ಲೋಕಸಭೆ ಚುನಾವಣಾ ಹೊತ್ತಲ್ಲಿ ಕೇಂದ್ರ ಚುನಾವಣಾ ಆಯೋಗದಲ್ಲಿ ಖಾಲಿ ಇರುವ ಇಬ್ಬರು ಆಯುಕ್ತರ ಸ್ಥಾನಕ್ಕೆ ಗುರುವಾರ ಕೇಂದ್ರ ಸರ್ಕಾರ ಇಬ್ಬರು ಆಯುಕ್ತರನ್ನು ನೇಮಕ ಮಾಡಿದೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಇದನ್ನು ಪಿಐಬಿ ಫೇಕ್ ನ್ಯೂಸ್ ಎಂದಿದೆ.
ನವದೆಹಲಿ (ಮಾ.13): ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಕೇಂದ್ರ ಚುನಾವಣಾ ಆಯೋಗದಲ್ಲಿ ಖಾಲಿ ಇದ್ದ ಇಬ್ಬರು ಆಯುಕ್ತರ ಸ್ಥಾನಕ್ಕೆ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದೆ. ರಾಜೇಶ್ ಕುಮಾರ್ ಗುಪ್ತಾ ಹಾಗೂ ಪ್ರಿಯಾಂಶ್ ಶರ್ಮ ಅವರನ್ನು ಚುನಾವಣಾ ಅಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎನ್ನುವ ನೋಟಿಫಿಕೇಶನ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಆದರೆ, ಇದು ಫೇಕ್‌ನ್ಯೂಸ್ ಎಂದು ಪಿಐಬಿ ಖಚಿತಪಡಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಗುರುವಾರ ದೆಹಲಿಯಲ್ಲಿ ಸಭೆ ಸೇರಿ ಹೊಸ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲಿದೆ. ಪ್ರಸ್ತುತ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರವೇ ಸೇವೆ ಸಲ್ಲಿಸುತ್ತಿದ್ದಾರೆ. ಚುನಾವಣಾ ಆಯುಕ್ತರಾಗಿದ್ದ ಅನೂಪ್ ಚಂದ್ರ ಪಾಂಡೆ ನಿವೃತ್ತರಾಗಿದ್ದರೆ, ಅರುಣ್ ಗೋಯೆಲ್ ಕೆಲ ದಿನಗಳ ಹಿಂದೆ ತಮ್ಮ ಸ್ಥಾನಕ್ಕೆ ಹಠಾತ್ ಆಗಿ ರಾಜೀನಾಮೆ ನೀಡಿದ್ದರು. ಅನೂಪ್ ಚಂದ್ರ ಪಾಂಡೆ ಫೆಬ್ರವರಿ 15ರಂದು ನಿವೃತ್ತರಾಗಿದ್ದರೆ, ಅರುಣ್ ಗೋಯೆಲ್ ಮಾರ್ಚ್ 9 ರಂದು ರಾಜೀನಾಮೆ ನೀಡಿದ್ದರು.
ಸಭೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವರೊಬ್ಬರು ಉಪಸ್ಥಿತರಿದ್ದರು ಎಂದು ಹರಿಬಿಡಲಾಗಿದ್ದ ಪೋಸ್ಟ್‌ನಲ್ಲಿ ತಿಳಿಸಲಾಗಿತ್ತು. ನಿವೃತ್ತ ಐಎಎಸ್ ಅಧಿಕಾರಿ ಡಾ.ರಾಜೇಶ್ ಕುಮಾರ್ ಗುಪ್ತಾ ಹಾಗೂ ಪ್ರಿಯಾಂಶ್ ಶರ್ಮ ಇಬ್ಬರೂ ಕೂಡ ಮಾರ್ಚ್ 13ರಂದೇ ಅಧಿಕಾರ ವಹಿಸಿಕೊಂಡಿದ್ದಾರೆ. ತಕ್ಷಣವೇ ಇವರ ನೇಮಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ ಎನ್ನಲಾಗಿತ್ತು. ಆದರೆ, ಪಿಐಬಿ ಇದು ಸುಳ್ಳು ಸುದ್ದಿ ಎಂದಿದ್ದು, ಇಂಥ ಯಾವುದೇ ನೋಟಿಫಿಕೇಶನ್ ನೀಡಲಾಗಿಲ್ಲ ಎಂದಿದೆ.
