ನವದೆಹಲಿ(ಜ.02): ಈ ಬಾರಿಯ ಬಜೆಟ್‌ ಮಂಡನೆ ಸರ್ಕಾರಕ್ಕೆ ಸವಾಲಿನ ವಿಷಯವಾಗಿತ್ತು. ಹಾಗೆಯೇ ಅವಕಾಶವೂ ಆಗಿತ್ತು. ಸಂಕಷ್ಟದ ಸಮಯದಲ್ಲಿ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲಕ್ಕೆ ತುಂಬಾ ಜವಾಬ್ದಾರಿಯುತವಾಗಿ ತೆರೆ ಎಳೆದಿದ್ದಾರೆ. ನಿರೀಕ್ಷೆಯಂತೆ ಮೂಲ ಸೌಕರ‍್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಮತ್ತು ಆರ್ಥಿಕತೆಯ ಚೇತರಿಕೆಗೆ ಹಣದ ಹರಿವು ಬರುತ್ತದೆ. ಖರ್ಚಿನ ಅವಶ್ಯಕತೆಗೆ ತಕ್ಕಂತೆ ಸಂಪನ್ಮೂಲ ಕ್ರೋಡೀಕರಣದ ವ್ಯವಸ್ಥೆ ಕೂಡ ಅದ್ಭುತವಾಗಿ ಆಲೋಚಿಸಲಾಗಿದೆ. ಯಾವುದೇ ತೆರಿಗೆ ಭಾರ ಹೇರದೆ ನೇರ ಹಾಗೂ ಪರೋಕ್ಷ ತೆರಿಗೆ ಸಂಗ್ರಹದ ಜೊತೆ, ಜೀರೋ ಕೂಪನ್‌ ಬಾಂಡ್‌ ವಿತರಣೆಯ ಮಾಸ್ಟರ್‌ ಪ್ಲಾನ್‌ ಮಾಡಲಾಗಿದೆ. ಈ ಬಾಂಡ್‌ಗಳ ಅಡಿಯಲ್ಲಿ ಸರ್ಕಾರ ಬಡ್ಡಿದರ ನಿಗದಿ, ಬಡ್ಡಿ ಮತ್ತು ಅಸಲಿನ ಪಾವತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅದಕ್ಕಾಗಿ ಕಂಪನಿ ಸ್ಥಾಪಿಸಿ, ಕಂಪನಿ ಅಡಿಯಲ್ಲಿ ಬಂಡವಾಳ ಸಂಗ್ರಹ ಮತ್ತು ಲಾಭದ ಜೊತೆ ಮರು ಪಾವತಿ ನಿರ್ವಹಿಸಲಾಗುತ್ತದೆ.

ಇನ್ನು ಯಾವುದೇ ಬಜೆಟ್‌ ಮಂಡನೆಯ ಸಮಯದಲ್ಲಿ ತೆರಿಗೆ ಉಳಿತಾಯ/ ವಿನಾಯಿತಿ ಮೂಲಕ ನಮಗೇನು ಲಾಭ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇರುತ್ತದೆ. ನೆನಪಿರಲಿ ಕಳೆದ ಬಜೆಟ್‌ನಿಂದಲೇ ನಿಮ್ಮ ತೆರಿಗೆ ಒಳಪಡುವ ಆದಾಯ 5 ಲಕ್ಷ ರು. ಇದ್ದರೆ ನಿಮಗೆ ತೆರಿಗೆ ಇಲ್ಲ. ಅಂದರೆ ನಿಮ್ಮ ಮಾಸಿಕ ಆದಾಯ 50,000 ರು. ಇದ್ದರೆ ನೀವು ಒಂದು ರುಪಾಯಿಯೂ ತೆರಿಗೆ ಕಟ್ಟುವುದಿಲ್ಲ. ಹಾಗಾಗಿ ಕೆಳ ಹಾಗೂ ಮಧ್ಯಮ ವರ್ಗದ ಜನರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಮುಂದುವರೆದಂತೆ ಇನ್ನು ತೆರಿಗೆದಾತರನ್ನು ಗೌರವದಿಂದ ಕಾಣಲು, ಅವರಿಗೆ ತೊಂದರೆಗಳನ್ನು ಕಡಿಮೆ ಮಾಡಲು ಆಡಳಿತ ಸುಧಾರಣಾ ಕ್ರಮಗಳು ಅತಿ ಅವಶ್ಯಕ. ಅದನ್ನು ಈ ಸರ್ಕಾರ ಕಳೆದ ವರ್ಷಗಳಿಂದ ಶುರುಮಾಡಿ ಈ ವರ್ಷವೂ ಮುಂದುವರೆಸಿದೆ. ಈ ಬಾರಿಯ ಬಜೆಟ್‌ ತೆರಿಗೆಯಲ್ಲಿ ಸುಧಾರಣೆಗಳು ಈ ರೀತಿಯಾಗಿವೆ;

1. 75 ವರ್ಷ ಮೇಲ್ಪಟ್ಟಹಿರಿಯ ನಾಗರಿಕರ ಆದಾಯ ಕೇವಲ ಪಿಂಚಣಿ ಮತ್ತು ಬಡ್ಡಿ ಇದ್ದಾಗ ಅವರು ರಿಟನ್ಸ್‌ರ್‍ ಸಲ್ಲಿಸುವುದರಿಂದ ವಿನಾಯಿತಿ ಇದೆ. ನೆನಪಿರಲಿ ತೆರಿಗೆ ಪಾವತಿಸಬೇಕು, ರಿಟನ್ಸ್‌ರ್‍ ಸಲ್ಲಿಕೆಯಿಂದ ಮಾತ್ರ ವಿನಾಯಿತಿ.

2. ಇನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಆನ್‌ಲೈನ್‌ ಮುಖಾಂತರವೇ ಎಲ್ಲಾ ತೆರಿಗೆ ರಿಟನ್ಸ್‌ರ್‍, ವ್ಯಾಜ್ಯಗಳ ವಿಲೇವಾರಿ. ಅಂದರೆ ಫೇಸ್‌ಲೆಸ್‌ ಅಸೆಸ್‌ಮೆಂಟ್ಸ್‌.

3.ಇನ್ನು ತೆರಿಗೆ ಇಲಾಖೆಯಿಂದ ದಾಳಿ ಅಥವಾ ಸರ್ವೇ ಆದಾ ನಿಮ್ಮ ಆದಾಯವನ್ನು ಹಿಂದಿನ 3 ವರ್ಷಗಳು ಮಾತ್ರ ಲೆಕ್ಕ ನೋಡುತ್ತಾರೆ. ಈ ಹಿಂದೆ 6 ವರ್ಷಗಳ ಲೆಕ್ಕ ನೋಡುತ್ತಿದ್ದರು. 50 ಲಕ್ಷ ರು.ಗಿಂತ ಹೆಚ್ಚಿನ ಆದಾಯವನ್ನು ಮುಚ್ಚಿಟ್ಟಿದ್ದರೆ ಚೀಫ್‌ ಕಮಿಷನರ್‌ ಅನುಮತಿ ಮೇರೆಗೆ 10 ವರ್ಷಗಳ ಹಿಂದಿನ ಲೆಕ್ಕ ನೋಡುತ್ತಾರೆ.

4.ಇನ್ನು ಮುಂದಿನ ಸಾಲಿನಿಂದ ನಿಮ್ಮ ವಹಿವಾಟು 10 ಕೋಟಿ ರು. ಇದ್ದರೆ ಮತ್ತು ಶೇ.95ರಷ್ಟುಚೆಕ್‌, ಆನ್‌ಲೈನ್‌ ಮುಖಾಂತರ ವ್ಯವಹಾರವಿದ್ದರೆ ಶೇ.8ರಷ್ಟುಲಾಭಾಂಶ ತೋರಿಸಿದರೆ ಇನ್ನುಮುಂದೆ ಆಡಿಟ್‌ ಅವಶ್ಯಕತೆ ಇಲ್ಲ. ಈ ಹಿಂದೆ ವಹಿವಾಟಿನ ಮಿತಿ 5 ಕೋಟಿ ರು. ಇತ್ತು.

5.ವಿದೇಶಗಳಲ್ಲಿ ಬಹಳಷ್ಟುವರ್ಷ ಕೆಲಸ ಮಾಡಿ ಈಗ ಭಾರತಕ್ಕೆ ಮರಳಿ ಬಂದು ವಾಸಿಸಲು ಬರುವ ನಮ್ಮ ಪ್ರಜೆಗಳಿಗೆ ಅಲ್ಲಿಂದ ಅವರು ತರುವ ಮೊತ್ತಕ್ಕೆ ತೆರಿಗೆ ಭಾರವಾಗಿತ್ತು. ಇನ್ನುಮುಂದೆ ಅದು ಕಡಿಮೆ ಮತ್ತು ಸುಲಭವಾಗಿರುತ್ತದೆ.

6. ಈವರೆಗೆ ಶಿಕ್ಷಣ ಮತ್ತು ಆಸ್ಪತ್ರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್‌ಗಳ ವಹಿವಾಟು 1 ಕೋಟಿ ಇದ್ದರೆ ಅವರ ಲಾಭಕ್ಕೆ ತೆರಿಗೆ ಇರಲಿಲ್ಲ. ಈಗ ಮಿತಿಯನ್ನು 5 ಕೋಟಿ ರು. ವರೆಗೆ ಏರಿಸಲಾಗಿದೆ.

7.ವಿವಾದ್‌ ಸೇ ವಿಶ್ವಾಸ ಯೋಜನೆಯಡಿಯಲ್ಲಿ 1.10 ಲಕ್ಷ ವ್ಯಾಜ್ಯಗಳು ಇತ್ಯರ್ಥವಾಗಿದ್ದು, 85,000 ಕೋಟಿ ರು.ಸರ್ಕಾರಕ್ಕೆ ಆದಾಯವಾಗಿದೆ.

8.ಸಣ್ಣ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ತೆರಿಗೆ ಇಲಾಖೆ ಫೋರಂ ಸ್ಥಾಪನೆ ಮಾಡಲಾಗಿದೆ.