ರೈಲ್ವೆ ನೇಮಕಾತಿ ಹಗರಣ: ಭೂಮಿ ನೀಡಿದ 1458 ಮಂದಿ ಹೆಸರು ತೇಜಸ್ವಿ ಹಾರ್ಡ್‌ಡಿಸ್ಕಲ್ಲಿ ಪತ್ತೆ

ಬಿಹಾರದ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ರೈಲ್ವೆ ಮಂತ್ರಿಯಾಗಿದ್ದಾಗ ಇಲಾಖೆಯಲ್ಲಿ ನೌಕರಿ ನೀಡಲು ಅಭ್ಯರ್ಥಿಗಳಿಂದ ಭೂಮಿಯನ್ನು ಲಂಚವಾಗಿ ಪಡೆದ ಹಗರಣದಲ್ಲಿ ಸಿಬಿಐಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದ್ದು, ಲಾಲು ಪುತ್ರ ತೇಜಸ್ವಿ ಬಂಧನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Railway Recruitment Scam: Names of 1458 people found in Tejaswi's hard disk who gave land for job akb

ಪಟನಾ: ಬಿಹಾರದ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ರೈಲ್ವೆ ಮಂತ್ರಿಯಾಗಿದ್ದಾಗ ಇಲಾಖೆಯಲ್ಲಿ ನೌಕರಿ ನೀಡಲು ಅಭ್ಯರ್ಥಿಗಳಿಂದ ಭೂಮಿಯನ್ನು ಲಂಚವಾಗಿ ಪಡೆದ ಹಗರಣದಲ್ಲಿ ಸಿಬಿಐಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ಕಳೆದ ತಿಂಗಳು ನಡೆದ ಸಿಬಿಐ ದಾಳಿಯಲ್ಲಿ ಲಾಲು ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌ನಲ್ಲಿ ನೌಕರಿಗಾಗಿ ಭೂಮಿ ಲಂಚ ನೀಡಿದವರ 1458 ಹೆಸರುಗಳು ಪತ್ತೆಯಾಗಿವೆ. ಹೀಗಾಗಿ ಈ ಹಗರಣದಲ್ಲಿ ತೇಜಸ್ವಿ ಯಾದವ್‌ ಬಂಧನವಾಗಬಹುದು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಕುತೂಹಲಕರ ಸಂಗತಿಯೆಂದರೆ, ಲಾಲು ಕುಟುಂಬದ ಸದಸ್ಯರಿಗೆ ಭೂಮಿ ಲಂಚ ನೀಡಿದವರ ಹೆಸರನ್ನು ತೇಜಸ್ವಿಯೇ ಪಟ್ಟಿ ಮಾಡಿ ಹಾರ್ಡ್‌ಡಿಸ್ಕ್‌ನಲ್ಲಿ ಸಂಗ್ರಹಿಸಿಟ್ಟಿದ್ದಾರೆ. 1458 ಪ್ರಕರಣಗಳ ಪೈಕಿ 16 ಪ್ರಕರಣದಲ್ಲಿ ಅಭ್ಯರ್ಥಿಗಳು ನೌಕರಿಗಾಗಿ ಭೂಮಿ ಲಂಚ ನೀಡಿರುವುದು ಸಿಬಿಐ ತನಿಖೆಯಲ್ಲಿ ಈಗಾಗಲೇ ಸಾಬೀತಾಗಿದೆ. ಹೀಗಾಗಿ ಇನ್ನುಳಿದ ಅಭ್ಯರ್ಥಿಗಳ ಬಗ್ಗೆಯೂ ಸಿಬಿಐ ತನಿಖೆ ನಡೆಸುತ್ತಿದೆ. ಈ ಕುರಿತು ರೈಲ್ವೆ ಇಲಾಖೆಯಿಂದ ಮಾಹಿತಿ ಕೇಳಿದೆ. ತೇಜಸ್ವಿ ವಿರುದ್ಧ ‘ಅತ್ಯಂತ ನಿಖರ’ ಸಾಕ್ಷ್ಯಗಳು ಇರುವುದರಿಂದ ಅವರ ಬಂಧನವಾಗಬಹುದು ಎಂದು ಹೇಳಲಾಗಿದೆ.

