ನವದೆಹಲಿ(ಮೇ. 21): ಲಾಕ್‌ಡೌನ್‌ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ರೈಲು ಸಂಚಾರ ಪುನಾರಂಭಿಸಲು ಉದ್ದೇಶಿಸಿರುವ ಭಾರತೀಯ ರೈಲ್ವೆ, ಮೊದಲ ಹಂತದಲ್ಲಿ ಜೂ.1ರಿಂದ 200 ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ. ನಾನ್‌- ಎಸಿ ರೈಲುಗಳು ಇವಾಗಿರಲಿದ್ದು, ಈ ರೈಲುಗಳ ಟಿಕೆಟ್‌ ಬುಕಿಂಗ್‌ ಆನ್‌ಲೈನ್‌ ಮೂಲಕ ಇಂದು ಗುರುವಾರ ಬೆಳಗ್ಗೆ ಹತ್ತು ಗಂಟೆಯಿಂದ ಆರಂಭಿಸಲಾಗಿದೆ. ಈ ಮೂಲಕ ರಿಸರ್ವೇಶನ್ ಆರಂಭಿಸಲಾಗಿದೆ. 

ಇನ್ನು ರೈಲು ಸೇವೆ ಆರಂಭವಾಗುವ ಕುರಿತು ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿ 'ವಲಸಿಗ ಕಾರ್ಮಿಕರ ಸಾಗಣೆಗೆ ಸಂಚರಿಸುತ್ತಿರುವ ಶ್ರಮಿಕ ಸ್ಪೆಷಲ್‌ ರೈಲು ಹಾಗೂ ರಾಜಧಾನಿ ಮಾರ್ಗಗಳಲ್ಲಿ ಸಂಚರಿಸುತ್ತಿರುವ 15 ಜತೆ ವಿಶೇಷ ರೈಲುಗಳ ಜತೆಗೆ 200 ನಾನ್‌ ಎಸಿ ರೈಲುಗಳ ನಿತ್ಯ ಸಂಚಾರವನ್ನು ಜೂ.1ರಿಂದ ನಿತ್ಯ ಆರಂಭಿಸಲಾಗುತ್ತದೆ' ಎಂದು ತಿಳಿಸಿದ್ದರು. 

ಇನ್ನು ಟಿಕೆಟ್ ಬುಕ್ಕಿಂಗ್ ಸಂಬಂಧ ಮಾಹಿತಿ ನಿಡಿರುವ ರೈಲ್ವೇ ಇಲಾಖೆ ಈ ರೈಲುಗಳಿಗೆ ಇ ಟಿಕೆಟ್ IRCTC ವೆಬ್‌ಸೈಟ್ ಅಥವಾ ಮೊಬೈಲ್‌ ಆಪ್‌ನಿಂದಲೇ ಜಾರಿಗೊಳಿಸಲಾಗುತ್ತದೆ. ರೈಲ್ವೇ ಕೇಂದ್ರ ಅಥವಾ ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ನೀಡುವುದಿಲ್ಲ. ಅಲ್ಲದೇ ವೇಯ್ಟಿಂಗ್ ಟಿಕೆಟ್ ಪಡೆಯುವವರಿಗೆ ರೈಲು ಹತ್ತಲು ಅನುಮತಿ ಇರುವುದಿಲ್ಲ. ಟಿಕೆಟ್ ಬುಕ್ಕಿಂಗ್ ಮಾಡಲು ಅಡ್ವಾನ್ಸ್ ರಿಸರ್ವೇಶನ್ ಸಮಯ ಮೂವತ್ತು ದಿನಗಳಾಗಿರುತ್ತವ(ಮೂವತ್ತು ದಿನಗಳ ಮೊದಲೇ ಟಿಕೆಟ್ ಕಾಯ್ದಿರಿಸಬಹುದು). ಅಲ್ಲದೇ ಈಗಾಗಲೇ ಜಾರಿಯಲ್ಲಿರುವ ನಿಯಮದಂತೆ ಆರ್‌ಎಸ್‌ಸಿ ಹಾಗೂ ವೇಯ್ಟಿಂಗ್ ಲಿಸ್ಟ್ ಇರುತ್ತದೆ ಎಂದು ತಿಳಿಸಿದೆ.