ರಾಜಸ್ಥಾನದಲ್ಲಿ ಇಂಟರ್ನೆಟ್ ಸೇವೆ ಬಂದ್: ಕಾಂಗ್ರೆಸ್‌ಗೆ ಕಾಶ್ಮೀರ ನೆನಪಿಸಿದ ಬಿಜೆಪಿ!
* ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ ಇಂಟರ್ನೆಟ್ ಬ್ಯಾನ್ ವಿಚಾರ
* ಗೆಹ್ಲೋಟ್ ಸರ್ಕಾರದ ನಡೆಗೆ ಬಿಜೆಪಿ ಕಿಡಿ
* ನೀವು ಮಾಡಿದ್ರೆ ಪ್ರಜಾಪ್ರಭುತ್ವ, ನಾವು ಮಾಡಿದ್ರೆ ಪ್ರಜಾಪ್ರಭುತ್ವ ವಿರೋದಿಯೇ?
ಜೈಪುರ(ಅ.28): ರಾಷ್ಟ್ರ ರಾಜಕಾರಣದಲ್ಲಿ ಸದ್ಯ ಬಿಜೆಪಿ (BJP) ಹಾಗೂ ಕಾಂಗ್ರೆಸ್(Congress) ನಾಯಕರ ಮಧ್ಯೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ವಿಚಾರ ಭಾರೀ ಕಾವು ಒಡೆದಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ (Rajasthan) ಬುಧವಾರ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಜನ ಸಾಮಾನ್ಯರು ಬಹಳಷ್ಟು ಸಮಸ್ಯೆಗಳನ್ನೆದುರಿಸಿದ್ದಾರೆ. ಹೀಗಿರುವಾಗ ಅತ್ತ ಬಿಜೆಪಿ ಈ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ.
ವಿದ್ಯಾರ್ಥಿಗೆ ನೆಟ್ವರ್ಕ್ ಸಮಸ್ಯೆ, ಆನ್‌ಲೈನ್ ಕ್ಲಾಸ್‌ಗೆ ಪ್ರತಿ ದಿನ ಏರಲೇಬೇಕು ಪರ್ವತ!
ಹೌದು ಬುಧವಾರದಂದು ರಾಜಸ್ಥಾನದಲ್ಲಿ RPSC RAS Exam 2021 ಆಯೋಜಿಸಲಾಗಿತ್ತು. ಹೀಗಿರುವಾಗ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಬಾರದೆಂಬ ಉದ್ದೇಶದಿಂದ ಜೈಪುರ, ಧೋಲ್ಪುರ್, ಸವಾಯಿ ಮಾಧೋಪುರ್, ಭಿಲ್ವಾರಾ, ಅಜ್ಮೀರ್, ಕರೌಲಿ, ಹನುಮಾನ್ಗಢ್, ನಾಗೌರ್ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ (Internet Service) ಸ್ಥಗಿತಗೊಳಿಸಲಾಗಿತ್ತು. ಇನ್ನು ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಇಂಟರ್ನೆಟ್ ಸೇವೆ ಜೊತೆ ಸಾಮಾಜಿಕ ಮಾಧ್ಯಮ ಹಾಗೂ ಬಲ್ಕ್ ಮೆಸೇಜ್ ಸರ್ವಿಸ್ ಕೂಡಾ ನಿಷೇಧಿಸಲಾಗಿತ್ತು.
ಸರ್ಕಾರದ ಈ ನಡೆಯಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಂಡ ಪ್ರದೇಶದ ಜನರು ಇದರಿಂದ ಸಮಸ್ಯೆಗೀಡಾಗಿದ್ದಾರೆ. ಅನೇಕರು ಕರೆ ಮಾಡಲಾಗದೆ, ಆಫೀಸ್ ಕೆಲಸ ಇದ್ದವರೂ ಕೆಲಸ ಮಾಡಲಾಗದೆ ಪರದಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆನ್‌ಲೈನ್ ಅಪಾಟ್‌ಮೆಂಟ್ ಪಡೆಯಲೂ ಸಾಧ್ಯವಾಗಿಲ್ಲ. ಹೀಗಿರುವಾಗ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಈ ನಡೆಯನ್ನೇ ಮುಂದಿಟ್ಟುಕೊಂಡ ಬಿಜೆಪಿ ಕಾಶ್ಮೀರ ವಿಚಾರವನ್ನಿಟ್ಟುಕೊಂಡು ತಿರುಗೇಟು ನೀಡಿದೆ.
