ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ನಾರಾಯಣ ಕೃಷ್ಣಸಾ ಭಾಂಡಗೆ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಬಿಜೆಪಿಯಿಂದ ಒಟ್ಟು 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. 

ಬೆಂಗಳೂರು (ಫೆ.11): ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದಿಂದ ಬಾಗಲಕೋಟೆ ಜಿಲ್ಲೆಯ ನಾರಾಯಣ ಕೃಷ್ಣಸಾ ಭಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ. ಕರ್ನಾಟಕದ ರಾಜ್ಯ ಘಟಕದ ಶಿಫಾರಸ್ಸಿಗೆ ಮಣೆ ಹಾಕದ ಬಿಜೆಪಿ ಹೈಕಮಾಂಡ್ ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆ.

ಇನ್ನು ನಾರಾಯಣಸಾ ಭಾಂಡಗೆ ಅವರ ಬಗ್ಗೆ ತಿಳಿಯಬೇಕೆಂದರೆ ಭಾಂಡಗೆ ಅವರು 17 ವಯಸ್ಸಿನಲ್ಲಿಯೇ ಆರ್‌ಎಸ್‌ಎಸ್ ಸೇರ್ಪಡೆಯಾಗಿದ್ದು, 40 ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿದ್ದಾರೆ. ಬಾಗಲಕೋಟೆಯಲ್ಲಿ ಆರಂಭದ ಎಬಿವಿಪಿಯಲ್ಲಿ ಸದಸ್ಯರಾಗಿ ಕೆಲಸ ಮಾಡಿದ್ದರು. ವಿಶ್ವ ಹಿಂದೂ ಪರಿಷತ್ ನಲ್ಲೂ ಕೆಲಸ ಮಾಡಿದ್ದಾರೆ. ಇನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ಬಾಗಲಕೋಟೆ ಹಾಗೂ ವಿಜಯಪುರಕ್ಕೆ ಕಾರ್ಯಕರ್ತರ ಜೊತೆ ಸೇರಿ ರಾಮಶೀಲಾವನ್ನು ಕಳಿಸಿದ್ದಾರೆ. 

ನಾರಾಯಣಸಾ ಭಾಂಡಗೆ ಅವರು, 1973ರಲ್ಲಿ ಜನಸಂಘ ಸೇರಿದ್ದರು. ಇಂದಿರಾ ಗಾಂಧಿಯವರಿಗೆ ಕಪ್ಪು ಭಾವುಟ ಪ್ರದರ್ಶನ ಮಾಡಿದ್ದಕ್ಕೆ 18 ದಿನ ಕಾರಾಗೃಹದಲ್ಲಿ ಇದ್ದರು. ಕಾಶ್ಮೀರದಲ್ಲಿ ನಡೆದ ತಿರಂಗಾ ಯಾತ್ರೆಯಲ್ಲೂ ಭಾಗಿಯಾಗಿದ್ದರು. ಬಿಜೆಪಿ ಬಾಗಲಕೋಟೆ ಜಿಲ್ಲೆಯ ಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಮಂಡಲ ಕಾರ್ಯದರ್ಶಿ, 2004ರಲ್ಲಿ ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 6 ಬಾರಿ ರಾಜ್ಯದ ಚುನಾವಣೆಗೆ ಕೆಲಸಗಳಿಗೆ ನಿಯೋಜನೆ ಹೊಂದಿದ್ದರು. ಪಶ್ಚಿಮ ಬಂಗಾಳ, ಗೋವಾ, ತೆಲಂಗಾಣ , ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಚುನಾವಣಾ ಕಾರ್ಯಕ್ಕೆ ಬಿಜೆಪಿಯಿಂದ ನಿಯೋಜನೆ ಹೊಂದಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಅನುಭವ ಹೊಂದಿದ್ದಾರೆ.

ದೇಶದಾದ್ಯಂತ ಫೆ.27 ರಂದು 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮ ನಿರ್ದೇಶನಕ್ಕೆ ಕೊನೆಯ ದಿನಾಂಕ ಫೆ.15 ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆಯು ಫೆ.16 ರಂದು ನಡೆಯಲಿದೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಫೆ.20 ಕೊನೆಯ ದಿನವಾಗಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ: 

  1. ಬಿಹಾರ- ಧರ್ಮಶೀಲಾ ಗುಪ್ತಾ
  2. ಬಿಹಾರ- ಭೀಮ್ ಸಿಂಗ್
  3. ಛತ್ತೀಸ್‌ಗಡ- ರಾಜಾ ದೇವೇಂದ್ರ ಪ್ರತಾಪ್ ಸಿಂಗ್
  4. ಹರಿಯಾಣ- ಸುಭಾಷ್ ಬರಲಾ
  5. ಕರ್ನಾಟಕ- ನಾರಾಯಾಣ ಕೃಷ್ಣಸಾ ಭಾಂಡಗೆ
  6. ಉತ್ತರ ಪ್ರದೇಶ -ಆರ್‌ಪಿಎನ್ ಸಿಂಗ್
  7. ಉತ್ತರ ಪ್ರದೇಶ - ಸುಭಾಂಶು ತ್ರಿವೇದಿ
  8. ಉತ್ತರ ಪ್ರದೇಶ - ಚೌಧರಿ ತೇಜ್ವೀರ್ ಸಿಂಗ್
  9. ಉತ್ತರ ಪ್ರದೇಶ - ಸಾಧನಾ ಸಿಂಗ್
  10. ಉತ್ತರ ಪ್ರದೇಶ - ಅಮರಪಾಲ್ ಮೌರ್ಯ
  11. ಉತ್ತರ ಪ್ರದೇಶ - ಸಂಗೀತಾ ಬಲ್ವಂತ್
  12. ಉತ್ತರ ಪ್ರದೇಶ - ನವೀನ್ ಜೈನ್
  13. ಉತ್ತರಾಖಂಡ - ಮಹೇಂದ್ರ ಭಟ್
  14. ಪಶ್ಚಿಮ ಬಂಗಾಳ - ಸಮಿಕಾ ಭಟ್ಟಾಚಾರ್ಯ