Rahul Gandhi And Priyanka Gandhi magic: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ರಣತಂತ್ರ ಪ್ರಮುಖ ಪಾತ್ರ ವಹಿಸಿದೆ. ಕೊನೆಯ 15 ದಿನಗಳಲ್ಲಿ ನಡೆಸಿದ ಪ್ರಚಾರದ ಮೂಲಕ ಎಎಪಿ ಪಕ್ಷವನ್ನು ದುರ್ಬಲಗೊಳಿಸುವಲ್ಲಿ ಯಶಸ್ವಿಯಾದರು.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷ 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯೋದು ಬಹುತೇಕ ಖಚಿತವಾಗಿದೆ. ಮೂರನೇ ಬಾರಿ ಸರ್ಕಾರ ರಚನೆಯ ಕನಸು ಕಂಡಿದ್ದ ಎಎಪಿಗೆ ಸೋಲಿನ ಶಾಕ್ ಸಿಕ್ಕಿದೆ. ಚುನಾವಣೆ ಫಲಿತಾಂಶ ಪ್ರಕಟವಾದ ಆರಂಭದಿಂದಲೇ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್‌ಗೂ ಸೋಲಾಗಿದೆ. 2013, 2015 ಮತ್ತು 2020ರ ಚುನಾವಣೆಯಲ್ಲಿ ಎಎಪಿ ಗೆದ್ದಿತ್ತು. 1998, 2003 ಮತ್ತು 2008ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಇದೀಗ ಬಿಜೆಪಿಯನ್ನು ದೆಹಲಿ ಜನರು ಗೆಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಏಕಾಂಗಿಯಾಗಿ ಹೋರಾಟ ನಡೆಸಿ ಸೋಲು ಕಂಡಿದೆ. ಆದರೆ ಇದರ ಹಿಂದಿನ ಕಾರಣ ದೆಹಲಿಯಲ್ಲಿ ತಮಗೆ ಪ್ರಬಲ ಎದುರಾಳಿಯಾಗಿದ್ದ ಎಎಪಿ ಸೋಲಿಸೋದು ಎನ್ನಲಾಗಿದೆ. ಈ ಕೆಲಸವನ್ನು ಮಾಡಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಯಶಸ್ವಿಯಾದರು. ಮತದಾನದ ಕೊನೆ 15 ದಿನದಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಇಡೀ ಚುನಾವಣೆಯ ದಿಕ್ಕನ್ನೇ ಬದಲಿಸಿದರು ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತವೆ. ಹಾಗಾದ್ರೆ ಕೊನೆಯ 15 ದಿನದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾಡಿದ ಮ್ಯಾಜಿಕ್ ಏನು? ಎಂಬುದರ ಮಾಹಿತಿ ಇಲ್ಲಿದೆ.
ದೆಹಲಿ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ನಿರಾಶದಾಯಕವಾಗಿದ್ರೂ, ತಮ್ಮ ಎದುರಾಳಿಯನ್ನು ಸೋಲಿಸಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾಡಿದ ರಣತಂತ್ರ ಯಶಸ್ವಿಯಾಗಿದೆ ಎನ್ನಲಾಗಿದೆ. ಎಎಪಿ ಮತ್ತು ಕಾಂಗ್ರೆಸ್ ನಡುವಿನ ಸಂಘರ್ಷವನ್ನು ಬಿಜೆಪಿ ಲಾಭವನ್ನಾಗಿ ಮಾಡಿಕೊಂಡು ಮ್ಯಾಜಿಕ್ ನಂಬರ್ ದಾಟಿದೆ. ಈ ಮೂಲಕ ಹರಿಯಾಣ ಮತ್ತು ಗುಜರಾತಿನ ವಿಧಾನಸಭಾ ಚುನಾವಣೆಯ ಸೇಡನ್ನು ದೆಹಲಿಯಲ್ಲಿ ತೀರಿಸಿಕೊಂಡಂತೆ ಕಾಣಿಸುತ್ತಿದೆ.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆಗೆ ಪ್ರಮುಖ ಕಾರಣವಾಗಿದ್ದು ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್. ಇದೇ ಕಾರಣದಿಂದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ಚುನಾವಣೆ ಪ್ರಚಾರದಲ್ಲಿ ನೇರವಾಗಿ ಎಎಪಿ ಆಡಳಿತ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧವೇ ಆಕ್ರಮಣಕಾರಿಯಾಗಿ ವಾಗ್ದಾಳಿ ನಡೆಸಿದ್ದರು. ಈ ನಾಯಕರ ವಾಗ್ದಾಳಿ ಎಷ್ಟು ಅನಿರೀಕ್ಷಿತವಾಗಿತ್ತೋ ಅಷ್ಟೇ ಪರಿಣಾಮಕಾರಿಯಾಗಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಹುದ್ದೆ ಯಾರಿಗೆ? ಮುಂಚೂಣಿಯಲ್ಲಿವೆ ಈ ಐವರ ಹೆಸರುಗಳು!
