NH 150C Project: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ಸಂಸದ ಜಿ ಕುಮಾರ ನಾಯಕ ಭೇಟಿ ಮಾಡಿದ್ರು.
ನವದೆಹಲಿ (ಜೂ.16): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕ ಭೇಟಿ ಮಾಡಿದ್ರು. ಕಲ್ಯಾಣ ಕರ್ನಾಟಕ ಪ್ರದೇಶದ ಮೂಲಕ ಹಾದು ಹೋಗುವ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಕುರಿತು ಸವಿಸ್ತಾರ ಚರ್ಚೆ ನಡೆಸಿದರು.
ಸಭೆಯಲ್ಲಿ ವಿಶೇಷವಾಗಿ ರಾಯಚೂರು–ಯಾದಗಿರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಾದ NH-150Cರ ಎರಡು ಪ್ಯಾಕೇಜುಗಳು, NH-748 ರ ಮೂರು ಪ್ಯಾಕೇಜುಗಳು ಹೊಸದಾಗಿ ಪ್ರಸ್ತಾಪಿಸಲಾದ NH-167 ಮಾರ್ಗಸೂಚಿ ಹಾಗೂ NH-150A ರಸ್ತೆ ಅಗಲೀಕರಣ ಯೋಜನೆಗಳ ಪ್ರಗತಿ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಲಾಯ್ತು.
ಇನ್ನೂ ಇದೇ ವೇಳೆ ಹೈವೇ ಜೊತೆಗೆ ರಸ್ತೆ ಅಗಲೀಕರಣ, ಅಗತ್ಯವಿರುವ ಸ್ಥಳಗಳಲ್ಲಿ ಬೈಪಾಸ್‌ಗಳ ನಿರ್ಮಾಣ, ಸರ್ವಿಸ್ ರಸ್ತೆಗಳ ಅಭಿವೃದ್ಧಿ, ಅಪಘಾತ ತಡೆಗೆ ಸುರಕ್ಷತಾ ಕ್ರಮಗಳ ಅಳವಡಿಕೆ ಹಾಗೂ ಕಾಮಗಾರಿಗಳ ಗುಣಮಟ್ಟವನ್ನು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ವಹಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು. ಅಲ್ಲದೆ ಭೂಸ್ವಾಧೀನ, ತಾಂತ್ರಿಕ ಅನುಮೋದನೆಗಳು ಹಾಗೂ ಕಾಮಗಾರಿಗಳ ಅನುಷ್ಠಾನದಲ್ಲಿ ಉಂಟಾಗುವ ಅಡಚಣೆಗಳನ್ನು ತ್ವರಿತವಾಗಿ ಪರಿಹರಿಸುವ ಅಗತ್ಯತೆಯನ್ನೂ ಒತ್ತಿ ಹೇಳಲಾಯಿತು.
ಹೈವೇಗಳು ಬಂದ್ರೆ ರಾಯಚೂರು ಆಗಲಿದೆ ರೋಡ್ ಗಳ ಹಬ್!
ಕಲ್ಯಾಣ ಕರ್ನಾಟಕ ಭಾಗದ ಜನರ ಬಹುಕಾಲದ ಬೇಡಿಕೆಯಾದ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಈ ಯೋಜನೆಗಳ ಮೂಲಕ ಸಾಕಾರಗೊಳ್ಳಲಿದ್ದು, ಕೃಷಿ, ಕೈಗಾರಿಕೆ, ವ್ಯಾಪಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು. ಉತ್ತಮ ಗುಣಮಟ್ಟದ ರಸ್ತೆ ಜಾಲದಿಂದ ಹೂಡಿಕೆ ಅವಕಾಶಗಳು ಹೆಚ್ಚುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಅವರು ಮನವರಿಕೆ ಮಾಡಿದರು.
ಸಭೆಯಲ್ಲಿ NHAI ಅಧ್ಯಕ್ಷರಾದ ಸಂತೋಷ್ ಯಾದವ್ ಅವರು ಪ್ರಾಧಿಕಾರದ ಸಂಪೂರ್ಣ ಸಹಕಾರ ಜೊತೆಗೆ ಭರವಸೆ ನೀಡಿದ್ದು, ಸಾರ್ವಜನಿಕರಿಗೆ ಶೀಘ್ರದಲ್ಲಿ ಉತ್ತಮ ರಸ್ತೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲು ಬದ್ಧತೆ ವ್ಯಕ್ತಪಡಿಸಿದರು. ಯೋಜನೆಗಳ ಅನುಷ್ಠಾನದಲ್ಲಿ ಗುಣಮಟ್ಟ ಮತ್ತು ಸಮಯ ಪಾಲನೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಪೂರ್ಣಗೊಂಡ ಬಳಿಕ ರಾಯಚೂರು–ಯಾದಗಿರಿ ಸೇರಿದಂತೆ ಸಮಗ್ರ ಕಲ್ಯಾಣ ಕರ್ನಾಟಕ ಪ್ರದೇಶದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದ್ದು, ರಸ್ತೆ ಸುರಕ್ಷತೆ ಹೆಚ್ಚುವುದರೊಂದಿಗೆ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂದು ಸಂಸದ ಜಿ. ಕುಮಾರ್ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


