Farmers Protest: ಪಂಜಾಬ್‌ ಹರಿಯಾಣದಲ್ಲಿ ರೈತರ ಪ್ರತಿಭಟನೆ ತೀವ್ರವಾಗಿರುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಇವರ ಬೇಡಿಕೆಯನ್ನು ಈಡೇರಿಸುವುದಾಗಿ ತಿಳಿಸಿದ್ದರು. ಆದರೆ, ಇದೇ ಸ್ವಾಮಿನಾಥನ್‌ ವರದಿಯ 'ಗ್ಯಾರಂಟಿ ಎಂಎಸ್‌ಪಿ' ಬೇಡಿಕೆಯನ್ನು ಯುಪಿಎ ಅಧಿಕಾರದಲ್ಲಿದ್ದಾಗ ತಿರಸ್ಕರಿಸಿತ್ತು ಎನ್ನುವುದು ಬಹಿರಂಗವಾಗಿದೆ. 

ನವದೆಹಲಿ (ಫೆ.14): ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈಗಾಗಲೇ ಕೆಲವು ಭರವಸೆಗಳನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮೀಸಲಾತಿ ಪ್ರಮಾಣ ಶೇ. 74ಕ್ಕೆ ಏರಿಕೆ, ಎಲ್ಲರಿಗೂ ಓಲ್ಡ್‌ ಪೆನ್ಶನ್‌ ಸ್ಕೀಮ್‌, ರೈತರಿಗೆ ಪಿಂಚಣಿ, ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಹಾಗೂ ದೇಶದ ಎಲ್ಲಾ ಜನರಿಗೆ ಉಚಿತ ವಿದ್ಯುತ್‌ ಭರವಸೆಗಳನ್ನು ನೀಡಿದ್ದಾರೆ. ಮೇಲ್ನೋಟಕ್ಕೆ ಅವರು ನೀಡಿರುವ ಯಾವ ಒಂದು ಭರವಸೆ ಕೂಡ ದೇಶದ ಬಜೆಟ್‌ ಲೆಕ್ಕಾಚಾರದಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಇದರ ನಡುವೆ ರೈತರ ಪ್ರತಿಭಟನೆಯ ಹಿನ್ನಲೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಗ್ಯಾರಂಟಿ ಎಂಎಸ್‌ಪಿ ಜಾರಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ರಾಹುಲ್‌ ಗಾಂಧಿಗೆ ಇಲ್ಲದೇ ಇರುವ ಮಾಹಿತಿ ಏನೆಂದರೆ, ಸ್ವಾಮಿನಾಥನ್‌ ವರದಿಯಲ್ಲಿ ಇರಿಸಲಾಗಿದ್ದ ಗ್ಯಾರಂಟಿ ಎಂಎಸ್‌ಪಿ ಬೇಡಿಕೆಯನ್ನು ಅಂದು ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಸಂಪೂರ್ಣವಾಗಿ ತಿರಸ್ಕಾರ ಮಾಡಿತ್ತಲ್ಲದೆ, ಇದು ಸಾಧ್ಯವೇ ಇಲ್ಲ ಎಂದು ಹೇಳಿತ್ತು.

ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಎಲ್ಲಾ ಬೆಳೆಗಳಿಗೆ ನೀಡಬೇಕು ಎಂದು ರೈತ ಸಂಘಟನೆ ಆಗ್ರಹಿಸಿದೆ. ಇದರ ಬೆನ್ನಲ್ಲಿಯೇ ಹಳೆಯ ವರದಿ ಬಹಿರಂಗವಾಗಿದೆ. 2010ರಲ್ಲಿ ಸ್ವಾಮಿನಾಥನ್ ಆಯೋಗ ಕನಿಷ್ಠ ಬೆಂಬಲ ಬೆಲೆಗೆ ಶಿಫಾರಸು ಮಾಡಿತ್ತು. ಆಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಅದನ್ನು ಒಪ್ಪಿರಲಿಲ್ಲ. ರಾಷ್ಟ್ರೀಯ ರೈತ ಆಯೋಗದ ಸಮಿತಿಯು ಯಾವುದೇ ಬೆಳೆಗಳ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಬೆಂಬಲ ಬೆಲೆಯನ್ನು ಕನಿಷ್ಠ 50% ಹೆಚ್ಚು ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಿತ್ತು.

