ಜೈಪುರ[ನ.23]: ಮದುವೆಯಾದ ಬಳಿಕ ಮಗಳನ್ನು ಗಂಡನ ಮನೆಗೆ ಬೀಳ್ಕೊಡಲು ತಂದೆಯೋರ್ವ ಹೆಲಿಕಾಪ್ಟರ್‌ ಅನ್ನೇ ಬುಕ್‌ ಮಾಡಿದ ಅಪರೂಪದ ಘಟನೆ ರಾಜಸ್ಥಾನದ ಝುಂಝನು ನಗರದಲ್ಲಿ ನಡೆದಿದೆ.

ಇತ್ತೀಚೆಗಷ್ಟೇ ಸಂದೀಪ್‌ ಎಂಬುವರನ್ನು ವರಿಸಿದ ರೀನಾ ಎಂಬುವರೇ ಹೆಲಿಕಾಪ್ಟರ್‌ನಲ್ಲಿ ಗಂಡನ ಮನೆ ಸೇರಿದ ವಧು. ಅಪರೂಪದಲ್ಲೇ ಅಪರೂಪವಾದ ಈ ಘಟನೆ ಕಣ್ತುಂಬಿಕೊಳ್ಳಲು ಭಾರೀ ಪ್ರಮಾಣದ ಶಾಲಾ ವಿದ್ಯಾರ್ಥಿಗಳು, ಜನ ಸಾಮಾನ್ಯರು, ವೃದ್ಧರ ದಂಡೇ ನೆರೆದಿತ್ತು.

ಇತ್ತೀಚೆಗಷ್ಟೇ ಮಹೇಂದ್ರ ಸಿಂಗ್‌ ಸೋಲಖ್‌ ಎಂಬುವರು ತಮ್ಮ ಪುತ್ರಿಯಾದ ರೀನಾ ಎಂಬುವರನ್ನು ಸುಲ್ತಾನಾ ಪಟ್ಟಣದ ಸಂದೀಪ್‌ ಎಂಬುವರ ಜೊತೆ ವಿವಾಹ ನೆರವೇರಿಸಿಕೊಟ್ಟಿದ್ದರು. ಆದರೆ, ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಹೆಲಿಕಾಪ್ಟರ್‌ನಲ್ಲೇ ಬೀಳ್ಕೊಡಬೇಕು ಎಂಬುದಾಗಿ ಮದುವೆಗೆ ಒಂದು ವರ್ಷ ಇರುವ ಮುಂಚೆಯೇ ಮಹೇಂದ್ರ ಸಿಂಗ್‌ ನಿರ್ಧರಿಸಿದ್ದರು.

ತಮ್ಮ ಈ ಆಕಾಂಕ್ಷೆಯನ್ನು ತಮ್ಮ ಕುಟುಂಬ ಸದಸ್ಯರ ಜೊತೆ ಹಂಚಿಕೊಂಡಿದ್ದರು. ಇದಕ್ಕೆ ಕುಟುಂಬ ಸದಸ್ಯರೆಲ್ಲರೂ ಸಮ್ಮತಿ ಸೂಚಿಸಿದ್ದರು. ಈ ಪ್ರಕಾರ, ಮಗಳನ್ನು ಮದುವೆ ಮಾಡಿಕೊಟ್ಟಿರುವ ಮಹೇಂದ್ರ ಸಿಂಗ್‌ ಅವರು ತಾವು ಅಂದುಕೊಂಡಂತೆಯೇ, ಮಗಳನ್ನು ಹೆಲಿಕಾಪ್ಟರ್‌ನಲ್ಲೇ ಗಂಡನ ಮನೆಗೆ ಕಳುಹಿಸಿದ್ದಾರೆ.