Asianet Suvarna News Asianet Suvarna News

ಗಡೀಪಾರಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದ ನೀರವ್‌ : ಅರ್ಜಿ ವಜಾಗೊಳಿಸಿದ ಬ್ರಿಟನ್ ಹೈಕೋರ್ಟ್

ಭಾರತಕ್ಕೆ ಗಡೀಪಾರು ಮಾಡಿದರೆ ನಾನು ಆತ್ಮಹತ್ಯೆ  ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಗಡೀಪಾರಿಗೆ ಅನುಮತಿ ನೀಡಬಾರದು ಬ್ರಿಟನ್ ಹೈಕೋರ್ಟ್‌ಗೆ ಮನವಿ ಮಾಡಿದ್ದ 13,000 ಕೋಟಿ ರು.ಗೂ ಹೆಚ್ಚಿನ ಮೊತ್ತದ ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿ ಸಲ್ಲಿಸಿದ್ದ ಮನವಿಯನ್ನು ಬ್ರಿಟನ್‌ನ ಹೈಕೋರ್ಟ್‌(High Court of Britain) ವಜಾ ಮಾಡಿದೆ.

Punjab national Bank scam British High Court orders Nirav Modi's deportation akb
Author
First Published Nov 10, 2022, 10:12 AM IST

ಲಂಡನ್‌: ಭಾರತಕ್ಕೆ ಗಡೀಪಾರು ಮಾಡಿದರೆ ನಾನು ಆತ್ಮಹತ್ಯೆ  ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಗಡೀಪಾರಿಗೆ ಅನುಮತಿ ನೀಡಬಾರದು ಬ್ರಿಟನ್ ಹೈಕೋರ್ಟ್‌ಗೆ ಮನವಿ ಮಾಡಿದ್ದ 13,000 ಕೋಟಿ ರು.ಗೂ ಹೆಚ್ಚಿನ ಮೊತ್ತದ ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿ ಸಲ್ಲಿಸಿದ್ದ ಮನವಿಯನ್ನು ಬ್ರಿಟನ್‌ನ ಹೈಕೋರ್ಟ್‌(High Court of Britain) ವಜಾ ಮಾಡಿದೆ. ಹೀಗಾಗಿ ಗಡೀಪಾರು ತಪ್ಪಿಸಿಕೊಳ್ಳಲು ‘ನೀಮೋ’ ಮಾಡಿದ್ದ ಮತ್ತೊಂದು ನಾಟಕ ವಿಫಲವಾದಂತೆ ಆಗಿದೆ.

ಅರ್ಜಿದಾರರ ಆತ್ಮಹತ್ಯೆ ಅಪಾಯ ಮತ್ತು ಮಾನಸಿಕ ಆರೋಗ್ಯ (mental health) ಸ್ಥಿತಿಯನ್ನು ಗಮನಿಸಿದಾಗ, ಅವರನ್ನು ಗಡೀಪಾರು ಮಾಡುವುದು ಅವರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ಈ ಮೂಲಕ ಅರ್ಜಿದಾರರನ್ನು ಭಾರತಕ್ಕೆ ಗಡೀಪಾರು ಮಾಡಲು ಅನುಮತಿ ನೀಡಿದ ಜಿಲ್ಲಾ ನ್ಯಾಯಾಧೀಶರ ಕ್ರಮವನ್ನು ನಾವು ಎತ್ತಿಹಿಡಿಯುತ್ತೇವೆ ಎಂದು ಹೈಕೋರ್ಟ್‌ ಬುಧವಾರ ತೀರ್ಪು ನೀಡಿದೆ. ನೀರವ್‌ ಮೋದಿಯನ್ನು(Nirav Modi)  ಮುಂಬೈನ ಆರ್ಥರ್‌ ರೋಡ್‌ನ (Arthur Road) ಅಂಡಾ ಸೆಲ್‌ಗೆ (Anda cell) ಹಾಕಿದರೆ ಆತ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಆತನ ವಕೀಲರು ವಾದಿಸಿದ್ದರು.

ಇನ್ನೂ 2 ಚಾನ್ಸ್‌:

