ಪಂಜಾಬ್ ಗುಪ್ತಚರ ಕಚೇರಿಯ ಮೇಲೆ ನಡೆದ ಗ್ರೆನೇಡ್ ದಾಳಿ ಪ್ರಕರಣ ಉಗ್ರಗಾಮಿ ಸಂಘಟನೆ ಬಬ್ಬರ್‌ ಖಾಲ್ಸಾ, ಪಾಕ್ ಐಎಸ್ಐ ಕೈವಾಡ  ಲಖಬೀರ್‌ ಸಿಂಗ್‌ ದಾಳಿಯ ಪ್ರಮುಖ ಸಂಚುಕೋರ  

ಚಂಡೀಗಢ(ಮೇ.14): ಪಂಜಾಬಿನ ಮೊಹಾಲಿಯಲ್ಲಿರುವ ಪೊಲೀಸ್‌ ಗುಪ್ತಚರ ಇಲಾಖೆಯ ಕೇಂದ್ರ ಕಚೇರಿಯ ಮೇಲೆ ಇತ್ತೀಚೆಗೆ ನಡೆದ ಗ್ರೆನೇಡ್‌ ದಾಳಿ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ.

ದಾಳಿಯ ಸಂಚನ್ನು ರೂಪಿಸುವಲ್ಲಿ ಉಗ್ರಗಾಮಿ ಸಂಘಟನೆಯಾದ ಬಬ್ಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ ಹಾಗೂ ಪಾಕಿಸ್ತಾನದ ಐಎಸ್‌ಐ ಸಂಘಟನೆಯ ಕೈವಾಡವಿದೆ ಎಂದು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕರಾದ ವಿ.ಕೆ. ಭಾವ್ರಾ ಶುಕ್ರವಾರ ಹೇಳಿದ್ದಾರೆ.

‘ಪಾಕಿಸ್ತಾನದಲ್ಲಿ ಆಶ್ರಯ ಪಡೆದ ಭಯೋತ್ಪಾದಕ ಹರ್‌ವಿಂದರ್‌ ಸಿಂಗ್‌ ರಿಂಡಾ ಅವರ ಆಪ್ತನಾಗಿದ್ದ ಲಖಬೀರ್‌ ಸಿಂಗ್‌ ದಾಳಿಯ ಪ್ರಮುಖ ಸಂಚುಕೋರನಾಗಿದ್ದಾನೆ. ದಾಳಿಕೋರರಿಗೆ ನೆಲೆ, ಬೆಂಬಲ ಒದಗಿಸಿದ ಅಲ್ಲದೇ ಶಸ್ತ್ರಾಸ್ತ್ರಗಳನ್ನು ಪೂರೈಸಿದವರನ್ನು ಸೇರಿ ಐವರನ್ನು ಬಂಧಿಸಲಾಗಿದೆ. ರಾಕೆಟ್‌ ಲಾಂಚರ್‌ ಬಳಸಿ ಸ್ಫೋಟ ನಡೆಸಿದ ಮೂವರಿಗಾಗಿ ಹುಡುಕಾಟ ತೀವ್ರಗೊಳಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಗ್ರೆನೇಡ್ ದಾಳಿಯ ಸುಳಿವು ನೀಡಿದ ಪಿಜ್ಜಾ ಆರ್ಡರ್, ಪಂಜಾಬ್ ಪೊಲೀಸ್ ತನಿಖೆ ಚುರುಕು!

ದಾಳಿಯಲ್ಲಿ ಪಾಲ್ಗೊಂಡಿದ್ದ ನಿಶಾಂತ್‌ ಸಿಂಗ್‌ ಎಂಬುವ ವ್ಯಕ್ತಿಯನ್ನು ಇನ್ನೊಂದು ಪ್ರಕರಣದಲ್ಲಿ ಫರೀದ್‌ ಕೋರ್ಟಿನಲ್ಲಿ ಬಂಧಿಸಲಾಗಿದ್ದು, ಈ ಪ್ರಕರಣದಲ್ಲೂ ಅವನನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ವಾರ ಹಿಮಾಚಲಪ್ರದೇಶದ ಧರ್ಮಶಾಲದಲ್ಲಿನ ವಿಧಾನಸೌಧ ಕಟ್ಟಡದ ಮುಂಭಾಗದಲ್ಲಿ ಖಲಿಸ್ತಾನ್‌ ಧ್ವಜ ಹಾರಿಸಿದ ಮತ್ತು ಸೋಮವಾರ ಪಂಜಾಬ್‌ನ ಮೊಹಾಲಿಯಲ್ಲಿ ಗುಪ್ತಚರ ಇಲಾಖೆ ಕೇಂದ್ರ ಕಚೇರಿ ಮೇಲೆ ಗ್ರೆನೇಡ್‌ ದಾಳಿಯ ಹೊಣೆಯನ್ನು ಪ್ರತ್ಯೇಕ ಸಿಖ್‌ ದೇಶ ಪರ ಹೋರಾಟ ನಡೆಸುತ್ತಿರುವ ಸಿಖ್‌್ಸ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಸಂಸ್ಥೆ ಹೊತ್ತಿದೆ.

