ಯುವಕರಿಗೆ ಹೆಚ್ಚು ಆದ್ಯತೆ ಕೊಟ್ಟು ತಪ್ಪು ಮಾಡಿದೆ: ರಾಹುಲ್‌ ಗಾಂಧಿ| ಮತ್ತೆ ಹಿರಿಯರಿಗೂ ಮಣೆ ಹಾಕುವ ಸುಳಿವು

ನವದೆಹಲಿ(ಮಾ.10): ತಾವು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ವೇಳೆ ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಿ ತಪ್ಪು ಮಾಡಿದೆ ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ಪಕ್ಷದ ಹಲವು ಹಿರಿಯ ನಾಯಕರು ಹೈಕಮಾಂಡ್‌ ವಿರುದ್ಧ ಹಲವು ಸುತ್ತಿನಲ್ಲಿ ಬಂಡೆದ್ದ ಬೆನ್ನಲ್ಲೇ ರಾಹುಲ್‌ ನೀಡಿರುವ ಈ ಹೇಳಿಕೆ ಸಾಕಷ್ಟುಕುತೂಹಲ ಕೆರಳಿಸಿದೆ.

ಯುವ ಕಾಂಗ್ರೆಸ್‌ನ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಸೋಮವಾರ ಮಾತನಾಡಿದ ರಾಹುಲ್‌ ಗಾಂಧಿ ರಾಜಕೀಯದಲ್ಲಿ ವಿಶ್ವಾಸ, ನಂಬಿಕೆ ಮತ್ತು ಪಕ್ಷದ ಸಿದ್ಧಾಂತಗಳ ಬಗೆಗಿನ ಬದ್ಧತೆಯ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಹೃದಯಪೂರ್ವಕವಾಗಿ ಪಕ್ಷವನ್ನು ನಂಬಿರುವವರಿಗೆ ಪಕ್ಷದಲ್ಲಿ ಹೆಚ್ಚಿನ ಮನ್ನಣೆ ನೀಡಬೇಕಾದ ಅಗತ್ಯವಿದೆ ಎಂದು ಪ್ರಸ್ತಾಪಿಸಿದ್ದಾರೆ.

ರಾಹುಲ್‌ ಗಾಂಧಿ ಶೀಘ್ರವೇ ಮತ್ತೆ ಪಕ್ಷದ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಬಹುದು ಎಂಬ ವರದಿಗಳ ಬೆನ್ನಲ್ಲೇ ಅವರಿಂದ ಇಂಥ ಹೇಳಿಕೆ ವ್ಯಕ್ತವಾಗಿದೆ.