ರಾಮ ಭೂಮಿ ಪಡೆದವರಿಗೆ ಸಿಂಧ್ ಮರಳಿ ಪಡೆಯಲು ಸಾಧ್ಯವಿಲ್ಲವೇ?ಸಿಎಂ ಯೋಗಿ ಮಾತಿಗೆ ಬೆಚ್ಚಿದ ಪಾಕಿಸ್ತಾನ!
500 ವರ್ಷಗಳ ಬಳಿಕ ಶ್ರೀ ರಾಮ ಜನ್ಮ ಭೂಮಿಯನ್ನು ಮರಳಿ ಪಡೆದಿದ್ದೇವೆ. ಇದೀಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯವನ್ನು ಮರಳಿ ಪಡೆಯದೇ ಇರಲು ಯಾವುದೇ ಕಾರಣಗಳಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಹೇಳಿಕೆ ಭಾರತ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಸಂಚಲನ ಸೃಷ್ಟಿಸಿದೆ.

ಲಖನೌ(ಅ.08) ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಕಾರ್ಯವೈಖರಿಯಿಂದಲೂ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಇದೀಗ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಯೊಂದು ಪಾಕಿಸ್ತಾನದ ನಿದ್ದೆಗೆಡಿಸಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರ ಕೆಲ ನಾಯಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮರಳಿ ಪಡೆಯುವ ಕುರಿತು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ಯೋಗಿ ಆದಿತ್ಯಾನಾಥ್ ಇದೀಗ ಪಾಕಿಸ್ತಾನದ ಆಗ್ನೇಯ ಪ್ರದೇಶಲ್ಲಿರುವ ಸಿಂಧ್ ಪ್ರಾಂತ್ಯವನ್ನು ಮರಳಿ ಪಡೆಯುವ ಕುರಿತು ಹೇಳಿಕೆ ನೀಡಿದ್ದಾರೆ. 500 ವರ್ಷಗಳ ಬಳಿರ ಶ್ರೀರಾಮ ಜನ್ಮಭೂಮಿಯನ್ನು ವಾಪಸ್ ಪಡೆದವರಿಗೆ ಸಿಂಧ್ ಪ್ರಾಂತ್ಯ ಮರಳಿ ಪಡೆಯದೇ ಇರಲು ಕಾರಣಗಳಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಆಯೋಜಿಸಿರುವ 2 ದಿನಗಳ ರಾಷ್ಟ್ರೀಯ ಸಿಂಧ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತದ ಭವ್ಯ ಪರಂಪರೆ ಕುರಿತು ಮಾತನಾಡಿದ್ದಾರೆ. ಸನಾತನ ಧರ್ಮ, ಸಂಸ್ಕೃತಿ ಸಂರಕ್ಷಿಸಿ ಬೆಳೆಸುವಲ್ಲಿ ಸನಾತನ ಧರ್ಮದ ಪಾತ್ರದ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಸದ್ಯ ಪಾಕಿಸ್ತಾನದ ಭಾಗವಾಗಿರುವ ಸಿಂಧ್ ಪ್ರಾಂತ್ಯವನ್ನು ಭಾರತ ಮರಳಿ ಪಡೆಯದೇ ಇರಲು ಯಾವುದೇ ಕಾರಣಗಳಿಲ್ಲ ಎಂದಿದ್ದಾರೆ.
'ಸನಾತನ ಅನ್ನೋದೇ ಏಕೈಕ ಧರ್ಮ, ಉಳಿದವೆಲ್ಲ..' ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತು
500 ವರ್ಷಗಳ ಬಳಿಕ ಶ್ರೀ ರಾಮ ಜನ್ಮ ಭೂಮಿಯನ್ನು ಮರಳಿ ಪಡೆದು ಇದೀಗ ಭವ್ಯ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಜನವರಿ 2024ರಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆ ರಾಮ ಮಂದಿರ ಉದ್ಘಾಟನೆ ಮಾಡಲಿದ್ದಾರೆ. ರಾಮ ಮಂದಿರವನ್ನೇ ಕಟ್ಟುತ್ತಿದ್ದೇವೆ. ಇದೀಗ ಸಿಂಧ್ ಪ್ರಾಂತ್ಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲವೇ ಎಂದು ಯೋಗಿ ಪ್ರಶ್ನಿಸಿದ್ದಾರೆ. ಯೋಗಿ ಈ ಮಾತು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.
ಸಿಂಧ್ ಸಮುದಾಯದ ಜನ ತಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಇತಿಹಾಸ ಹೇಳಬೇಕು, ಸಮುದಾಯದ ಸಂಸ್ಕೃತಿಯನ್ನು ತಿಳಿ ಹೇಳಬೇಕು. ಈ ನಿಟ್ಟಿನಲ್ಲಿ ಸಿಂಧ್ ಸಮುದಾಯ ಈ ಸಂಸ್ಕತಿಯನ್ನು ಉಳಿಸಿ ಬೆಳೆಸುವಲ್ಲಿ ಹಿರಿಯರು ಪ್ರಮುಖ ಪಾತ್ರ ನಿರ್ವಹಿಸಬೇಕು ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ.
ಸನಾತನ ಧರ್ಮವನ್ನು ಅಳಿಸಿ ಹಾಕುತ್ತೇನೆ ಎಂದವರೆಲ್ಲ ಅಳಿದು ಹೋಗಿದ್ದಾರೆ: ಯೋಗಿ ಆದಿತ್ಯನಾಥ್!
ಭಾರತ ವಿಭಜನೆಯಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೀಡಾದ ಪ್ರಾಂತ್ಯ ಸಿಂಧ್. ಪಾಕಿಸ್ತಾನದಲ್ಲಿರುವ ಹಿಂದೂಗಳ ಪೈಕಿ ಅತೀ ಹೆಚ್ಚಿನ ಹಿಂದೂಗಳಿರುವ ಪ್ರದೇಶ ಸಿಂಧ್ ಪ್ರಾಂತ್ಯವಾಗಿದೆ. ಪಾಕಿಸ್ತಾನದ ಮೂಲಭೂತವಾದಿಗಳು, ಇಸ್ಲಾಂ ಕಟ್ಟರ್‌ಗಳು ಇದೇ ಸಿಂಧ್ ಪ್ರಾಂತ್ಯಕ್ಕೆ ದಾಳಿ ಮಾಡಿ ಹಿಂದೂ ಹೆಣ್ಣುಮಕ್ಕಳನ್ನು ಅಪಹರಿಸಿ ಮದುವೆಯಾಗುತ್ತಾರೆ. ಇಸ್ಲಾಂಗೆ ಮತಾಂತರ ಮಾಡಲಾಗುತ್ತದೆ. ವಿರೋಧಿಸಿದರೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗುತ್ತದೆ. ಸಿಂಧ್ ಪ್ರಾಂತ್ಯದಲ್ಲಿ ಈ ಘಟನೆಗಳು ಸಾಮಾನ್ಯವಾಗಿದೆ.