ನವದೆಹಲಿ(ಮೇ.02): ಲಾಕ್‌ಡೌನ್‌ನಿಂದಾಗಿ ತವರಿಗೆ ತೆರಳಲಾಗದೆ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಜನರಿಗಾಗಿ ಕೇಂದ್ರ ಗೃಹ ಸಚಿವಾಲಯ ವಿಶೇಷ ರೈಲು ಸಂಚಾರಕ್ಕೆ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ರೈಲ್ವೆ ಸಚಿವಾಲಯವು ಕಾರ್ಮಿಕ ದಿವಸವಾದ ಮೇ 1ರ ಶುಕ್ರವಾರ ‘ಶ್ರಮಿಕ ಸ್ಪೆಷಲ್‌’ ಹೆಸರಿನಲ್ಲಿ 6 ರೈಲುಗಳ ಸಂಚಾರ ಘೋಷಿಸಿದೆ.

ಈ 6 ರೈಲುಗಳ ಸಂಚಾರ ಶುಕ್ರವಾರ ನಸುಕಿನಿಂದಲೇ ಆರಂಭವಾಗಿದೆ. ಮೊದಲ ರೈಲು ಹೈದರಾಬಾದ್‌ನ ಲಿಂಗಂಪಲ್ಲಿಯಿಂದ ಜಾರ್ಖಂಡ್‌ನ ಹಟಿಯಾಗೆ ಶುಕ್ರವಾರ ಬೆಳಗ್ಗೆ 4.50ಕ್ಕೆ ಪ್ರಯಾಣ ಆರಂಭಿಸಿತು. ನಂತರ 2ನೇ ರೈಲು ಕೇರಳದ ಅಲುವಾದಿಂದ ಒಡಿಶಾದ ಭುವನೇಶ್ವರಕ್ಕೆ ಸಂಜೆ 6 ಗಂಟೆಗೆ ಪ್ರಯಾಣ ಶುರುಮಾಡಿತು. ಉಳಿದ 4 ರೈಲುಗಳು ಸಂಚಾರ ಶುಕ್ರವಾರ ರಾತ್ರಿ ಆರಂಭವಾಯಿತು. ಈ ರೈಲುಗಳು ನಾಸಿಕ್‌-ಲಖನೌ, ನಾಸಿಕ್‌-ಭೋಪಾಲ್‌, ಜೈಪುರ-ಪಟನಾ ಹಾಗೂ ಕೋಟಾ-ಹಟಿಯಾ ನಡುವೆ ಸಂಚರಿಸಲಿವೆ. ರೈಲುಗಳ ಮೂಲಕ ವಲಸಿಗ ಕಾರ್ಮಿಕರು, ಪ್ರವಾಸಿಗರು, ಧಾರ್ಮಿಕ ಯಾತ್ರಿಕರು ಹಾಗೂ ವಿದ್ಯಾರ್ಥಿಗಳನ್ನು ತವರಿಗೆ ಕಳಿಸಲಾಗುತ್ತಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 72 ಜನರ ಒಂದು ಬೋಗಿಯಲ್ಲಿ 54 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ರೈಲುಗಳು ಗಮ್ಯ ತಲುಪಿದ ಮೇಲೆ ಅಗತ್ಯ ಬಿದ್ದರೆ ಅವರನ್ನು ನಿಗದಿತ ಸ್ಥಳದಲ್ಲಿ ಕ್ವಾರಂಟೈನ್‌ ಮಾಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಸ್ಲೀಪರ್‌ ಕ್ಲಾಸ್‌ ಪ್ರಯಾಣ ದರ, ಊಟಕ್ಕೆ 30 ರು., ನೀರಿಗೆ 20 ರು.ಗಳನ್ನು ರೈಲ್ವೆ ವಿಧಿಸಿದೆ. ಇದನ್ನು ರಾಜ್ಯ ಸರ್ಕಾರಗಳು ಪಾವತಿಸಬೇಕಾಗುತ್ತದೆ.

ವಲಸಿಗರ ಸಾಗಿಸಲು ಬಸ್‌ ಬದಲು ವಿಶೇಷ ರೈಲು?

ಮಾರ್ಗಸೂಚಿಗಳು

- ಸ್ಯಾನಿಟೈಸ್‌ ಮಾಡಿದ ಬಸ್‌ನಲ್ಲಿ ಕಾರ್ಮಿಕರನ್ನು ರಾಜ್ಯಗಳು ಕರೆತರಬೇಕು. ಸಾಮಾಜಿಕ ಅಂತರ ಪಾರಲಿಸಬೇಕು

- ಪ್ರಯಾಣಿಕರಿಗೆ ಮಾಸ್ಕ್‌, ಆರೋಗ್ಯ ತಪಾಸಣೆ ಕಡ್ಡಾಯ. ಊಟ, ನೀರಿಗೆ ರಾಜ್ಯಗಳೇ ವ್ಯವಸ್ಥೆ ಮಾಡಬೇಕು

- ಸೋಂಕು ಲಕ್ಷಣ ಇಲ್ಲದಿದ್ದರೆ ಮಾತ್ರ ಪ್ರಯಾಣ ಅವಕಾಶ. ರೈಲುಗಳಲ್ಲೂ ಸಾಮಾಜಿಕ ಅಂತರ

- ಗಮ್ಯ ತಲುಪಿದಾಗ ರಾಜ್ಯಗಳೇ ಪ್ರಯಾಣಿಕರನ್ನು ಬರಮಾಡಿಕೊಳ್ಳಬೇಕು. ಬಸ್‌ ವ್ಯವಸ್ಥೆ ಮಾಡಬೇಕು

- ಸರ್ಕಾರಗಳು ಆರೋಗ್ಯ ತಪಾಸಣೆ ಮಾಡಿಸಬೇಕು. ಸೋಂಕು ಶಂಕೆ ಉಳ್ಳವರನ್ನು ಕ್ವಾರಂಟೈನ್‌ ಮಾಡಬೇಕು

- ವಲಸಿಗರನ್ನು ಕಳಿಸುತ್ತಿರುವ ರಾಜ್ಯಗಳು ವಿವಿಧ ಬ್ಯಾಚ್‌ಗಳಲ್ಲಿ ಕಾರ್ಮಿಕರನ್ನು ವರ್ಗೀಕರಿಸಿ ರೈಲು ನಿಲ್ದಾಣಕ್ಕೆ ಕರೆತರಬೇಕು

