ನವದೆಹಲಿ (ಮೇ. 01):  ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರನ್ನು ಅವರ ತವರು ರಾಜ್ಯಗಳಿಗೆ ಬಸ್‌ನಲ್ಲಿ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಹೊಸ ಸಮಸ್ಯೆ ಎದುರಾಗಿದೆ.

ಹೀಗೆ ಸಿಲುಕಿರುವ ವಲಸೆ ಕಾರ್ಮಿಕರು ಲಕ್ಷಾಂತರ ಸಂಖ್ಯೆಯಲ್ಲಿದ್ದು, ಅವರನ್ನು ಬಸ್‌ನಲ್ಲಿ ಸಾಗಿಸುವುದು ಕಷ್ಟವಾದ್ದರಿಂದ ರೈಲಿನ ವ್ಯವಸ್ಥೆ ಮಾಡಿಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯಗಳು ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಶೇಷ ರೈಲುಗಳನ್ನು ಓಡಿಸುವ ಕುರಿತು ಚಿಂತನೆಯಲ್ಲಿ ತೊಡಗಿದೆ.

ಗುಡ್‌ ನ್ಯೂಸ್: 95 ವರ್ಷದ ಅಜ್ಜಿ ಕೊರೋನಾದಿಂದ ಗುಣಮುಖ

ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ ಸೇರಿ 6 ರಾಜ್ಯಗಳು ವಲಸೆ ಕಾರ್ಮಿಕರನ್ನು ಕರೆದೊಯ್ಯಲು ವಿಶೇಷ ರೈಲು ಓಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಉತ್ತರ ಪ್ರದೇಶ ಸರ್ಕಾರವು ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ತನ್ನ ವಲಸೆ ಕಾರ್ಮಿಕರನ್ನು ಕರೆತಂದ ಮೇಲೆ ಅವರನ್ನು ಸಾಮೂಹಿಕವಾಗಿ ಕ್ವಾರಂಟೈನ್‌ ಮಾಡಲು ನಿರ್ಧರಿಸಿದ್ದು, 10 ಲಕ್ಷ ಜನರನ್ನು ಕ್ವಾರಂಟೈನ್‌ ಮಾಡಿಕೊಳ್ಳಲು ಸಿದ್ಧತೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶಿಸಿದ್ದಾರೆ.

ಕೇಂದ್ರದ ಆದೇಶದ ಬೆನ್ನಲ್ಲೇ ರಾಜಸ್ಥಾನ ಸರ್ಕಾರ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಹಾಗೂ ಗಡಿಯಿಂದ ತನ್ನ ರಾಜ್ಯದವರನ್ನು ಕರೆತರಲು ಆರಂಭಿಸಿದ್ದು, ಗುರುವಾರ ಸುಮಾರು 40,000 ಜನರನ್ನು ಸಾಗಿಸಿದೆ. ರಾಜಸ್ಥಾನವೊಂದರಲ್ಲೇ ಸುಮಾರು 6 ಲಕ್ಷ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ನೋಂದಣಿ ಮಾಡಿಕೊಂಡಿದ್ದಾರೆ. ಅವರ ಪೈಕಿ 26,000 ಜನರನ್ನು ಮಧ್ಯಪ್ರದೇಶದ ಗಡಿಗೂ, 2000 ಜನರನ್ನು ಹರ್ಯಾಣದ ಗಡಿಗೂ ಸರ್ಕಾರ ಗುರುವಾರ ಕಳಿಸಿಕೊಟ್ಟಿದೆ.