ಅಯೋಧ್ಯೆ(ಜು.30): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮುಂದಿನ ವಾರ ಆಗಸ್ಟ್ 5 ರಂದು ರಾಮ ಜನ್ಮಭೂಮಿ ಮಂದಿರದ ಭೂಮಿ ಪೂಜೆ ನಡೆಯಲಿದೆ. ಆದರೀಗ ಇದಕ್ಕೂ ಮುನ್ನ ಸಮಸ್ಯೆಯೊಂದು ಎದುರಾಗಿದೆ. ರಾಮ ಜನ್ಮಭೂಮಿ ಮಂದಿರದ ಅರ್ಚಕ ಪ್ರದೀಪ್ ದಾಸ್ ಹಾಗೂ ಮಂದಿರ ಸುರಕ್ಷತೆಗೆ ನಿಯೋಜಿಸಿದ್ದ 16 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಪ್ರದೀಪ್ ದಾಸ್ ರಾಮ ಜನ್ಮಭೂಮಿ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ರವರ ಶಿಷ್ಯರಾಗಿದ್ದು, ರಾಮಲಲ್ಲಾ ಮಂದಿರದ ಭೂಮಿ ಪೂಜೆಯಲ್ಲೂ ಭಾಗಿಯಾಗುವವರಿದ್ದರು.

ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭದ ದಿನ ಮತ್ತೆ ಬರುತ್ತೇನೆ ಎಂದಿದ್ದ ಮೋದಿ!

ಸದ್ಯ ಮಂದಿರದಲ್ಲಿ ನಾಲ್ವರು ಅರ್ಚಕರಿದ್ದಾರೆ. ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಬಳಿಕ ಪ್ರದೀಪ್‌ ದಾಸ್‌ರವರೇ ಪ್ರಮುಖರು. ಆದರೀಗ ಮಂದಿರದಲ್ಲಿದ್ದವರಿಗೆ ಕೊರೋನಾ ಸೋಂಕಿರುವುದು ಬೆಳಕಿಗೆ ಬಂದಿರುವುದರಿಂದ ಆಡಳಿತಾಧಿಕಾರಿಗಳಿಗೆ ಆತಂಕವುಂಟಾಗಿದೆ. ಯಾಕೆಂದರೆ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆಗೆ ಇಲ್ಲಿ ಆಗಮಿಸುವವರಿದ್ದಾರೆ.

ಇನ್ನು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಭೂಮಿ ಪೂಜೆ ಬಳಿಕ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುತ್ತದೆ. ಇದಾದ ಬಳಿಕ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ.