‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಎಲ್ಲಿಗೇ ಹೋಗಲಿ, ಅಂತಿಮವಾಗಿ ಮತಗಳ್ಳತನದಲ್ಲಿ ತೊಡಗಿದ್ದಕ್ಕಾಗಿ ಸಿಕ್ಕಿಬಿದ್ದೇ ಬೀಳುತ್ತಾರೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಿಶನ್‌ಗಂಜ್‌ (ನ.09): ‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಎಲ್ಲಿಗೇ ಹೋಗಲಿ, ಅಂತಿಮವಾಗಿ ಮತಗಳ್ಳತನದಲ್ಲಿ ತೊಡಗಿದ್ದಕ್ಕಾಗಿ ಸಿಕ್ಕಿಬಿದ್ದೇ ಬೀಳುತ್ತಾರೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಹಾರದ ಕಿಶನ್‌ಗಂಜ್‌ನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಮತಗಳ್ಳತನ ಆರೋಪಕ್ಕೆ ಮೋದಿ, ಶಾ ಮತ್ತು ಚುನಾವಣಾ ಆಯೋಗದ ಬಳಿ ಯಾವುದೇ ಪ್ರತಿಕ್ರಿಯೆಯಿಲ್ಲ. ಮೋದಿ ಮತ್ತು ಶಾ ಜನರ ಧ್ವನಿಗೆ ಹೆದರುತ್ತಿದ್ದಾರೆ. ಅವರು ಭಾರತದ ಆತ್ಮಕ್ಕೆ ದ್ರೋಹ ಬಗೆದಿದ್ದಾರೆ. ಅವರು ಸಿಕ್ಕಿಬೀಳುವುದು ಖಚಿತ. ಈಗ ಸತ್ಯ ಜನರೆದುರು ಬಹಿರಂಗವಾಗಿದೆ. ಅವರು ಎಲ್ಲಿಗೇ ಹೋದರೂ ಸಿಕ್ಕಿ ಬೀಳುತ್ತಾರೆ’ ಎಂದರು.

ಬಿಹಾರದಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ‘ಜನ ಒಟ್ಟಾಗಿ ಬಂದು ಮತಚೋರಿಯನ್ನು ನಿಲ್ಲಿಸಿದರೆ, ಇಂಡಿಯಾ ಕೂಟ ಶೇ.100 ಗೆಲುವು ಸಾಧಿಸುತ್ತದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೇಶವನ್ನು ತುಂಡರಿಸಲು ಯತ್ನಿಸಿದರೆ, ಇಂಡಿಯಾ ಕೂಟ ದೇಶವನ್ನು ಒಗ್ಗೂಡಿಸಲು ಯತ್ನಿಸಿದೆ’ ಎಂದರು.

ಬಿಹಾರಿಗರು ಕೆಲಸಕ್ಕಾಗಿ ಬೆಂಗಳೂರಿಗೆ

ಬಿಹಾರದಲ್ಲಿ ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡಿ, ‘ಬೆಂಗಳೂರಿನಂತಹ ನಗರಗಳಲ್ಲಿ ಮತ್ತು ಅರುಣಾಚಲ ಪ್ರದೇಶದಂತಹ ದೂರದ ರಾಜ್ಯಗಳಲ್ಲಿ ಬಿಹಾರದ ಜನರು ರಸ್ತೆ, ಶಾಲೆ, ಕಾಲೇಜು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದ್ದಾರೆ. ಕಷ್ಟಪಟ್ಟು ದುಡಿಯುವ ಜನರಿಗೆ ಮನೆಯಲ್ಲಿ (ಬಿಹಾರದಲ್ಲಿ) ಕೆಲಸ ಏಕೆ ಸಿಗುವುದಿಲ್ಲ? ಸಿಎಂ ನಿತೀಶ್‌ ಕುಮಾರ್‌ಗೆ ಬಿಹಾರದ ಯುವಕರಿಗೆ ಉದ್ಯೋಗ ಸೃಷ್ಟಿಸುವ ಮನಸ್ಸಿಲ್ಲ’ ಎಂದು ಆಕ್ರೋಶ ಹೊರಹಾಕಿದರು.