ಈ ಕುರಿತು ಹಿಮಾಚಲಪ್ರದೇಶದ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಅವರಿಗೆ ಧ್ವನಿ ಸಂದೇಶ ಕಳುಹಿಸಿರುವ ಕೆನಡಾ ಮೂಲದ ಎಸ್‌ಎಫ್‌ಜೆ ಸಂಘಟನೆ ಮುಖ್ಯಸ್ಥ ಗುರುಪತ್ವಂತ್‌ ಸಿಂಗ್‌ ಪನ್ನು ‘ಹಿಮಾಚಲ ಮುಖ್ಯಮಂತ್ರಿಗೆ ಇದು ಒಂದು ಪಾಠ - ಮೊಹಾಲಿ ಪೊಲೀಸ್‌ ಕೇಂದ್ರ ಕಚೇರಿ ಮೇಲಿನ ಗ್ರೆನೇಡ್‌ ದಾಳಿಯಿಂದ ಪಾಠ ಕಲಿತುಕೊಳ್ಳಿ. ದಾಳಿ ಶಿಮ್ಲಾದಲ್ಲಿನ ಕೇಂದ್ರ ಕಚೇರಿ ಮೇಲೆ ಕೂಡಾ ನಡೆಯಬಹುದಿತ್ತು. ಧರ್ಮಶಾಲಾ ವಿಧಾನಸೌಧ ಕಟ್ಟಡದ ಮೇಲೆ ಧ್ವಜ ಹಾರಿಸಿದ್ದು ನಾವೇ, ಸಿಖ್ಖರನ್ನು ಪ್ರಚೋದಿಸಬೇಡಿ. ಹಿಮಾಚಲದಲ್ಲಿ ಉಪಚುನಾವಣೆ ಮತದಾನ ನಡೆಯುವ ಜೂ.6ರಂದು ಎಸ್‌ಎಫ್‌ಜೆ ಸಂಘಟನೆಯ 20-20 ಖಲಿಸ್ತಾನ್‌ ಜನಮತಗಣನೆಯನ್ನು ಘೋಷಿಸಲಿದೆ. ಹೀಗಾಗಿ ಸಿಖ್‌ ಸಮುದಾಯವನ್ನು ಪ್ರಚೋದಿಸಬೇಡಿ ಮತ್ತು ಹಿಂಸೆ ಆರಂಭಿಸಬೇಡಿ. ಏಕೆಂದರೆ ಹಿಂಸೆ ಮತ್ತಷ್ಟುಹಿಂಸೆಯನ್ನು ಹುಟ್ಟುಹಾಕುತ್ತದೆ’ ಎಂದು ಎಚ್ಚರಿಸಿದ್ದಾರೆ.

ಹಿಮಾಚಲ ಪ್ರದೇಶ ಬಳಿಕ ಪಂಜಾಬ್‌ ಗೋಡೆ ಮೇಲೂ ಖಲಿಸ್ತಾನ್‌ ಪರ ಘೋಷಣೆ
ಹಿಮಾಚಲ ಪ್ರದೇಶದ ವಿಧಾನಸಭೆ ಕಟ್ಟಡದ ನಂತರ ಪಂಜಾಬ್‌ನ ಉದ್ಯಾನವನವೊಂದರ ಗೋಡೆಯ ಮೇಲೂ ಖಲಿಸ್ತಾನ್‌ ಜಿಂದಾಬಾದ್‌ ಎಂಬ ಘೋಷಣೆಗಳನ್ನು ಬರೆದಿರುವುದು ಕಂಡು ಬಂದಿದೆ. ಪಂಜಾಬ್‌ನ ಫರೀದ್‌ಕೋಟ್‌ನ ಬಾಜಿಗರ್‌ ಬಸ್ತಿ ಪ್ರದೇಶದಲ್ಲಿ ಪ್ರತ್ಯೇಕವಾದಿಗಳು ಈ ಕೃತ್ಯ ಎಸಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಮತ್ತೆ ಪಂಡಿತರ ಮೇಲೆ ದಾಳಿ, ಉಗ್ರರ ಗುಂಡಿಗೆ ಪಂಡಿತ್ ಬಲಿ!

‘ಖಲಿಸ್ತಾನದ ಪರ ಘೋಷಣೆಗಳು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರನ್ನು ಘಟನೆ ನಡೆದ ಸ್ಥಳಕ್ಕೆ ಕಳುಹಿಸಲಾಗಿದೆ. ಸಿ.ಸಿ.ಟೀವಿ ದೃಶ್ಯಾವಳಿಗಳನ್ನು ಪರೀಕ್ಷೆ ಮಾಡಲಾಗಿದೆ. ಎಫ್‌ಐಆರ್‌ ಸಹ ದಾಖಲಿಸಲಾಗಿದೆ. ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಮುಚ್ಚಲಾಗಿದೆ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶದ ವಿಧಾನಸಭೆ ಮುಖ್ಯದ್ವಾರದ ಮೇಲೆ ಖಲಿಸ್ತಾನ ಪರವಾದ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.