ಯಮುನಾ ನದಿ ಕುರಿತ ಸಾಕ್ಷ್ಯಚಿತ್ರ
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ, ಯಮುನಾ ನದಿ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ್ದರು. ಈ ಸಾಕ್ಷ್ಯಚಿತ್ರದಲ್ಲಿ ದೆಹಲಿ ಸರ್ಕಾರದ ವಿಫಲತೆಗಳನ್ನು ಎತ್ತಿ ತೋರಿಸಲಾಗಿತ್ತು. ದೆಹಲಿ ವಾಯುಮಾಲಿನ್ಯ ಸಮಸ್ಯೆಗೂ ಎಎಪಿ ಯಾವುದೇ ಪರಿಣಾಮಾತ್ಮಕ ಕ್ರಮ ತೆಗೆದುಕೊಂಡಿಲ್ಲ. ದೆಹಲಿಯ ಕೆಳವರ್ಗದ ನಿವಾಸಿಗಳಿಗಾಗಿಯೇ ಯಾವುದೇ ಯೋಜನೆ ತಂದಿಲ್ಲ ಎಂಬ ಮಾಹಿತಿಯನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿತ್ತು. ಇನ್ನು ಪ್ರಿಯಾಂಕಾ ಗಾಂಧಿಯೂ ಸಹ ಎಎಪಿ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ಹಿಂದೆ ಉಳಿದಿರಲಿಲ್ಲ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಕ್ರೋಢೀಕರಿಸಿಕೊಳ್ಳುವಲ್ಲಿ ಕೆಲಸ ಮಾಡಿದ್ದರು. ಎಎಪಿ ಮತಗಳ ವಿಭಜನೆಯಿಂದ ಬಿಜೆಪಿ ಸರಳವಾಗಿ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ.
ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ಇಮೇಜ್ ಡ್ಯಾಮೇಜ್ ಸುಧಾರಿಸಿಕೊಳ್ಳಲು ಎಎಪಿ ಹೆಣಗಾಡಬೇಕಾಯ್ತು. ಬಿಜೆಪಿಯ ಮತ್ತೊಂದು ಮುಖವೇ ಎಎಪಿ ಎಂದು ಕಾಂಗ್ರೆಸ್ ಆರೋಪಿಸಿಕೊಂಡು ಬಂದಿತ್ತು. ಈ ಮೂಲಕ ತಳಮಟ್ಟದಿಂದ ಕಾಂಗ್ರೆಸ್ ಕಟ್ಟುವ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡಿದ್ದರು. ಸದ್ಯ ಈ ಚುನಾವಣೆ ಫಲಿತಾಂಶ ಭವಿಷ್ಯದಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವಿನ ಸಂಬಂಧ ಹೇಗೆ ಮುಂದುವರಿಯುತ್ತೆ ಎಂಬುದರ ಸುಳಿವು ನೀಡುತ್ತಿದೆ.
ಇದನ್ನೂ ಓದಿ: Delhi Elections 2025: ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಹೀನಾಯ ಸೋಲು