- ಶುದ್ಧೀಕರಿಸಿದ ಬಸ್‌ಗಳ ಮೂಲಕ ರೈಲು ನಿಲ್ದಾಣಕ್ಕೆ ಕರೆತರಲು ವ್ಯವಸ್ಥೆ ಮಾಡಿರಬೇಕು

- ಬಸ್‌ಗಳಲ್ಲಿ ಸಾಮಾಜಿಕ ಅಂತರ ಹಾಗೂ ಇತರ ಮುಂಜಾಗ್ರತಾ ಕ್ರಮ ಕೈಗೊಂಡಿರಬೇಕು

- ಪ್ರತಿ ಪ್ರಯಾಣಿಕನೂ ಮಾಸ್ಕ್‌ ಧರಿಸುವುದು ಕಡ್ಡಾಯ

- ಕಳಿಸುತ್ತಿರುವ ರಾಜ್ಯಗಳಿಂದ ಪ್ರಯಾಣ ಆರಂಭವಾಗುವ ನಿಲ್ದಾಣದಲ್ಲಿ ಊಟ, ನೀರಿಗೆ ವ್ಯವಸ್ಥೆ

- ರೈಲು ಏರುವ ಮುನ್ನ ಪ್ರಯಾಣಿಕರ ಆರೋಗ್ಯ ತಪಾಸಣೆ

- ಪ್ರಯಾಣಿಕಗೆ ಸೋಂಕುಲಕ್ಷಣ ಇಲ್ಲದಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ

- ರೈಲುಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಶುಚಿತ್ವದ ಮೇಲೆ ನಿಗಾ

- ರೈಲು ಸಂಚಾರದ ವೇಳೆ ರೈಲ್ವೆ ಇಲಾಖೆಯಿಂದಲೇ ಊಟದ ವ್ಯವಸ್ಥೆ

- ರೈಲು ತನ್ನ ಗಮ್ಯ ಸ್ಥಳ ತಲುಪಿದಾಗ ಎಲ್ಲ ಪ್ರಯಾಣಿಕರನ್ನು ರಾಜ್ಯ ಸರ್ಕಾರಗಳು ಬರಮಾಡಿಕೊಳ್ಳಬೇಕು

- ಎಲ್ಲರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಿ, ಅಗತ್ಯ ಬಿದ್ದರೆ ಕ್ವಾರಂಟೈನ್‌

- ಆರೋಗ್ಯವಂತರನ್ನು ಮನೆಗೆ ತಲುಪಿಸಲು ರಾಜ್ಯ ಸರ್ಕಾರಗಳಿಂದ ಬಸ್‌ ವ್ಯವಸ್ಥೆ

ವಲಸಿಗರು ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲು ರೈಲ್ವೆ ಸಚಿವಾಲಯವು ನೋಡಲ್‌ ಅಧಿಕಾರಿಗಳನ್ನು ನೇಮಿಸಿದೆ.

ರಾಜ್ಯಗಳ ಬೇಡಿಕೆಗೆ ಮನ್ನಣೆ:

ಲಾಕ್‌ಡೌನ್‌ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ರೈಲಿನ ವ್ಯವಸ್ಥೆ ಮಾಡಬೇಕು ಎಂದು ರಾಜ್ಯಗಳು ಕೇಳಿದ್ದವು. ಈ ಬೇಡಿಕೆಗೆ ಕಾರ್ಮಿಕರ ದಿನವೇ ಮನ್ನಣೆ ಸಿಕ್ಕಿದ್ದು ವಿಶೇಷ.

ಲಾಕ್‌ಡೌನ್‌ನಿಂದಾಗಿ ವಿವಿಧ ನಗರಗಳಲ್ಲಿ ಸಿಲುಕಿರುವ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಕೇಂದ್ರ ಸರ್ಕಾರ ಬುಧವಾರವಷ್ಟೇ ಅನುಮತಿ ನೀಡಿತ್ತು. ರಾಜ್ಯ ಸರ್ಕಾರಗಳು ಬಸ್‌ಗಳಲ್ಲಿ ಅವರನ್ನು ಕಳಿಸಿಕೊಡಬೇಕು ಎಂದು ಸೂಚಿಸಿತ್ತು. ಆದರೆ, ಲಕ್ಷಾಂತರ ಕಾರ್ಮಿಕರು ಇರುವುದರಿಂದ ಬಸ್‌ಗಳಲ್ಲಿ ದೂರದ ಊರುಗಳಿಗೆ ಅಥವಾ ನೆರೆ ರಾಜ್ಯಗಳಿಗೆ ಕಳಿಸಿಕೊಡುವುದು ಕಷ್ಟ, ಹೀಗಾಗಿ ರೈಲಿನಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಿ ಎಂದು ರಾಜಸ್ಥಾನ, ಜಾರ್ಖಂಡ, ಬಿಹಾರ, ಕೇರಳ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ತೆಲಂಗಾಣ, ಪಂಜಾಬ್‌ ಮುಂತಾದ ರಾಜ್ಯಗಳು ಕೇಳಿದ್ದವು.