ಕೊಟ್ಟ ಮಾತನ್ನು ಈಡೇರಿಸಿದ ರಾಹುಲ್ ಗಾಂಧಿ, ಮೂವರು ಯುವತಿಯರಿಗೆ ಹೆಲಿಕಾಪ್ಟರ್ ರೈಡ್!
10 ದಿನಗಳ ಹಿಂದೆ ಉಜ್ಜಯನಿ ಭೇಟಿಯ ವೇಳೆ ರಾಹುಲ್ ಗಾಂಧಿ ಕೆಲ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಮೂವರು ಯುವತಿಯರು ರಾಹುಲ್ ಜೊತೆ ಹೆಲಿಕಾಪ್ಟರ್ ರೈಡ್ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಅಂದು ಅವರು ಮಾತು ಕೊಟ್ಟು ಹೋಗಿದ್ದ ರಾಹುಲ್ ಗಾಂಧಿ, ಶುಕ್ರವಾರ ಈ ಆಸೆ ಪೂರೈಸಿದ್ದಾರೆ.
ಉಜ್ಜಯನಿ (ಡಿ.9): ಭಾರತ್ ಜೋಡೋ ಯಾತ್ರೆಯ ನಡುವೆ ಮಧ್ಯಪ್ರದೇಶದ ಮೂವರು ವಿದ್ಯಾರ್ಥಿನಿಯರಿಗೆ ನೀಡಿದ್ದ ಭರವಸೆಯನ್ನು ರಾಹುಲ್ ಗಾಂಧಿ 10 ದಿನಗಳಲ್ಲಿ ಈಡೇರಿಸಿದ್ದಾರೆ. ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನಿಮಿತ್ತ ಪ್ರಸ್ತುತ ರಾಜಸ್ಥಾನದಲ್ಲಿದ್ದಾರೆ. ಯಾತ್ರೆ ಗುರುವಾರ ಬುಂದಿ ಜಿಲ್ಲೆಯನ್ನು ಪ್ರವೇಶಿಸಿದೆ. ಕೋಟಾದಲ್ಲಿ ಯಾತ್ರೆ ಮುಗಿಸಿದ ರಾಹುಲ್ ನೇರವಾಗಿ ಬುಂದಿಯ ಗುಡ್ಲಿಯಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ತಲುಪಿದರು. ಅಲ್ಲಿ ರಾಹುಲ್ ಗಾಂಧಿಗಾಗಿ ಮಧ್ಯಪ್ರದೇಶದಿಂದ ಬಂದಿದ್ದ ಮೂವರು ವಿದ್ಯಾರ್ಥಿಯರು ಕಾಯುತ್ತಾ ಕುಳಿತಿದ್ದರು. ರಾಹುಲ್ ಜೊತೆಯಲ್ಲಿ ಹೆಲಿಕಾಪ್ಟರ್ ರೈಡ್ ನಡೆಸುವ ಆಸೆ ವ್ಯಕ್ತಪಡಿಸಿದ್ದ ಈ ವಿದ್ಯಾರ್ಥಿನಿಯರ ಆಸೆಯನ್ನು ರಾಹುಲ್ ಗಾಂಧಿ ಈ ವೇಳೆ ಪೂರೈಸಿಸಿದ್ದಾರೆ. ನವೆಂಬರ್ 29 ರಂದು ಉಜ್ಜಯಿನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ 11 ನೇ ತರಗತಿಯ ವಿದ್ಯಾರ್ಥಿಗಳಾದ ಶೀತಲ್, ಲಾಸ್ತಾನಾ ಪನ್ವಾರ್ ಮತ್ತು 10 ನೇ ತರಗತಿಯ ವಿದ್ಯಾರ್ಥಿನಿ ಗಿರಿಜಾ ಅವರನ್ನು ಭೇಟಿಯಾಗಿದ್ದರು.
ಅವರೊಂದಿಗೆ ಮಾತನಾಡುವ ವೇಳೆ, ವಿದ್ಯಾಭ್ಯಾಸವೆಲ್ಲಾ ಮುಗಿದ ಬಳಿಕ ನಿಮ್ಮಲ್ಲಿ ಇರುವ ಕನಸು ಯಾವುದು ಎಂದು ಕೇಳಿದ್ದರು. ವಿದ್ಯಾಭ್ಯಾಸದ ಹೊರತಾಗಿ ನಿಮ್ಮಲ್ಲಿರುವ ಕನಸುಗಳೇನು, ನಿಮ್ಮ ಆಸೆ ಅಥವಾ ಗುರಿ ಏನು ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ಈ ವಿದ್ಯಾರ್ಥಿನಿಯರು ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ರೈಡ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ರಾಹುಲ್ ಗಾಂಧಿ ಶೀಘ್ರದಲ್ಲಿಯೇ ಎಲ್ಲರೊಂದಿಗೆ ಹೆಲಿಕಾಪ್ಟರ್ ರೈಡ್ ಮಾಡುವುದಾಗಿ ಭರವಸೆ ನೀಡಿದ್ದರು.
