ನವದೆಹಲಿ[ಫೆ.10]: ಬರುವ ಏಪ್ರಿಲ್‌ನಲ್ಲಿ ರಾಜ್ಯಸಭೆಯಲ್ಲಿ ಖಾಲಿ ಆಗಲಿರುವ 55 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆದರೆ ಸ್ಥಾನ ಹೆಚ್ಚಿಸಿಕೊಂಡು ಬಹುಮತ ಸಾಧಿಸುವ ಉಮೇದಿಯಲ್ಲಿದ್ದ ಬಿಜೆಪಿ ನೇತೃತ್ವದ ಎನ್‌ಡಿಎಗೆ ಈ ಚುನಾವಣೆಯಲ್ಲಿ ಸ್ಥಾನ ನಷ್ಟಆಗುವ ಸಾಧ್ಯತೆಯಿದೆ. ಇತ್ತೀಚಿನ ಕೆಲವು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲು ಆಗಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಖಾಲಿ ಆಗಲಿರುವ 55 ಸ್ಥಾನಗಳಲ್ಲಿ ಬಿಜೆಪಿ 18, ಕಾಂಗ್ರೆಸ್‌ 11 ಹಾಗೂ ಇತರ ಪಕ್ಷಗಳು 26 ಸ್ಥಾನ ಹೊಂದಿವೆ. ಒಟ್ಟಾರೆ 245 ಸ್ಥಾನಬಲದ ರಾಜ್ಯಸಭೆಯಲ್ಲಿ ಬಿಜೆಪಿ 82, ಕಾಂಗ್ರೆಸ್‌ 46 ಸ್ಥಾನ ಹೊಂದಿವೆ.

ಬಿಜೆಪಿ ಅಧಿಕಾರ ಕಳೆದುಕೊಂಡ ಮಹಾರಾಷ್ಟ್ರದಲ್ಲಿ 7 ಸ್ಥಾನಗಳು ಖಾಲಿ ಆಗಲಿವೆ. ಇದರಲ್ಲಿ ಬಿಜೆಪಿ 2, ಎನ್‌ಸಿಪಿ 2, ಕಾಂಗ್ರೆಸ್‌, ಶಿವಸೇನೆ ಹಾಗೂ ಪಕ್ಷೇತರರು ತಲಾ 1 ಸ್ಥಾನ ಹೊಂದಿದ್ದಾರೆ. ಇಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಒಂದಗಿರುವ ಕಾರಣ ಈ ಪಕ್ಷಗಳಿಗೆ ಸಿಂಹಪಾಲು ದೊರಕುವ ಸಾಧ್ಯತೆ ಇದೆ.

ಪ್ರಧಾನಿ ಮೋದಿ ಬಳಸಿದ್ದ ಪದ ರಾಜ್ಯಸಭೆ ಕಡತದಿಂದ ಔಟ್!

ಜೆಡಿಯು-ಬಿಜೆಪಿ ಆಡಳಿತದ ಬಿಹಾರದಲ್ಲಿ 5 ಸ್ಥಾನ ಖಾಲಿ ಆಗಲಿವೆ. ಇದರಲ್ಲಿ ಜೆಡಿಯುನ ಮೂರು ಹಾಗೂ ಬಿಜೆಪಿಯ 2 ಸದಸ್ಯರಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ಈ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಯು ತಲಾ 1 ಸ್ಥಾನ ಕಳೆದುಕೊಳ್ಳಲಿವೆ.

ಇನ್ನು ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವ ಕಾರಣ, ಅಲ್ಲಿನ 3 ಸ್ಥಾನಗಳಲ್ಲಿ ಒಂದರಲ್ಲಿ ಮಾತ್ರ ಜಯ ಸಾಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ 2ರಲ್ಲಿ ಗೆಲ್ಲಲು ತಂತ್ರ ರೂಪಿಸಿದೆ.

ಜಾರ್ಖಂಡ್‌ನಲ್ಲಿ 1 ಸ್ಥಾನ ಖಾಲಿ ಆಗಲಿದ್ದು, ಇಲ್ಲಿ ಬಿಜೆಪಿಯನ್ನು ಮಣಿಸಿ ಅಧಿಕಾರಕ್ಕೇರಿರುವ ಜೆಎಂಎಂ ಈ ಸ್ಥಾನ ಗೆಲ್ಲುವುದು ನಿಚ್ಚಳ.

ತಮಿಳುನಾಡಿನಲ್ಲಿ 6 ಸ್ಥಾನ ಖಾಲಿ ಆಗಲಿವೆ. ಇದರಲ್ಲಿ ಈಗ ಅಣ್ಣಾ ಡಿಎಂಕೆ 4, ಡಿಎಂಕೆ 1 ಹಾಗೂ ಸಿಪಿಎಂ 1 ಸ್ಥಾನ ಹೊಂದಿವೆ. ಆದರೆ ಡಿಎಂಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಥಾನ ವೃದ್ಧಿಸಿಕೊಂಡಿರುವ ಕಾರಣ 2 ಸೀಟು ಗೆಲ್ಲಬಹುದಾಗಿದೆ.

ಸಂಸತ್ತಿನಲ್ಲಿ ಕೇಂದ್ರ ಸಚಿವರ ಮೇಲೆ ಅಟ್ಯಾಕ್?: ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ!

ಪ.ಬಂಗಾಳದಲ್ಲಿ 5 ಸ್ಥಾನ ಖಾಲಿ ಆಗಲಿದ್ದು, ಎಲ್ಲದರಲ್ಲೂ ತೃಣಮೂಲ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಇದೆ. ಆಂಧ್ರಪ್ರದೇಶದಲ್ಲಿ ವೈಎಸ್ಸಾರ್‌ ಕಾಂಗ್ರೆಸ್‌ ಎಲ್ಲ 4 ಸ್ಥಾನಗಳಲ್ಲಿ ಜಯ ಸಾಧಿಸುವುದು ನಿಚ್ಚಳ. ವೈಎಸ್ಸಾರ್‌ ಈವರೆಗೆ ರಾಜ್ಯಸಭೆಯಲ್ಲಿ 2 ಸ್ಥಾನ ಮಾತ್ರ ಹೊಂದಿತ್ತು. ಇದರೊಂದಿಗೆ ವೈಎಸ್ಸಾರ್‌ ಬಲ 6ಕ್ಕೇರಿಲಿದೆ.