷದ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಾಯಾಳು ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಲಾಗಿದೆ ಎಂದು ಇ.ಡಿ. ಮಾಹಿತಿ ನೀಡಿದೆ.

ಈ ನಡುವೆ ಅಧಿಕಾರಿಗಳ ಮೇಲಿನ ಹಲ್ಲೆಯನ್ನು ವಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಕಟುವಾಗಿ ಟೀಕಿಸಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತ ದೇಶದ ಭದ್ರತೆಗೆ ಮಾರಕವಾಗಿದ್ದು, ಘಟನೆ ಹೊಣೆ ಹೊತ್ತು ಕೂಡಲೇ ಮುಖ್ಯಮಂತ್ರಿ ಮಮತಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿವೆ. ಅಲ್ಲದೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಉಭಯ ಪಕ್ಷಗಳು ಆಗ್ರಹ ಮಾಡಿದೆ.

ಈ ನಡುವೆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯಪಾಲ ಸಿ.ವಿ.ಆನಂದ ಬೋಸ್‌, ‘ರಾಜ್ಯಪಾಲನಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಂವಿಧಾನದ ಎಲ್ಲ ಅವಕಾಶ ಬಳಸಿಕೊಳ್ಳಲು ಸಿದ್ಧ’ ಎನ್ನುವ ಮೂಲಕ ಅಗತ್ಯ ಬಿದ್ದರೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಲು ಸಿದ್ಧ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಮತ್ತೊಂದೆಡೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ, ರಾಜ್ಯದಲ್ಲಿ ಸಾಂವಿಧಾನಿಕ ಸಂಸ್ಥೆಗಳು ಕುಸಿದುಬಿದ್ದಿವೆ ಎಂದು ರಾಜ್ಯಪಾಲರೇಕೆ ಘೋಷಿಸುತ್ತಿಲ್ಲಾ ಎಂದು ಪ್ರಶ್ನಿಸಿದ್ದಾರೆ.

ಏನಾಯ್ತು?:
ಬಂಗಾಳದಲ್ಲಿ ನಡೆದ ಪಡಿತರ ಹಗರಣದ ತನಿಖೆ ನಡೆಸಲು ಇ.ಡಿ. ಅಧಿಕಾರಿಗಳ ತಂಡ ಶುಕ್ರವಾರ ಬೆಳಗ್ಗೆ 24 ಪರಗಣ ಜಿಲ್ಲೆಯ ಸಂದೇಶ್ಕಳಿ ಪ್ರಾಂತ್ಯದ ಸ್ಥಳೀಯ ಟಿಎಂಸಿ ನಾಯಕ ಶೇಕ್‌ ಶಹಜಹಾನ್‌ ನಿವಾಸಕ್ಕೆ ತೆರಳಿತ್ತು. ಹೀಗೆ ತೆರಳಿದ್ದ ತಂಡ ಬಾಗಿಲು ಮುರಿದು ಒಳಗೆ ಪ್ರವೇಶಿಸಲು ಯತ್ನಿಸಿದಾಗ ಆತನ ಸಾವಿರಾರು ಬೆಂಬಲಿಗರು ಏಕಾಏಕಿ ವಾಹನ ಮತ್ತು ಅಧಿಕಾರಿಗಳ ಮೇಲೆ ಕೈಗೆ ಸಿಕ್ಕಿದ ವಸ್ತುಗಳಿಂದ ದಾಳಿ ನಡೆಸಿದ್ದಾರೆ. ಜೊತೆಗೆ ಅಧಿಕಾರಿಗಳ ಮೊಬೈಲ್‌, ಲ್ಯಾಪ್‌ಟಾಪ್‌, ಪರ್ಸ್‌, ಹಣ ದೋಚಿದ್ದಾರೆ.
ಈ ವೇಳೆ ಮೂವರು ಅಧಿಕಾರಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಬಳಿಕ ಅವರೆಲ್ಲಾ ಸ್ಥಳದಿಂದ ಓಡಿಹೋಗಿ ಆಟೋ ಮತ್ತು ಬೈಕ್‌ ಏರಿ ಜೀವ ಉಳಿಸಿಕೊಂಡಿದ್ದಾರೆ. ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಮೂವರು ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
ಶಹಜಹಾನ್‌, ಪಡಿತರ ಹಗರಣದ ಪ್ರಮುಖ ಆರೋಪಿ ಮತ್ತು ಈಗಾಗಲೇ ಬಂಧಿತನಾಗಿರುವ ಸಚಿವ ಜ್ಯೋತಿಪ್ರಿಯೋಗ ಮಲ್ಲಿಕ್‌ನ ಆಪ್ತ.

ರಾಜ್ಯಪಾಲ ಬೋಸ್‌ ಕಿಡಿ:
ಅಧಿಕಾರಿಗಳ ಮೇಲಿನ ದಾಳಿಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್‌, ‘ಪ್ರಜಾಪ್ರಭುತ್ವದಲ್ಲಿ ಅನಾಗರಿಕ ಮತ್ತು ವಿಧ್ವಂಸಕ ದಾಳಿ ತಡೆಯುವುದು ನಾಗರಿಕ ಸರ್ಕಾರದ ಕರ್ತವ್ಯ. ಜಂಗಲ್‌ ರಾಜ್‌ ಮತ್ತು ಗೂಂಡಾರಾಜ್‌ ಕೇವಲ ಮೂರ್ಖರ ಸ್ವರ್ಗದಲ್ಲಿ ಮಾತ್ರವೇ ನಡೆಯಬಹುದು. ಬಂಗಾಳ ಒಂದು ರಾಜ್ಯವಾಗಿದ್ದು, ಅದು ಪ್ರತ್ಯೇಕ ದೇಶವಲ್ಲ. ಪೊಲೀಸರು ಸರಿಯಾಗಿ ವರ್ತಿಸಬೇಕು. ರಾಜ್ಯ ಸರ್ಕಾರ ಸರಿಯಾಗಿ ವರ್ತಿಸಬೇಕು. ಇಲ್ಲವೇ ಪರಿಣಾಮ ಎದುರಿಸಬೇಕು. ಜೊತೆಗೆ ಓರ್ವ ರಾಜ್ಯಪಾಲನಾಗಿ ಶಾಂತಿ ಕಾಪಾಡಲು ನನಗೆ ಲಭ್ಯವಿರುವ ಎಲ್ಲಾ ಸಾಂವಿಧಾನಿಕ ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಸಿದ್ಧ’ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರನ್ನು ರಾಜಭವನಕ್ಕೆ ಕರೆಸಿಕೊಂಡು ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ತಾಕೀತು ಮಾಡಿದ್ದಾರೆ.

ಟಿಎಂಸಿ ಸಮರ್ಥನೆ:
ಇ.ಡಿ ಅಧಿಕಾರಿಗಳ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿರುವ ಟಿಎಂಸಿ, ಇ.ಡಿ. ಅಧಿಕಾರಿಗಳು ಸ್ಥಳೀಯರನ್ನು ಕೆರಳಿಸಿದ ಪರಿಣಾಮ ಅಧಿಕಾರಿಗಳ ಮೇಲೆ ಜನರು ದಾಳಿ ಮಾಡಬೇಕಾಯಿತು. ಬಿಜೆಪಿ ಹಾಗೂ ಕಾಂಗ್ರೆಸ್‌ ಸುಮ್ಮನೆ ರಾಜಕೀಯ ಮಾಡುತ್ತಿವೆ ಎಂದು ಹೇಳಿದೆ.

Follow Us:
Download App:
  • android
  • ios