ಏನಿದು ನೌಕರಿಗಾಗಿ ಭೂಮಿ ಹಗರಣ:

2004ರಿಂದ 2009ರವರೆಗೆ ಯುಪಿಎ-1 ಸರ್ಕಾರದಲ್ಲಿ ಲಾಲು ರೈಲ್ವೆ ಮಂತ್ರಿಯಾಗಿದ್ದರು. ಆಗ ರೈಲ್ವೆಯ ವಿವಿಧ ವಲಯಗಳಲ್ಲಿ ‘ಡಿ ಗ್ರೂಪ್‌’ ನೌಕರಿ ನೀಡಲು ಬಿಹಾರಿಗಳಿಂದ ಪಟನಾದ ಸುತ್ತಮುತ್ತ ಭೂಮಿಯನ್ನು ತಮ್ಮ ಕುಟುಂಬ ಹಾಗೂ ಆಪ್ತರ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಒಟ್ಟು 1,05,292 ಚದರಡಿ ಜಾಗವನ್ನು ಅವರು ಲಂಚವಾಗಿ ಪಡೆದಿದ್ದು, ಅದರ ಇಂದಿನ ಮಾರುಕಟ್ಟೆ ಮೌಲ್ಯ 4.39 ಕೋಟಿ ರೂ. ಆಗುತ್ತದೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಹೇಳಿದೆ.

ಬಹುಮತ ಸಾಬೀತಿಗೆ ಮುನ್ನ ಆರ್‌ಜೆಡಿ ಸದಸ್ಯರ ಮೇಲೆ ಸಿಬಿಐ ದಾಳಿ: ರೇಡ್‌ಗೆ ಹೆದರಲ್ಲ ಎಂದ ರಾಬ್ಡಿದೇವಿ

2004 ಮತ್ತು 2009 ರ ನಡುವೆ ರೈಲ್ವೆ ಉದ್ಯೋಗಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಲಾಲೂ ಪ್ರಸಾದ್‌ ಯಾದವ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಆರೋಪ ಹೊರಿಸಲಾಗಿತ್ತು. ಲಾಲೂ ಪ್ರಸಾದ್‌ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ರೈಲ್ವೆ ಉದ್ಯೋಗಗಳನ್ನು ನೀಡಲು ಲಂಚವಾಗಿ ಭೂಮಿ ಮತ್ತು ಆಸ್ತಿಗಳನ್ನು ಪಡೆದಿದ್ದಾರೆ ಎಂದು ಸಿಬಿಐ ಪ್ರಕರಣದಲ್ಲಿ ಆರೋಪಿಸಲಾಗಿದೆ.

ಈ ನಡುವೆ ಆಗಸ್ಟ್ 24 ರಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದ ಮೂವರು ಹಿರಿಯ ನಾಯಕರ ಮನೆಗಳ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ಮಾಡಿತ್ತು. ಇನ್ನು, ಸಿಬಿಐ ರೇಡ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಮತ್ತು ತೇಜಸ್ವಿ ಯಾದವ್ ಅವರ ತಾಯಿ ರಾಬ್ಡಿದೇವಿ ಅವರು ನಿತೀಶ್ ಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿರುವುದರಿಂದ ಅವರಿಗೆ (ಬಿಜೆಪಿ)ಗೆ ಭಯವಾಗಿದೆ. ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗಿವೆ, ನಮಗೆ ಬಹುಮತವಿದೆ. ಸಿಬಿಐ (ದಾಳಿ) ಕೇವಲ ನಮ್ಮನ್ನು ಹೆದರಿಸಲು. ಇದಕ್ಕೆ ನಾವು ಹೆದರುವುದಿಲ್ಲ. ಇದು ಮೊದಲ ಬಾರಿಗೆ ಆಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

ಇಡಿ, ಸಿಬಿಐನವರು ನನ್ನ ಮನೆಯಲ್ಲೇ ಕಚೇರಿ ತೆರೆಯಬಹುದು: ತೇಜಸ್ವಿ ಯಾದವ್

ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಈ ದಾಳಿಗೆ ಯಾವುದೇ ಅರ್ಥವಿಲ್ಲ. ನಮ್ಮ ಶಾಸಕರು ಭಯದಿಂದ ಅವರನ್ನು ಸೇರುತ್ತಾರೆ ಎಂಬ ಭರವಸೆಯಿಂದ ಇದನ್ನು ಮಾಡುತ್ತಿದ್ದಾರೆ ಎಂದು ಪಾಟ್ನಾದಲ್ಲಿ ದಾಳಿಗೊಳಗಾದ ಎಂಎಲ್‌ಸಿ ಸುನೀಲ್‌ ಸಿಂಗ್ ಹೇಳಿದರು. ಈ ಮಧ್ಯೆ, ಬಿಹಾರದಲ್ಲಿ ಅಧಿಕಾರ ಕೈತಪ್ಪಿದ ಬಿಜೆಪಿ ತೀವ್ರ ಆಕ್ರೋಶಗೊಂಡಿರುವ ಕಾರಣ ಸಿಬಿಐ ಮತ್ತು ಇತರ ಕೇಂದ್ರೀಯ ಸಂಸ್ಥೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂದು ಆರ್‌ಜೆಡಿ ವಕ್ತಾರರು ಟ್ವೀಟ್ ಮಾಡಿದ್ದರು. 

Latest Videos
Follow Us:
Download App:
  • android
  • ios