ನವದೆಹಲಿ[ನ.23]: ದೆಹಲಿ-ಲಖನೌ ಮಾರ್ಗದ ತೇಜಸ್‌ ಎಕ್ಸ್‌ಪ್ರೆಸ್‌ ರೈಲು ಖಾಸಗಿಕರಣಗೊಂಡ ಬೆನ್ನಲ್ಲೇ, ಈ ರೈಲಿನ ಪ್ರಯಾಣದ ವೇಳೆ ಪ್ರಯಾಣಿಕರ ಮನೆಯಲ್ಲಿ ಕಳುವಾದರೆ, ಅಂಥ ಪ್ರಯಾಣಿಕರಿಗೆ 1 ಲಕ್ಷ ರು.ವರೆಗೂ ವಿಮೆ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಪ್ರಯಾಣಿಕರು ಮನೆಯ ಕಡೆಗಿನ ಚಿಂತೆಗಳಿಲ್ಲದೆ ನೆಮ್ಮದಿಯಾಗಿ ಸುಖಕರವಾಗಿ ಸಂಚರಿಸಲಿ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ. ಪ್ರಯಾಣಿಕರಿಗೆ ಉಚಿತವಾಗಿ ಈ ವಿಮೆ ಸೌಲಭ್ಯ ಕಲ್ಪಿಸಲು ಐಆರ್‌ಸಿಟಿಸಿ ನಿರ್ಧರಿಸಿರುವುದು ವಿಶೇಷ ಸಂಗತಿ.

ಈ ವಿಮೆ ಸೌಲಭ್ಯ ಪಡೆಯಲು ರೈಲು ಪ್ರಯಾಣದ ವೇಳೆ ತಮ್ಮ ಮನೆಯಲ್ಲಿ ಕಳವು ನಡೆದಿದೆ ಎಂಬುದರ ಬಗ್ಗೆ ದೂರು ದಾಖಲಿಸಬೇಕು. ರೈಲು ಪ್ರಯಾಣದ ವೇಳೆಯೇ ಪ್ರಯಾಣಿಕರ ಮನೆಯಲ್ಲಿ ಕಳವು ಪ್ರಕರಣ ನಡೆದಿರುವುದು ಸಾಬೀತಾದರೆ, ಅಂಥ ಪ್ರಯಾಣಿಕರಿಗೆ ವಿಮೆ ಹಣವನ್ನು ಪಾವತಿಸಲಾಗುತ್ತದೆ. ಈ ಕುರಿತಾದ ಒಪ್ಪಂದಕ್ಕೆ ಐಆರ್‌ಸಿಟಿಸಿಯು ಲಿಬರ್ಟಿ ಜನರಲ್‌ ಇನ್ಶುರೆನ್ಸ್‌ ಕಂಪನಿ ಲಿ. ಜೊತೆ ಒಪ್ಪಂದ ಮಾಡಿಕೊಂಡಿದೆ.

ಅಲ್ಲದೆ, ಮುಂದಿನ ದಿನಗಳಲ್ಲಿ ಖಾಸಗೀಕರಣಗೊಳ್ಳಲಿರುವ ಮುಂಬೈ-ಅಹಮದಾಬಾದ್‌ ಮಾರ್ಗದ ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನಲ್ಲೂ ಈ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಐಆರ್‌ಸಿಟಿಸಿ ಚಿಂತನೆ ನಡೆಸಿದೆ.