ನವದೆಹಲಿ(ಜ.22): ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರಲ್ಲಿ ಒಬ್ಬನಾಗಿರುವ ಎ.ಜಿ. ಪೆರಾರಿವಾಲನ್‌ ಬಿಡುಗಡೆ ಕುರಿತು ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಕ್ಷಮಾದಾನ ಕೋರಿ ತಮಿಳುನಾಡು ರಾಜ್ಯಪಾಲರಿಗೆ ಪೆರಾರಿವಾಲನ್‌ 2015ರ ಡಿ.30ರಂದು ಅರ್ಜಿ ಸಲ್ಲಿಸಿದ್ದ. ಈತನ ಅರ್ಜಿ ಅರ್ಹವಾಗಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವಂತೆ 2018ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ ತಮಿಳುನಾಡು ರಾಜ್ಯಪಾಲರಿಗೆ ಸೂಚನೆ ನೀಡಿತ್ತು. ಅದಾದ ಮೂರೇ ದಿನದಲ್ಲಿ ತಮಿಳುನಾಡು ಸರ್ಕಾರ ಪೆರಾರಿವಾಲನ್‌ ಶಿಕ್ಷೆಯನ್ನು ಕಡಿತಗೊಳಿಸಿ, ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಆದರೆ ಆ ಪ್ರಸ್ತಾವದ ಕುರಿತು ರಾಜ್ಯಪಾಲರು ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಈ ನಡುವೆ, ಕ್ಷಮಾದಾನ ಕುರಿತು ನಿರ್ಧಾರ ಕೈಗೊಳ್ಳುವ ಸಕ್ಷಮ ಪ್ರಾಧಿಕಾರಿ ತಮಿಳುನಾಡು ರಾಜ್ಯಪಾಲರಾಗಿದ್ದಾರೆ ಎಂದು 2020ರ ಅಕ್ಟೋಬರ್‌ನಲ್ಲಿ ಸಿಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ವಿಷಯ ಏನಿದ್ದರೂ ರಾಜ್ಯಪಾಲರು ಹಾಗೂ ಅಪರಾಧಿಗೆ ಸಂಬಂಧಿಸಿದ್ದು ಎಂದು 2020ರ ನವೆಂಬರ್‌ 20ರಂದು ಹೊಸ ಅಫಿಡವಿಟ್‌ ಹಾಕಿತ್ತು. ಆದರೂ ರಾಜ್ಯಪಾಲರು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಇದೀಗ ಮೂರ್ನಾಲ್ಕು ದಿನದಲ್ಲಿ ಅವರು ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್‌ಗೆ ತಿಳಿಸಿರುವುದರಿಂದ ಪೆರಾರಿವಾಲನ್‌ ಬಂಧ ಮುಕ್ತ ಆಸೆ ಚಿಗುರೊಡೆದಿದೆ