ಇದಾಗಲೇ ಹಲವಾರು ಪ್ರಕೃತಿ ವಿಕೋಪಗಳು, ಸಾವು ನೋವುಗಳ ನಡುವೆಯೇ ಇದೀಗ ತಮಿಳುನಾಡಿನಲ್ಲಿ ದೇವರ ಮೀನು ಸಿಕ್ಕಿದ್ದು, ಇದು ಭಾರಿ ಆತಂಕಕ್ಕೆ ಕಾರಣವಾಗಿದೆ!
ಯಾವುದೇ ಪ್ರಕೃತಿ ವಿಕೋಪ ಸಂಭವಿಸುವುದಿದ್ದರೂ ಮನುಷ್ಯನಿಗಿಂತಲೂ ಮುನ್ನವೇ ಪಶು-ಪಕ್ಷಿ, ಜಲಚರಗಳಿಗೆ ತಿಳಿಯುತ್ತದೆ ಎನ್ನುತ್ತದೆ ವಿಜ್ಞಾನ. ಇದೀಗ ಅಂಥದ್ದೇ ಒಂದು ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇದು ಭಾರಿ ಆತಂಕವನ್ನು ಸೃಷ್ಟಿಸಿದೆ. ತಮಿಳುನಾಡಿನ ಮೀನುಗಾರರ ಬಲೆಗೆ ಅಪರೂಪದ Doomsday Fish ಸಿಕ್ಕಿದೆ. ಇದನ್ನು ದೇವರ ಮೀನು ಎಂದೂ ಕರೆಯುತ್ತಾರೆ. ಹಾವಿನಂತೆ ಕಾಣಿಸುವ ಅಪರೂಪದಲ್ಲೇ ಬಲು ಅಪರೂಪದ ಮೀನು ಇದಾಗಿದ್ದು, ಪ್ರಕೃತಿ ವಿಕೋಪದ ಮುನ್ಸೂಚನೆಯನ್ನು ಹೊತ್ತು ಈ ಮೀನು ಬಂದಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವರ್ಷ ಆಗುತ್ತಿರುವ ಅವಘಡಗಳು ಒಂದೆರಡಲ್ಲ. ಇನ್ನೂ ಆರೇಳು ತಿಂಗಳು ಭಾರತ ಸೇರಿದಂತೆ ಇಡೀ ವಿಶ್ವ ಅಲ್ಲೋಲ ಕಲ್ಲೋಲವನ್ನೇ ಎದುರಿಸಬೇಕಾಗುತ್ತದೆ ಎಂದು ಕಾಲಜ್ಞಾನಿಗಳು ಭವಿಷ್ಯ ನುಡಿದು ಆಗಿದೆ. ಇದರ ಬೆನ್ನಲ್ಲೇ ಇದೀಗ ನಮ್ಮ ಪಕ್ಕದ ರಾಜ್ಯದಲ್ಲಿಯೇ ಇಂಥ ಮೀನು ಸಿಕ್ಕಿರುವುದು ಅಪಾರ ಸಾವು- ನೋವಿಗೆ ಮುನ್ನುಡಿಯೇ ಎಂದು ಎಣಿಸಲಾಗುತ್ತಿದೆ.
ಜಪಾನ್ ಜಾನಪದದಲ್ಲಿ ಓರ್‌ಫಿಶ್ ಎಂದು ಕರೆಯಲ್ಪಡುವ ವಿಚಿತ್ರವಾಗಿ ಕಾಣುವಂತಹ ಆಳಸಾಗರದ ಮೀನು ಇದಾಗಿದೆ. ಆಸ್ಟ್ರೇಲಿಯನ್ ಸಮುದ್ರ ತೀರದಲ್ಲಿ ಕಾಣಿಸಿದ್ದ ಈ ಮೀನು ಈಗ ತಮಿಳುನಾಡಿನಲ್ಲೂ ಪತ್ತೆಯಾಗಿದೆ. ಇದು ಅಪಾಯದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಸುಮಾರು 30 ಅಡಿ (9 ಮೀಟರ್) ಉದ್ದದ ಬೃಹತ್ ಓರ್‌ಫಿಶ್ ಇದಾಗಿದೆ. ಇದನ್ನು ಎತ್ತಲು 7 ಜನರ ಸಹಾಯ ಬೇಕಾಯಿತು ಎಂದರೆ ಇದರ ಗಾತ್ರ ಅರ್ಥವಾದೀತು. ಈ ಮೀನು ನೋಡಿ ಎಲ್ಲರೂ ಆಘಾತಕ್ಕೊಳಗಾದರು.
ಜೂನ್ 2ರಂದು 3 ಮೀಟರ್ ಉದ್ದದ ಓರ್‌ಫಿಶ್ ಟ್ಯಾಸ್ಮೇನಿಯಾದ ಪಶ್ಚಿಮ ಕರಾವಳಿಯಲ್ಲಿ ಪತ್ತೆಯಾಗಿತ್ತು. ಅಲ್ಲಿನ ನಿವಾಸಿ ಸಿಬಿಲ್ ರಾಬರ್ಟ್‌ಸನ್ ಈ ಮೀನನ್ನು ಕಂಡು ಫೋಟೋ ಕ್ಲಿಕ್ಕಿಸಿದ್ದರು. ಇದು ಅಪಾಯದ ಮುನ್ಸೂಚನೆ ಎಂದು ಎಲ್ಲರು ಊಹಿಸಿದ್ದರು. ನ್ಯೂಜಿಲೆಂಡ್‌ನ ಡ್ಯುನೆಡಿನ್ ಬಳಿ ಜೂನ್ ತಿಂಗಳಲ್ಲಿ ಈ ಮೀನು ಕಾಣಿಸಿಕೊಂಡಿತ್ತು. ಹಾಗೆ ಮತ್ತೊಂದು ತಲೆ ಇಲ್ಲದ ಮೀನು ಕೂಡ ಕ್ರೈಸ್ಟ್ ಚರ್ಚ್ ಬಳಿಯಲ್ಲಿ ಕಾಣಿಸಿಕೊಂಡಿತ್ತು. ಈ ಅಪರೂಪದ ಘಟನೆಗಳು ಜೀವಶಾಸ್ತ್ರಜ್ಞರು ಹಾಗೆ ನಾಗರಿಕರಲ್ಲಿ ಕುತೂಹಲದ ಜೊತೆಗೆ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಇಲ್ಲಿಯೂ ಸಿಕ್ಕಿರುವುದು ತಲ್ಲಣ ಸೃಷ್ಟಿಸಿದೆ. ಅದರ ವಿಡಿಯೋಗಳು, ಫೋಟೋಗಳು ವೈರಲ್ ಆಗುತ್ತಿದ್ದು, 7 ಮಂದಿ ಸೇರಿ ಇದನ್ನು ಎತ್ತುತ್ತಿರುವುದನ್ನು ನೋಡಬಹುದಾಗಿದೆ. ಈ ಮೀನುಗಳು ಆಳ ಸಮುದ್ರದಲ್ಲಿ ಮಾತ್ರವೇ ನೆಲೆಸಿರುತ್ತವೆ. ಆದ್ರೆ ಈ ಮೀನು ಕಾಣಿಸಿಕೊಂಡರೆ ಅಪಾಯ ಅಥವಾ ದುರಂತಗಳು ಸಂಭವಿಸಲಿದೆ ಎಂದು ನಂಬಲಾಗಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ 12 ಅಡಿ ಉದ್ದದ ಮೀನು ಕಾಣಿಸಿಕೊಂಡಿತ್ತು, ಇದಾದ ಎರಡು ದಿನಗಳ ಬಳಿಕ ಲಾಸ್ ಏಂಜಲಿಸ್‌ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿ ಅಪಾರ ಹಾನಿಯಾಗಿತ್ತು. ಕ್ಯಾಲಿಫೋರ್ನಿಯಾದ ಕಡಲ ತೀರದಲ್ಲಿ ಕಾಣಿಸಿಕೊಂಡ ಒಂದು ತಿಂಗಳ ನಂತರ ಆಸ್ಟ್ರೇಲಿಯಾದ ಉತ್ತರ ಭಾಗದ ದ್ವೀಪಗಳ ಬಳಿ ಮತ್ತೊಂದು ಓರ್‌ಫಿಶ್ ಕಾಣಿಸಿಕೊಂಡಿತು.
