ಲಂಡನ್(ಡಿ.04)‌: ಹೆಣ್ಣು ಮಕ್ಕಳ ಶಿಕ್ಷಣ ಉತ್ತೇಜಿಸಿ, ಮಹಾರಾಷ್ಟ್ರದಲ್ಲಿ ಕ್ಯುಆರ್‌ ಕೋಡ್‌ ಆಧರಿತ ಪಠ್ಯ ಪರಿಚಯಿಸಿದ ಸೊಲ್ಲಾಪುರ ಜಿಲ್ಲೆಯ ಪರಿಟೆವಾಡಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕ ರಣಜಿತ್‌ಸಿನ್ಹ್ ದಿಸಾಲೆ ಅವರಿಗೆ ಬರೋಬ್ಬರಿ 7.5 ಕೋಟಿ ರುಪಾಯಿ ನಗದು ಬಹುಮಾನ ಹೊಂದಿರುವ ಜಾಗತಿಕ ಶಿಕ್ಷಕ ಪ್ರಶಸ್ತಿ ಲಭಿಸಿದೆ.

2014ರಲ್ಲಿ ವಾರ್ಕಿ ಫೌಂಡೇಷನ್‌ ಸ್ಥಾಪಿಸಿದ್ದ ಜಾಗತಿಕ ಶಿಕ್ಷಕ ಪ್ರಶಸ್ತಿಯ ಅಂತಿಮ ಸುತ್ತಿಗೆ ವಿಶ್ವದ ವಿವಿಧೆಡೆಯ 10 ಮಂದಿ ಪ್ರವೇಶಿಸಿದ್ದರು. ಆ ಪೈಕಿ ರಣಜಿತ್‌ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬಹುಮಾನದ ಪೈಕಿ ಅರ್ಧದಷ್ಟುಮೊತ್ತವನ್ನು ಸಹಸ್ಪರ್ಧಿಗಳಿಗೆ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ 9 ಮಂದಿ ಸ್ಪರ್ಧಿಗಳಿಗೆ ತಲಾ 40 ಲಕ್ಷ ರು. ಲಭಿಸಲಿದೆ.

KAS ನೇಮಕ ಲೋಪ: ಸರಿಪಡಿಸದಿದ್ರೆ KPSC ವಿರುದ್ಧ ನ್ಯಾಯಾಂಗ ನಿಂದನೆ

ರಣಜಿತ್‌ ಅವರು ಶಾಲಾ ಪಠ್ಯವನ್ನು ಮಕ್ಕಳ ಮಾತೃಭಾಷೆಗೆ ಅನುವಾದಿಸಿದ್ದರು. ಆಡಿಯೋ ಗೀತೆ, ವಿಡಿಯೋ ಪಾಠ, ಕತೆಗಳನ್ನು ಮಕ್ಕಳು ಕೇಳುವಂತಾಗಲು ಕ್ಯುಆರ್‌ ಕೋಡ್‌ ಅಳವಡಿಸಿದ್ದರು. ಮಹಾರಾಷ್ಟ್ರ ಸರ್ಕಾರ ಈ ಪಠ್ಯವನ್ನು ಅಳವಡಿಸಿಕೊಂಡಿತ್ತು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಾಥಮಿಕ ಶಾಲಾ ಶಿಕ್ಷಕ  ರಣಜಿತ್‌ಸಿನ್ಹ್ ದಿಸಾಲೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