ಟಿಪ್ಪು ಎಕ್ಸ್‌ಪ್ರೆಸ್ ಇನ್ಮುಂದೆ ಒಡೆಯರ್ ಎಕ್ಸ್‌ಪ್ರೆಸ್ ರೈಲು, ಹೆಸರು ಬದಲಿಸಿ ಕೇಂದ್ರದ ಆದೇಶ!
ಹಲವು ದಿನಗಳ ಬೇಡಿಕೆ, ಸಂಸದ ಪ್ರತಾಪ್ ಸಿಂಹ ಸತತ ಹೋರಾಟದ ನೆರವಿನಿಂದ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಟಿಪ್ಪು ಎಕ್ಸ್ಪ್ರೆಸ್ ಬದಲು ಒಡೆಯರ್ ಎಕ್ಸ್‌ಪ್ರೆಸ್ ಆಗಿದೆ. ಇನ್ನು ಮೈಸೂರು ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೂ ಹೊಸ ಹೆಸರು ಇಡಲಾಗಿದೆ.
ನವದೆಹಲಿ(ಅ.07): ಮೈಸೂರು ಮೂಲಕ ಹಾದು ಹೋಗುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಿಸಬೇಕು ಅನ್ನೋದು ಹಲವು ದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ಮೈಸೂರು ಕೊಡುಗು ಸಂಸದ ಪ್ರತಾಪ್ ಸಿಂಹ ನಡೆಸಿದ ಸತತ ಪ್ರಯತ್ನದಿಂದ ಇದೀಗ ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ. ಟಿಪ್ಸು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಕೇಂದ್ರ ಸರ್ಕಾರ ಒಡೆಯರ್ ಎಕ್ಸ್‌ಪ್ರೆಸ್ ರೈಲು ಎಂದು ಮರುನಾಮಕರಣ ಮಾಡಿದೆ. ಈ ಮೂಲಕ ಮೈಸೂರನ್ನು ಕಾಪಾಡಿದ, ಸಂಸ್ಕತಿಯನ್ನು ಉಳಿಸಿ ಬೆಳೆಸಿ, ವಿಶ್ವದಲ್ಲೇ ಪ್ರಸಿದ್ಧಿ ಮಾಡಿದ ಒಡೆಯರ್ ರಾಜಮನೆತನಕ್ಕೆ ಗೌರವ ನೀಡಿದೆ. ಒಡೆಯರ್ ಎಕ್ಸ್‌ಪ್ರೆಸ್ ಜೊತೆಗೆ ಮೈಸೂರು ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಕುವೆಂಪು ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದೆ.
ಈ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಶುಕ್ರವಾರದ ಶುಭ ಸುದ್ದಿ. ಇನ್ನು ಮುಂದೆ ಟಿಪ್ಪು ಎಕ್ಸ್ಪ್ರೆಸ್ ಬದಲು “ಒಡೆಯರ್ ಎಕ್ಸ್ಪ್ರೆಸ್ “ ನಿಮಗೆ ಸೇವೆ ನೀಡಲಿದೆ! ಮೈಸೂರು-ತಾಳಗುಪ್ಪ ರೈಲು "ಕುವೆಂಪು ಎಕ್ಸ್ಪ್ರೆಸ್'' ಆಗಲಿದೆ. ಥಾಂಕ್ಯೂ ಅಶ್ವಿನಿ ವೈಷ್ಣವ್ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ಟಿಪ್ಪು ಬಂದಾಗಲೇ ಕೊಡವರು ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದ್ರೆ ಹೆದರ್ತೀವಾ'
ನವದೆಹಲಿ ಮೈಸೂರು ಬೆಂಗಳೂರು ನಡುವಿನ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ರೈಲು ಎಂದು ಬದಲಿಸಲು ಹಲವು ಪ್ರಯತ್ನಗಳು ನಡೆದಿತ್ತು. ಇದಕ್ಕೆ ಸ್ಪಂದಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಇಲಾಖೆಗೆ ಮಹತ್ವದ ಸೂಚನೆ ನೀಡಿದ್ದರು. ಈ ಕುರಿತು ರೈಲ್ವೇ ಉಪನಿರ್ದೇಶಕ ರಾಜೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಮರುನಾಮಕರಣ ಹಾಗೂ ಕುವೆಂಪು ಎಕ್ಸ್‌ಪ್ರೆಸ್ ನಾಮಕರಣಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಒಡೆಯರ ಹಾಗೂ ಕುವೆಂಪು ಅವರಿಗೆ ನಿಜವಾಗಿ ಸಂದ ಗೌರವ ಇದಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮರುನಾಮಕರಣ ಮಾಡಿದ ಕೇಂದ್ರ ಸರ್ಕಾರ ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ಧನ್ಯವಾದ ಹೇಳಿದ್ದಾರೆ.
ಜಾಮಿಯಾ ಮಸೀದಿ-ಮಂದಿರ ವಿವಾದ: ಮಂದಿರವಿತ್ತು ಹಳೆಯ ಪುಸ್ತಕದಲ್ಲಿ ಸಿಕ್ತು ಸಾಕ್ಷ್ಯ...!
ಕರ್ನಾಟಕದಲ್ಲಿ ಟಿಪ್ಪು ಹೆಸರು ಭಾರಿ ಚರ್ಚೆ, ಗಲಭೆ, ಹಿಂಸಾಚಾರಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಮೂಲಕ ಕೊಡುಗು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಪ್ರತಿಭಟನೆಗೆ ವೇದಿಕೆ ಒದಗಿಸಿತ್ತು. ಈ ಹಿಂಸಾಚಾರದಲ್ಲಿ ಹಲವು ಜೀವಗಳು ಬಲಿಯಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಟಿಪ್ಪು ಜಯಂತಿ ರದ್ದು ಮಾಡಿದೆ. ಇನ್ನು ಶಾಲೆಗಳಲ್ಲಿ ಟಿಪ್ಪು ವೈಭವೀಕರಿಸುವ ಪಠ್ಯಗಳನ್ನು ಕೈಬಿಟ್ಟ ಬಿಜೆಪಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಟಿಪ್ಪು ಕುರಿತು ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಟಿಪ್ಪು ಮತಾಂಧ, ಹಲವು ಹಿಂದೂ ದೇವಸ್ಥಾನಗಳನ್ನು ಕಡವಿ ಮಸೀದಿ ಕಟ್ಟಿದ್ದಾನೆ. ಹಲವು ದೇವಸ್ಥಾನಗಳನ್ನು ಕೆಡವಿ ವಜ್ರಾಭರಣಗಳನ್ನು ದೋಚಿದ್ದಾನೆ. ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದಾನೆ. ಹೀಗಾಗಿ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಬಿಜೆಪಿ ನಿಲುವು. ಇದೇ ಕಾರಣಕ್ಕೆ ಟಿಪ್ಪು ಕುರಿತ ಯಾವುದೇ ವಿಚಾರಗಳನ್ನು ಬಿಜೆಪಿ ಸ್ಪಷ್ಟ ಹಾಗೂ ಖಡಕ್ ನಿರ್ಧಾರಗಳಿಂದ ಬದಲಾಯಿಸುತ್ತಿದೆ.