ಕಡ್ಡಾಯ ಮಾನದಂಡಗಳ ಆಧಾರದ ಮೇಲೆ ಮತ್ತು ಸಂಬಂಧಿತ ಅಂಶಗಳ ಅಗಾಧತೆಯನ್ನು ಪರಿಗಣಿಸಿ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ಎಂಎಸ್‌ಪಿಯನ್ನು ಶಿಫಾರಸು ಮಾಡಿದೆ ಎಂದು ಆಗಿನ ಸರ್ಕಾರ ವಾದಿಸಿತ್ತು, ಆದ್ದರಿಂದ ವೆಚ್ಚಕ್ಕಿಂತ ಕನಿಷ್ಠ 50% ಹೆಚ್ಚಳವನ್ನು ನಿರ್ಧರಿಸಬೇಕು ಎಂದಿತ್ತು. ಆದರೆ, ಹಾಗೇನಾದರೂ ಎಂಎಸ್‌ಪಿ ಏರಿಕೆ ಮಾಡಿದಲ್ಲಿ ಮಾರುಕಟ್ಟೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಸರ್ಕಾರ ತಿಳಿಸಿತ್ತು.

'ಇದು ದೇಶದ ಸಂಪೂರ್ಣ ಬಜೆಟ್‌ಗೆ ಸಮ..' ರೈತರ ಬೇಡಿಕೆಯಾದ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಏಕೆ ಸಾಧ್ಯವಿಲ್ಲ?

ಕಡ್ಡಾಯ ಎಂಎಸ್‌ಪಿ ಬಗ್ಗೆ ರೈತರ ಬೇಡಿಕೆ ಈಗಿನದಲ್ಲ. ಸ್ವಾತಂತ್ರ್ಯದಿಂದಲೂ ಈ ಬೇಡಿಕೆ ಇದೆ. ಆದರೆ, ಯಾವುದೇ ಸರ್ಕಾರ ಬಂದರೂ ಇದಕ್ಕೆ ಕಾನೂನು ಮಾಡದೇ ಇರಲು ಕಾರಣ,ಆಗಲಿರುವ ವೆಚ್ಚ. ಸ್ವಾಮಿನಾಥನ್‌ ಆಯೋಗದ ಮೂಲಕ ಎಂಎಸ್‌ಪಿ ಹೆಚ್ಚಿಸುವ ಒತ್ತಾಯ ಮಾಡಲಾಗಿತ್ತು. ಆದರೆ, ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಇದನ್ನು ತಿರಸ್ಕರಿಸಿತ್ತು. ದೇಶದ ಕೆಲವು ರಾಜ್ಯಗಳು MSP ಮೇಲೆ ಅರೆಮನಸ್ಸಿನ ರೀತಿಯಲ್ಲಿ ಕಾನೂನುಗಳನ್ನು ಮಾಡಿದರೂ ಅದು ಅಷ್ಟೇನೂ ಯಶಸ್ವಿಯಾಗಿಲ್ಲ. ಮೂರು ವರ್ಷಗಳ ಹಿಂದೆ, ಅಂದರೆ 2021 ರಲ್ಲಿ, ರೈತರು MSP ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗಷ್ಟೇ ರೈತ ಸಂಘಟನೆಯ ಮುಖಂಡ ರಾಕೇಶ್ ಟಿಕಾಯತ್ ಪ್ರತಿಭಟನೆಯಲ್ಲಿ ಮಾತನಾಡಿ, ರೈತ ಸಂಘದಿಂದ ದೆಹಲಿ ಚಲೋ ಮಾರ್ಚ್ ಘೋಷಣೆ ಮಾಡಲಾಗಿತ್ತು.

ರೈತರ ಪ್ರತಿಭಟನೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ, ಕ್ರಮಕ್ಕೆ ಆಗ್ರಹಿಸಿದ ಬಾರ್ ಅಸೋಸಿಯೇಷನ್!