ದೇಶದ ಗೌರವಾನ್ವಿತ ಉದ್ಯಮಿ ರತನ್‌ಗೆ ವಿದಾಯ ಹೋಗಿ ಬನ್ನಿ, ಟಾಟಾ
ಅಂತ್ಯಕ್ರಿಯೆಯು ಸರ್ಕಾರಿ ಗೌರವಗಳಿಂದ ಹಾಗೂ ಪಾರ್ಸಿ ಸಮುದಾಯದವರು ಅನುಸರಿಸುವ ವಿಧಿವಿಧಾನಗಳ ಪ್ರಕಾರ ನೆರವೇರಿತು. ಅವರನ್ನು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಮುಂಬೈ ಪೊಲೀಸರು ಟಾಟಾ ಅವರಿಗೆ ಗನ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸಿದರು.
ಮುಂಬೈ(ಅ.11): ಬುಧವಾರ ನಿಧನರಾದ ಟಾಟಾ ಸಮೂಹ ಸಾಮ್ರಾಜ್ಯದ ವಿಶ್ರಾಂತ ಮುಖ್ಯಸ್ಥ ಹಾಗೂ ಶ್ರೇಷ್ಠ ಸಮಾಜಸೇವಕ ರತನ್ ಟಾಟಾ ಅವರ ಅಂತ್ಯಕ್ರಿಯೆ ಸಹಸ್ರಾರು ಶೋಕತಪ್ತ ಗಣ್ಯರು ಹಾಗೂ ಅಭಿಮಾನಿಗಳ ನಡುವೆ ಮುಂಬೈನ ವರ್ಲಿಯಲ್ಲಿರುವ ಪಾರ್ಸಿ ಚಿತಾಗಾರದಲ್ಲಿ ನೆರವೇರಿತು. ಇದರಿಂದ ಭಾರತದಲ್ಲಿ ದಶಕಗಳ ಕಾಲ ಉದ್ಯಮರಂಗದಲ್ಲಿ ಛಾಪು ಮೂಡಿಸಿದ್ದ ಉದ್ಯಮಿಯ ಯುಗಾಂತ್ಯವಾಯಿತು.
ಅಂತ್ಯಕ್ರಿಯೆಯು ಸರ್ಕಾರಿ ಗೌರವಗಳಿಂದ ಹಾಗೂ ಪಾರ್ಸಿ ಸಮುದಾಯದವರು ಅನುಸರಿಸುವ ವಿಧಿವಿಧಾನಗಳ ಪ್ರಕಾರ ನೆರವೇರಿತು. ಅವರನ್ನು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಮುಂಬೈ ಪೊಲೀಸರು ಟಾಟಾ ಅವರಿಗೆ ಗನ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸಿದರು.
News Hour: ಕನಸು ಕಾಣೋಕೆ ಮಿತಿ ಇರಬಾರದು ಎಂದು ತೋರಿಸಿಕೊಟ್ಟವರು ಟಾಟಾ!
ಅಂತ್ಯಕ್ರಿಯೆಗೆ ಜನಸಾಗರ:
ಈ ವೇಳೆ ಟಾಟಾ ಅವರ ಮಲಸಹೋದರ ನೋಯೆಲ್ ಟಾಟಾ, ಟಾಟಾ ಗ್ರೂಪ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್, ಭಾರತ ಸರ್ಕಾರದ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರ ಸಂಪುಟ ಸಹೋದ್ಯೋಗಿ ಪೀಯೂಷ್ ಗೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟಾಟಾ ಅವರ ಪ್ರೀತಿಯ ನಾಯಿ ‘ಗೋವಾ’ ಕೂಡ ತನ್ನ ಮಾಲೀಕನಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು. ಅಂತ್ಯಕ್ರಿಯೆಯ ನಂತರ, ದಕ್ಷಿಣ ಮುಂಬೈನ ಕೊಲಾಬಾದಲ್ಲಿರುವ ದಿವಂಗತ ಉದ್ಯಮಿಯ ಬಂಗಲೆಯಲ್ಲಿ ಇನ್ನೂ ಮೂರು ದಿನಗಳ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಅರ್ಚಕರೊಬ್ಬರು ಹೇಳಿದ್ದಾರೆ.
ಪದ್ಮವಿಭೂಷಣ ಪುರಸ್ಕೃತರಾದ ಟಾಟಾ ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ತಡರಾತ್ರಿ ನಗರದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ನಂತರ ಗುರುವಾರ ನಸುಕಿನಲ್ಲಿ ಅವರ ಶವವನ್ನು ಮನೆಗೆ ತರಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (ಎನ್‌ಸಿಪಿಎ) ಬೆಳಿಗ್ಗೆ 10.30 ರಿಂದ ಸಂಜೆ 4ರವರೆಗೆ ಜನರು ಗೌರವ ಸಲ್ಲಿಸಲು ಇಡಲಾಗಿತ್ತು. ನಂತರ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ವರ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.
ಭಾರತ ರತ್ನ ನೀಡಲು ಮಹಾರಾಷ್ಟ್ರ ಸಚಿವ ಸಂಪುಟ ನಿರ್ಣಯ
ಮುಂಬೈ: ರತನ್ ಟಾಟಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಮಹಾರಾಷ್ಟ್ರ ಸಂಪುಟ ಗುರುವಾರ ಅಂಗೀಕರಿಸಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಟಾಟಾ ಅವರ ಸೇವೆಯನ್ನು ಸ್ಮರಿಸಿತು.