ತಮ್ಮ ಮಾತನ್ನು ಉಳಿಸಿಕೊಂಡ ರಾಹುಲ್ ಗಾಂಧಿ, 10 ದಿನಗಳ ಬಳಿಕ ಈ ಮೂವರು ವಿದ್ಯಾರ್ಥಿನಿಯರಿಗೆ 20 ನಿಮಿಷಗಳ ಹೆಲಿಕಾಪ್ಟರ್ ರೈಡ್ ಭಾಗ್ಯ ಒದಗಿಸಿದ್ದಾರೆ. ಮೂವರು ವಿದ್ಯಾರ್ಥಿನಿಯರು ಹೆಲಿಕಾಪ್ಟರ್‌ನಿಂದ ಕೆಳಗಿಳಿದಾಗ, ರಾಹುಲ್ ಅವರಿಗೂ ಚಾಕೊಲೇಟ್ ಕೂಡ ನೀಡಿದರು. ಇದರೊಂದಿಗೆ ರಾಹುಲ್ ಮತ್ತು ಹೆಲಿಕಾಪ್ಟರ್ ಪೈಲಟ್ ವಿದ್ಯಾರ್ಥಿನಿಯರಿಗೆ 10 ನಿಮಿಷಗಳ ಕಾಲ ಹೆಲಿಕಾಪ್ಟರ್‌ನ ತಾಂತ್ರಿಕ ವಿವರಗಳನ್ನು ನೀಡಿದರು. ಆ ಬಳಿಕ ಮೂವರು ವಿದ್ಯಾರ್ಥಿನಿಯರೊಂದಿಗೆ ಫೋಟೋಗೆ ಕೂಡ ಪೋಸ್ ನೀಡಿದರು.ಇದಾದ ಬಳಿಕ ರಾಹುಲ್ ಗಾಂಧಿ ನೇರವಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸವಾಯಿ ಮಾಧೋಪುರಕ್ಕೆ ತೆರಳಿದರು.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಜ್ಜಯನಿ ನಿವಾಸಿ 11ನೇ ತರಗತಿಯ ಶೀತಲ್ ಪಾಟೀದಾರ್, ಲಾಸ್ತಾನಾ ಪನ್ವಾರ್ ಹಾಗೂ 10ನೇ ತರಗತಿಯ ಗಿರಿಜಾ ಪನ್ವಾರ್, ಕನಸೊಂದು ನನಸಾದ ರೀತಿ ಅನಿಸಿದೆ ಎಂದು ಹೇಳಿದರು. ಇದೇ ಮೊದಲ ಬಾರಿಗೆ ನಾವು ಹೆಲಿಕಾಪ್ಟರ್ ಏರಿದ್ದೇವೆ. ಅದರಲ್ಲೂ ರಾಹುಲ್ ಗಾಂಧಿ ಅವರೊಂದಿಗೆ ರೈಡ್ ಮಾಡಿದ್ದು ಮರೆಯಲಾಗದಂತ ಅನುಭವ. ಇದನ್ನು ನಾವು ಕನಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಮೋದಿ ಮೋದಿ ಘೋಷಣೆ ಕೂಗಿದವರಿಗೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಉಡುಗೊರೆ!
ಉಜ್ಜಯನಿ ಭೇಟಿಯ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದೆವು. ನಂತರ ಸಮರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮದಿಂದ ಗುರಿಯತ್ತ ಸಾಗಿದರೆ ವಿಮಾನ ಪ್ರಯಾಣದ ಕನಸು ಖಂಡಿತ ನನಸಾಗಲಿದೆ ಎಂದು ಅವರು ಹೇಳಿದ್ದರು. ಹೆಲಿಕಾಪ್ಟರ್ ರೈಡ್ ರಾಹುಲ್ ಅವರು ದೇಶಾದ್ಯಂತ ಪ್ರಯಾಣಿಸುವಾಗ ಸಾಕಷ್ಟು ಮಕ್ಕಳನ್ನು ಭೇಟಿಯಾಗಿರುವುದಾಗಿ ಹೇಳಿದರು. ಎಲ್ಲ ಮಕ್ಕಳೂ ಉನ್ನತ ಹುದ್ದೆಗೆ ಏರುವ ಆಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಭಾರತ್ ಜೋಡೋ ಯಾತ್ರೆ ನಂತರ ಮುಂದೇನು? ಕಾಂಗ್ರೆಸ್‌ನ ಮೆಘಾ ಪ್ಲಾನ್ ಬಹಿರಂಗ!
ಪ್ರಯಾಣದ ವೇಳೆ ರಾಹುಲ್ ಗಾಂಧಿ ನಿಮಗೆ ಏನು ಹೇಳಿದರು ಎನ್ನುವ ಪ್ರಶ್ನೆಗೆ, ನಿಮ್ಮ ಹೃದಯ ಏನು ಹೇಳುತ್ತದೆಯೋ ಅದನ್ನೇ ಮಾಡಿ. ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ನಿಮ್ಮ ಹೃದಯಕ್ಕೆ ಅನಿಸುತ್ತದೆಯೋ ಅದೇ ಕ್ಷೇತ್ರದಲ್ಲಿ ಮುಂದುವರಿಯಿರಿ ಎಂದು ಅವರು ಹೇಳಿದ್ದರು. ಕುಟುಂಬ ಅಥವಾ ಸಮಾಜದ ಒತ್ತಡದಲ್ಲಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಡಿ, ನಿಮ್ಮ ಆಯ್ಕೆಯ ವೃತ್ತಿಯನ್ನು ಆರಿಸಿಕೊಳ್ಳಿ ಎಂದು ರಾಹುಲ್ ನಮಗೆ ಹೇಳಿದರು ಎಂದು ಬಾಲಕಿಯರು ಹೇಳಿದ್ದಾರೆ. ವಿಮಾನ ಪ್ರಯಾಣದ ನಂತರ ರಾಹುಲ್ ಅವರು ವಿದ್ಯಾರ್ಥಿನಿಯರಿಗೆ ಹೆಲಿಕಾಪ್ಟರ್‌ನ ವೇಗ, ಎಷ್ಟು ದೂರದಲ್ಲಿ ಎಷ್ಟು ದೂರ ಕ್ರಮಿಸುತ್ತದೆ ಮುಂತಾದ ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ.