Asianet Suvarna News Asianet Suvarna News

ಬೆಂಗಳೂರಿನಲ್ಲಿ ಉತ್ಪಾದಿತ ಕೋವ್ಯಾಕ್ಸಿನ್‌ ಗುಣಮಟ್ಟ ಕಳಪೆ!

* ಗುಣಮಟ್ಟಪರೀಕ್ಷೆಯಲ್ಲಿ 2 ಕೋವ್ಯಾಕ್ಸಿನ್‌ ಬ್ಯಾಚ್‌ ವಿಫಲ

* ಬೆಂಗಳೂರಿನಲ್ಲಿ ಉತ್ಪಾದಿತ ಕೋವ್ಯಾಕ್ಸಿನ್‌ ಗುಣಮಟ್ಟಕಳಪೆ

* ಇದರಿಂದ ಲಸಿಕೆ ಪೂರೈಕೆಯಲ್ಲಿ ತೀವ್ರ ಹಿನ್ನಡೆ

* ಹೊಸ ಬ್ಯಾಚ್‌ ತೃಪ್ತಿಕರ, ಇನ್ನು ಪೂರೈಕೆ ತೀವ್ರ

* ಕೇಂದ್ರ ಕೋವಿಡ್‌ ಲಸಿಕೆ ವಿಭಾಗದ ಅಧ್ಯಕ್ಷ ಅರೋರಾ ಹೇಳಿಕೆ

Quality Issues Behind Covaxin Shortage Government Vaccine Panel Chief pod
Author
Bangalore, First Published Aug 4, 2021, 9:15 AM IST

ನವದೆಹಲಿ(ಆ.04): ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿ ತನ್ನ ಬೆಂಗಳೂರು ಘಟಕದಲ್ಲಿ ಉತ್ಪಾದಿಸಿದ್ದ ಕೋವ್ಯಾಕ್ಸಿನ್‌ ಲಸಿಕೆಯ ಮೊದಲ 2 ಬ್ಯಾಚ್‌ಗಳು ನಿರ್ದಿಷ್ಟಗುಣಮಟ್ಟಹೊಂದಿರಲಿಲ್ಲ. ಹೀಗಾಗಿ ನಿಗದಿತ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ವಿತರಣೆ, ಪೂರೈಕೆ ಸಾಧ್ಯವಾಗಲಿಲ್ಲ ಎಂದು ಕೇಂದ್ರ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥ ಡಾ.ಎನ್‌.ಕೆ.ಅರೋರಾ ತಿಳಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು ‘ಭಾರತ್‌ ಬಯೋಟೆಕ್‌, ಬೆಂಗಳೂರಲ್ಲಿ ಅತಿದೊಡ್ಡ ಉತ್ಪಾದನಾ ಘಟಕವನ್ನು ಇತ್ತೀಚೆಗೆ ಆರಂಭಿಸಿತ್ತು. ಇದರಿಂದಾಗಿ ಲಸಿಕೆ ಪೂರೈಕೆ ತೀವ್ರಗೊಳ್ಳಬಹುದು ಎಂದು ಆಶಿಸಲಾಗಿತ್ತು. ಆದರೆ ಮೊದಲ 2 ಬ್ಯಾಚ್‌ಗಳು ಗುಣಮಟ್ಟಪರೀಕ್ಷೆಯಲ್ಲಿ ವಿಫಲವಾದವು. ಆದರೆ ಈಗ 3 ಹಾಗೂ 4ನೇ ಬ್ಯಾಚ್‌ ಲಸಿಕೆಗಳು ಬಂದಿದ್ದು, ಗುಣಮಟ್ಟಪರೀಕ್ಷೆಯಲ್ಲಿ ಉತ್ತಮವಾಗಿದ್ದು ಕಂಡುಬಂದಿವೆ. ಇವುಗಳನ್ನು ಈಗ ಲಸಿಕಾಕರಣಕ್ಕೆ ಕಳಿಸಲಾಗಿದೆ. ಮುಂದಿನ 4ರಿಂದ 6 ವಾರದಲ್ಲಿ ಉತ್ಪಾದನೆ ತೀವ್ರಗೊಳಿಸಿ ಪೂರೈಕೆ ಸುಧಾರಿಸಲಾಗುತ್ತದೆ’ ಎಂದಿದ್ದಾರೆ. ಇದೇ ವೇಳೆ, ‘ಗುಣಮಟ್ಟಪರೀಕ್ಷೆಯಲ್ಲಿ ವಿಫಲವಾದ ಲಸಿಕೆ ಬ್ಯಾಚ್‌ಗಳನ್ನು ಜನರಿಗೆ ಲಸಿಕೆ ನೀಡಲು ಪೂರೈಸಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತಕ್ಕೆ 1 ತಿಂಗಳಿಗೆ 30 ಕೋಟಿ ಡೋಸ್‌ ಲಸಿಕೆ ಅಗತ್ಯವಿದೆ. ಇದರಿಂದ ದಿನಕ್ಕೆ 1 ಕೋಟಿ ಮಂದಿಗೆ ಲಸಿಕೆ ನೀಡಿದಂತಾಗುತ್ತದೆ. ಡಿಸೆಂಬರ್‌ ಒಳಗೆ ದೇಶದ ಎಲ್ಲ ಅರ್ಹ ಜನರಿಗೆ ಲಸಿಕೆ ನೀಡಿಕೆ ಇದರಿಂದ ಸಾಧ್ಯವಾಗಲಿದೆ ಎಂದು ಡಾ| ಅರೋರಾ ಹೇಳಿದ್ದಾರೆ.

ಫೈಜರ್‌, ಮಾಡೆರ್ನಾ ಪಟ್ಟು:

ಭಾರತಕ್ಕೆ ಬರಲು ಇಚ್ಛಿಸುತ್ತಿರುವ ವಿದೇಶಿ ಲಸಿಕೆಗಳಾದ ಫೈಜರ್‌ ಹಾಗೂ ಮಾಡೆರ್ನಾ, ‘ನಷ್ಟಪರಿಹಾರ ಷರತ್ತು’ ಸಡಿಲಿಸಬೇಕು ಎಂದು ಮನವಿ ಮಾಡುತ್ತಿವೆ. ಇದಕ್ಕೆ ಸರ್ಕಾರ ಒಪ್ಪದ ಕಾರಣ, ಅವುಗಳ ಪೂರೈಕೆ ಆರಂಭವಾಗಿಲ್ಲ. ಅದೂ ಅಲ್ಲದೆ ಪ್ರತಿ ಕಂಪನಿ ಪೂರೈಸಲು ಮುಂದಾಗಿರುವುದು ಅಂದಾಜು ಕೇವಲ 7 ಕೋಟಿ. 135 ಕೋಟಿ ಜನರಿಗೆ ಬೇಕಾಗಿರುವ ಪ್ರಮಾಣಕ್ಕೆ ಇದು ತೀರಾ ಕಡಿಮೆ. ಒಂದು ವೇಳೆ ಪ್ರತಿ ಕಂಪನಿ 10-20 ಕೋಟಿ ಡೋಸ್‌ಗೆ ಒಪ್ಪಿದರೆ ಆಗ ವಿನಾಯ್ತಿ ಬಗ್ಗೆ ಸರ್ಕಾರ ಯೋಚಿಸಬಹುದು ಎಂದು ಹೇಳಿದ್ದಾರೆ.

Follow Us:
Download App:
  • android
  • ios