ದೇಶದ ಗಣ್ಯಾತಿಗಣ್ಯ ವ್ಯಕ್ತಿಗಳಿಂದ ರತನ್ ದರ್ಶನ, ನಮನ
ಮುಂಬೈ: ರತನ್ ಟಾಟಾ ಅವರ ಅಂತಿಮ ದರ್ಶನಕ್ಕೆ ದೇಶದ ಗಣ್ಯಾತಿಗಣ್ಯ ವ್ಯಕ್ತಿಗಳ ದಂಡೇ ಆಗಮಿಸಿತ್ತು. ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ನಸುಕಿನ ಜಾವವೇ ಆಗಮಿಸಿ ರತನ್‌ಗೆ ಅಂತಿಮ ನಮನ ಸಲ್ಲಿಸಿದರು. ಕೇಂದ್ರ ಸಚಿವರಾದ ಅಮಿತ್ ಶಾ, ಹಿರಿಯ ನಾಯಕರಾದ ಶರದ್ ಪವಾರ್, ಉದ್ಯಮಿ ಮುಕೇಶ್ ಅಂಬಾನಿ, ಬಿರ್ಲಾ, ನಟ ಅಮೀರ್ ಖಾನ್ ಮತ್ತಿತರರು ಗೌರವ ನಮನ ಸಲ್ಲಿಸಿದರು.
ರತನ್ ಟಾಟಾ ಅಂತಿಮ ದರ್ಶನಕ್ಕೆ ಮಲತಾಯಿ ಸಿಮೋನ್: 94 ವಯಸ್ಸಿನ 70 ಸಾವಿರ ಕೋಟಿ ಉದ್ಯಮದ ಒಡತಿ!
ಅಂತಿಮ ಯಾತ್ರೇಲಿ ನೆಚ್ಚಿನ ಮಾಲೀಕನಿಗೆ ‘ಗೋವಾ’ ನಮನ
ಮುಂಬೈ: ರತನ್ ಟಾಟಾ ಅವರು ಶ್ವಾನಪ್ರೇಮಿ. 11 ವರ್ಷಗಳ ಹಿಂದೆ ಗೋವಾಕ್ಕೆ ತೆರಳಿದ್ದಾಗ ಅನಾಥ ನಾಯಿ ಮರಿ ಕಂಡು ಅದನ್ನು ರಕ್ಷಿಸಿ ಮುಂಬೈಗೆ ಕರೆತಂದು ಸಾಕಿದ್ದರು. ಗೋವಾದಲ್ಲಿ ಸಿಕ್ಕ ಕಾರಣ ಅದಕ್ಕೆ ‘ಗೋವಾ’ ಎಂದೇ ಹೆಸರಿಟ್ಟಿದ್ದರು. ಆ ಶ್ವಾನ ಕೂಡ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿತು.
ಶವವನ್ನು ಹದ್ದುಗಳಿಗೆ ನೀಡುವ ಸಂಪ್ರದಾಯ ಬದಲು ದೇಹ ದಹನ
‘ಮಾನವನ ದೇಹವನ್ನು ಪರಿಸರವೇ ನೀಡಿರುತ್ತದೆ. ಆತ ಸತ್ತ ನಂತರ ದೇಹವು ಪರಿಸರಕ್ಕೇ ಮರಳಬೇಕು. ದೇಹದಿಂದ ಗಾಳಿ, ನೀರು, ಭೂಮಿ ಮಲಿನ ಆಗಬಾರದು’ ಎಂಬುದು ಪಾರ್ಸಿಗಳ ಅನಿಸಿಕೆ. ಹೀಗಾಗಿ ಪಾರ್ಸಿ ಸಂಪ್ರದಾಯದಲ್ಲಿ ಇತ್ತೀಚಿನವರೆಗೂ ಇತರರಂತೆ ಹೂಳುವ ಅಥವಾ ಅಗ್ನಿಸ್ಪರ್ಶದ ಅಂತ್ಯಕ್ರಿಯೆ ಮಾಡುತ್ತಿರಲಿಲ್ಲ. ಬದಲಾಗಿ ದೇಹವನ್ನು ಮೃತದೇಹಕ್ಕೆಂದೇ ಮೀಸಲಾದ ಬಯಲು ಸ್ಥಳದಲ್ಲಿ ಇಡುತ್ತಿದ್ದರು. ಅವನ್ನು ಹದ್ದುಗಳಂಥ ಪಕ್ಷಿಗಳು ಕುಕ್ಕಿ ತಿನ್ನುತ್ತಿದ್ದವು. ಆದರೆ ಇತ್ತೀಚೆಗೆ ಹದ್ದುಗಳಂಥ ಪಕ್ಷಗಳ ಸಂಖ್ಯೆ ಕುಸಿಯುತ್ತಿರುವ ಕಾರಣ ಸಂಪ್ರದಾಯದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿರುವ ಅವರು, ಪರಿಸರ ಮಾಲಿನ್ಯಕ್ಕೆ ಕಾರಣವಾಗದ ವಿದ್ಯುತ್ ಚಿತಾಗಾರದಲ್ಲಿ ದೇಹ ಸುಡುತ್ತಿದ್ದಾರೆ. ಆ ಪ್ರಕಾರ ವರ್ಲಿಯಲ್ಲಿರುವ ಪಾರ್ಸಿ ವಿದ್ಯುತ್ ಚಿತಾಗಾರದಲ್ಲಿ ಟಾಟಾ ಅವರ ಅಂತ್ಯಕ್ರಿಯೆ ನೆರವೇರಿತು.