ರಾಹುಲ್ ಭಾರತ್ ಜೋಡೋ ಯಾತ್ರೆ ನಾಳೆ ಕಾಶ್ಮೀರದಲ್ಲಿ ಅಂತ್ಯ: ಭಾರಿ ಭದ್ರತೆ
ಭದ್ರತಾ ಲೋಪದ ಕಾರಣವೊಡ್ಡಿ ಶುಕ್ರವಾರ ತಮ್ಮ ಯಾತ್ರೆಯನ್ನು ರದ್ದುಪಡಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶನಿವಾರ ಯಾತ್ರೆ ಪುನಾರಂಭಿಸಿದರು.
ಅವಂತಿಪೊರ: ಭದ್ರತಾ ಲೋಪದ ಕಾರಣವೊಡ್ಡಿ ಶುಕ್ರವಾರ ತಮ್ಮ ಯಾತ್ರೆಯನ್ನು ರದ್ದುಪಡಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶನಿವಾರ ಯಾತ್ರೆ ಪುನಾರಂಭಿಸಿದರು. ಈ ವೇಳೆ ರಾಹುಲ್‌ಗೆ 3 ಸ್ತರದ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ರಾಹುಲ್ ಸಾಗಿದ ದಾರಿಯುದ್ದಕ್ಕೂ ಭಾರೀ ಪ್ರಮಾಣದಲ್ಲಿ ನೆರೆದಿದ್ದ ಸ್ಥಳೀಯರು ರಾಹುಲ್‌ರತ್ತ ಕೈಬೀಸಿ ಶುಭ ಕೋರಿದರು.
ಪುಲ್ವಮಾ ಜಿಲ್ಲೆಯ ಅವಂತಿಪೊರದಿಂದ ಯಾತ್ರೆ ಪುನಾರಂಭಿಸಿದ ರಾಹುಲ್‌ಗೆ ಪಿಡಿಪಿ ನಾಯಕಿ (PDP leader) ಮೆಹಬೂಬಾ ಮುಫ್ತಿ (Mehbooba Mufti) ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಜೊತೆಯಾದರು. ಶನಿವಾರ ರಾತ್ರಿ ರಾಹುಲ್ ಶ್ರೀನಗರದ ಹೊರವಲಯದ ಪಂಪೋರ್‌ನಲ್ಲಿ ಉಳಿದುಕೊಳ್ಳಲಿದ್ದು, ಭಾನುವಾರ ಬೆಳಗ್ಗೆ ಪಂಥಾ ಚೌಕ್‌ನಿಂದ ಯಾತ್ರೆ ಆರಂಭಿಸಿ ಬೊಲುವಾರ್ಡ್ ರಸ್ತೆಯ ನೆಹರೂ ಪಾರ್ಕ್ ಬಳಿಕ ಯಾತ್ರೆ ಮುಗಿಸಲಿದ್ದಾರೆ. ಸೋಮವಾರ ಬೆಳಗ್ಗೆ ಶ್ರೀನಗರದ ಎಂ.ಎ. ರಸ್ತೆಯಲ್ಲಿ ರಾಹುಲ್ ಧ್ವಜಾರೋಹಣ ನಡೆಸಿ ಬಳಿಕ ಎಸ್.ಕೆ.ಸ್ಟೇಡಿಯಂನಲ್ಲಿ ನಡೆಯಲಿರುವ 23 ವಿಪಕ್ಷಗಳ ಸಾರ್ವಜನಿಕ ರಾರಯಲಿಯಲ್ಲಿ ಭಾಗಿಯಾಗಲಿದ್ದಾರೆ. ಇದರೊಂದಿಗೆ ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದ ಭಾರತ್ ಜೋಡೋ ಯಾತ್ರೆ ಸಂಪನ್ನಗೊಳ್ಳಲಿದೆ.
ಜಮ್ಮು ಕಾಶ್ಮೀರದಲ್ಲಿ ರಾಹುಲ್ ಭಾರತ್ ಜೋಡೋ ಯಾತ್ರೆ ಸ್ಧಗಿತ, ಭದ್ರತಾ ವೈಫಲ್ಯ ಆರೋಪ!
ಹೆಚ್ಚಿನ ಭದ್ರತೆ ಕೋರಿ ಅಮಿತ್ ಶಾಗೆ ಖರ್ಗೆ ಪತ್ರ
ಕಾಶ್ಮೀರದಲ್ಲಿ ಅಂತಿಮ ಹಂತ ತಲುಪಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಹೆಚ್ಚಿನ ಭದ್ರತೆ ಕೋರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಕೇಂದ್ರ ಗೃಹ ಸಚಿವ ಅಮಿತ್ ಶಾಗೆ (Amit Shah) ಪತ್ರ ಬರೆದಿದ್ದರು. ಮುಂದಿನ 2 ದಿನ ಕಾಲ ಯಾತ್ರೆಗೆ ಹೆಚ್ಚಿನ ಜನ ಸೇರಲಿದ್ದಾರೆ. ಹೀಗಾಗಿ ಸೂಕ್ತ ಭದ್ರತೆ ಅವಶ್ಯವಿದೆ. ಹೀಗಾಗಿ ಪ್ರಕರಣದಲ್ಲಿ ನೀವು ಮಧ್ಯಪ್ರವೇಶ ಮಾಡಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಪತ್ರದಲ್ಲಿ ಖರ್ಗೆ ಮನವಿ ಮಾಡಿದ್ದಾರೆ.
ಪುಲ್ವಾಮಾ ಹುತಾತ್ಮರಿಗೆ ನಮನ
4 ವರ್ಷಗಳ ಹಿಂದೆ ಉಗ್ರರ ದಾಳಿಗೆ ಬಲಿಯಾದ ಸಿಆರ್‌ಪಿಎಫ್‌ನ 40 ಯೋಧರಿಗೆ ರಾಹುಲ್ ಗಾಂಧಿ ಶನಿವಾರ ಪುಷ್ಪ ನಮನ ಸಲ್ಲಿಸಿದರು. ಜಮ್ಮು- ಶ್ರೀನಗರ ಹೆದ್ದಾರಿಯಲ್ಲಿ ಬರುವ ಪುಲ್ವಾಮಾ ಸಮೀಪ ದಾಳಿ ನಡೆದ ಸ್ಥಳದಲ್ಲಿ ಹೂವಿನ ಬೊಕ್ಕೆ ಇಟ್ಟು ರಾಹುಲ್ ನಮನ ಸಲ್ಲಿಸಿದರು.
ದಿಗ್ವಿಜಯ್ ಸಿಂಗ್ ಹೇಳಿಕೆಯ ನಡುವೆ, ಪುಲ್ವಾಮಾ ನೆಲದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ರಾಹುಲ್ ಗಾಂಧಿ!