'ಪೆಟ್ರೋಲ್‌ಗೆ ರಾಮನ ಭಾರತದಲ್ಲಿ 93, ಸೀತೆಯ ನೇಪಾಳದಲ್ಲಿ 53, ರಾವಣನ ಲಂಕೆಯಲ್ಲಿ 51'
ಕೇಂದ್ರದ ಬಜೆಟ್ ನಂತರ ಪೆಟ್ರೋಲ್ ಮೇಲೆ ಕೃಷಿ ಸೆಸ್/ ತಮ್ಮ ಪಕ್ಷದ ಸರ್ಕಾರದ ವಿರುದ್ಧವೇ ಸ್ವಾಮಿ ಬೌನ್ಸರ್/ ಪಕ್ಕದ ದೇಶಗಳನ್ನು ಹೋಲಿಕೆ ಮಾಡಿ ಹೇಳಿದ ಸುಬ್ರಹ್ಮಣಿಯನ್ ಸ್ವಾಮಿ/ ತೈಲ ದರ ಏರಿಕೆಗೆ ಅಸಮಾಧಾನ
ನವದೆಹಲಿ(ಫೆ 02) ಬಜೆಟ್ ಮುಗಿದಿದೆ..ಚರ್ಚೆಗಳು ನಡೆಯುತ್ತಿವೆ.. ಎಲ್ಲ ಕಡೆ ತೈಲ ದರದ್ದೇ ಮಾತು. ಈ ನಡುವೆ ಬಿಜೆಪಿ ನಾಯಕರೇ ಆಗಿರುವ ಸುಬ್ರಹ್ಮಣಿಯನ್ ಸ್ವಾಮಿ ಕೇಂದ್ರ ಸರ್ಕಾರವನ್ನು ಕುಹಕವಾಡಿದ್ದಾರೆ.
ಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಟೋ ವೈರಲ್ ಆಗುತ್ತಿದೆ. ಭಾರತ ಹಾಗೂ ನೆರೆ ರಾಷ್ಟ್ರಗಳಲ್ಲಿನ ಪೆಟ್ರೋಲ್ ದರ ಹೋಲಿಕೆ ಮಾಡಿದ್ದು ರಾಮಾಯಣವನ್ನು ಎಳೆದು ತಂದಿದ್ದಾರೆ.
'ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 93 ರೂಪಾಯಿಗಳಾಗಿದೆ. ಸೀತೆಯ ನೇಪಾಳದಲ್ಲಿ ಪ್ರತಿ ಲೀಟರ್ ಗೆ 53 ರೂಪಾಯಿಗಳಾಗಿದ್ದರೆ ರಾವಣನ ಲಂಕೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 51 ರೂ.' ಎನ್ನುತ್ತ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಬಜೆಟ್ ಮಂಡನೆ ಮಾಡಿದ್ದ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ಕೃಷಿ ಸೆಸ್ ವಿಧಿಸಿತ್ತು. ಬರುವ ಆದಾಯವನ್ನು ಕೃಷಿಗೆ ಸಂಬಂಧಿಸಿದ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುವುದು ಆಲೋಚನೆ. ಆದರೆ ಈಗಾಗಲೇ 90 ರ ಗಡಿ ದಾಟಿರುವ ಪೆಟ್ರೋಲ್ ಮತ್ತಷ್ಟು ದುಬಾರಿಯಾಗಲಿದೆ ಎಂಬ ಅಂಶಕ್ಕೆ ಸೋಶಿಯಲ್ ಮೀಡಿಯಾದಲ್ಲಿಯೂ ವ್ಯಾಪಕ ಟೀಕೆಗಳು ಕೇಳಿಬರುತ್ತಲೆ ಇವೆ.