ಇಂಟರ್ನೆಟ್ ಮೂಲಭೂತ ಹಕ್ಕು, ಬಡವರಿಗೆ ಉಚಿತ!
ಈ ಹಿಂದೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದುಗೊಳಿಸಿದ್ದ ವೇಳೆ ಹಿಂಸಾಚಾರ ತಡೆಯುವ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದ ಕಾರಣದಿಂದ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಅಂದು ಕಾಂಗ್ರೆಸ್ ಕೇಂದ್ರದಲ್ಲಿದ್ದ ಬಿಜೆಪಿ ನಡೆಯನ್ನು ಖಂಡಿಸಿತ್ತು. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಹಣಿದಿತ್ತು.
ಹೀಗಿರುವಾಗ ಬಿಜೆಪಿ ರಾಜಸ್ಥಾನ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ಮೇಲೆ ಸೇಡು ತೀರಿಸಿದೆ. ಹಿಂಸಾಚಾರ ತಡೆಯಲು, ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದರೆ ಅದು ನಿಮ್ಮ ಪಾಲಿಗೆ ಪ್ರಜಾಪ್ರಭುತ್ವ ವಿರೋಧಿ ನಡೆ. ಆಧರೀಗ ರಾಜಸ್ಥಾನದಲ್ಲಿ ಎಂಟ್ರೆನ್ಸ್ ಪರೀಕ್ಷೆ ವೇಳೆ ನಕಲು ಮಾಡುವುದನ್ನು ತಡೆಯಲು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ್ದು ಪ್ರಜಾಪ್ರಭುತ್ವ ನಡೆಯಲ್ಲವೇ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್‌ನ ಈ ದ್ವಂದ್ವ ನೀತಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಬಿಜೆಪಿ ನಾಯಕರು ಸೇರಿದಂತೆ ಅನೇಕರು ಈ ಬಗ್ಗೆ ಕಾಂಗ್ರೆಸ್ ಕಾಲೆಳೆದಿದ್ದಾರೆ.
ಎಷ್ಟು ಬದಲಾದೀತು ಕೊರೋನೋತ್ತರ ಭಾರತ?
ಕಾಶ್ಮೀರದಲ್ಲಿ 18 ತಿಂಗಳು ಇಂಟರ್ನೆಟ್ ಸೇವೆ ಬಂದ್
ಜಮ್ಮ ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ(ಆರ್ಟಿಕಲ್ 370) ವೇಳೆ ಮುಂಜಾಗ್ರತ ಕ್ರಮವಾಗಿ ಜಮ್ಮು ಮತು ಕಾಶ್ಮೀರದಾದ್ಯಂತ 4ಜಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಅಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದಾಗಿ ಬರೋಬ್ಬರಿ 18 ತಿಂಗಳ ಬಳಿಕ ಫೆ.05 ಮಧ್ಯರಾತ್ರಿಯಿಂದಲೇ 4ಜಿ ಇಂಟರ್ನೆಟ್ ಮರು ಆರಂಭಗೊಂಡಿತ್ತು
ವಿಶ್ವದಲ್ಲೇ ಸುದೀರ್ಘ ದಿನ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ಪಟ್ಟಿಗೆ ಇದೀಗ ಜಮ್ಮು ಮತ್ತು ಕಾಶ್ಮೀರ ಸೇರಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ ಆರ್ಟಿಕಲ್ 370 ರದ್ದತಿ ಕಾರಣ, ಜಮ್ಮು ಮತ್ತು ಕಾಶ್ಮೀರದ ಹಲವು ನಾಯಕರನ್ನು ಗೃಹ ಬಂಧನದಲ್ಲಿಡಲಾಗಿತ್ತು.