ಹೈಕೋರ್ಟ್ ತೀರ್ಪಿನ (High Court verdict) ಹೊರತಾಗಿಯೂ ಗಡೀಪಾರು ತಪ್ಪಿಸಿಕೊಳ್ಳಲು ನೀಮೋ ಎಂದೇ ಹೆಸರಾಗಿರುವ ನೀರವ್‌ ಮೋದಿಗೆ (Nirav Modi) ಇನ್ನೂ ಎರಡು ಅವಕಾಶ ಇದೆ. ಹೈಕೋರ್ಟ್‌ ತೀರ್ಪು ಪ್ರಕಟವಾದ 14 ದಿನದಲ್ಲಿ ನೀಮೋ ಸಾರ್ವಜನಿಕ ಮಹತ್ವದ ಅಂಶಗಳನ್ನು ಮುಂದಿಟ್ಟು ಸುಪ್ರೀಂಕೋರ್ಟ್‌ನಲ್ಲಿ (Supreme Court) ಅರ್ಜಿ ಸಲ್ಲಿಸಬಹುದು. ಆದರೆ ಇದಕ್ಕೆ ಹೈಕೋರ್ಟ್‌ನ ಅನುಮತಿ ಅಗತ್ಯ. ಒಂದು ವೇಳೆ, ಮೇಲ್ಮನವಿಗೆ ಹೈಕೋರ್ಟ್ ಅನುಮತಿ ಸಿಗದೇ ಹೋದರೆ ಅಥವಾ ಸುಪ್ರೀಂಕೋರ್ಟ್‌ನಲ್ಲಿಯೂ ಸೋಲಾದರೆ, ಮಾನವ ಹಕ್ಕುಗಳ (Human Rights) ಕುರಿತಾದ ಯುರೋಪಿಯನ್‌ ನ್ಯಾಯಾಲಯದ (European Court) ಮೊರೆ ಹೋಗಬಹುದು. ನೀರವ್‌ ಮೋದಿ 2019ರಿಂದಲೂ ಬ್ರಿಟನ್‌ನ ವಾಂಡ್‌ಸವರ್ಥ್ (Wandsworth Jail)ಜೈಲಿನಲ್ಲಿದ್ದಾನೆ. ಇದೇ ರೀತಿ ಉದ್ಯಮಿಗಳಾದ ವಿಜಯ ಮಲ್ಯ ಹಾಗೂ ಸಂಜಯ್‌ ಭಂಡಾರಿ ಗಡೀಪಾರಿಗೆ ಅನುಮತಿ ಸಿಕ್ಕಿದ್ದರೂ ಬ್ರಿಟನ್‌ನ ಕಾನೂನು ತೊಡಕಿನ ಕಾರಣ ಅವುಗಳ ಜಾರಿ ಇನ್ನೂ ಸಾಧ್ಯವಾಗಿಲ್ಲ.

ನೀರವ್ ಮೋದಿ ಮತ್ತೊಂದು ಶಾಕ್, 253 ಕೋಟಿ ಮೌಲ್ಯದ ಚರಾಸ್ತಿ ಇಡಿ ವಶಕ್ಕೆ!


ಶಸ್ತ್ರಾಸ್ತ್ರ ದಲ್ಲಾಳಿ ಗಡೀಪಾರಿಗೆ ಬ್ರಿಟನ್‌ ಆದೇಶ
ಇದಕ್ಕೂ ಮೊದಲು ಶಸ್ತ್ರಾಸ್ತ್ರ ಹಗರಣ, ತೆರಿಗೆ ವಂಚನೆ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಜತೆ ನಂಟು ಹೊಂದಿದ್ದಾರೆ ಎಂದು ಆರೋಪಿಸಲಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ-ದಲ್ಲಾಳಿ ಸಂಜಯ್‌ ಭಂಡಾರಿಯನ್ನು ಭಾರತಕ್ಕೆ ಗಡೀಪಾರು ಮಾಡಲು ಬ್ರಿಟನ್‌ ನ್ಯಾಯಾಲಯವೊಂದು ಆದೇಶಿಸಿತ್ತು.

ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಗಡೀಪಾರು ಮಾಡಲು ಆದೇಶಿಸಿದ್ದು, ಆತನ ಪ್ರಕರಣವನ್ನು ಬ್ರಿಟನ್‌ನ ಗೃಹ ಕಾರ್ಯದರ್ಶಿಗಳಿಗೆ ರವಾನಿಸಿತ್ತು. ಈ ಆದೇಶ ಹೊರಬಿದ್ದಾಕ್ಷಣ ಭಂಡಾರಿ ಭಾರತಕ್ಕೆ ಗಡೀಪಾರು ಆದಂತೆ ಆಗುವುದಿಲ್ಲ. ಇದರ ವಿರುದ್ಧ ಬ್ರಿಟನ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು 45 ದಿನಗಳ ಕಾಲಾವಕಾಶ ಆತನಿಗೆ ಇದೆ. ಹೀಗಾಗಿ ಆತ ಭಾರತಕ್ಕೆ ಹಸ್ತಾಂತರವಾಗಲು ಇನ್ನಷ್ಟು ಸಮಯ ಹಿಡಿಯಬಹುದು. 

Nirav Modi: ನೀರವ್ ಮೋದಿ ಅತ್ಯಾಪ್ತ ಈಜಿಪ್ಟಿನಿಂದ ಗಡೀಪಾರು..ಸಿಬಿಐ ಕಸ್ಟಡಿಗೆ!

2009ರಲ್ಲಿ ಸ್ವಿಜರ್ಲೆಂಡ್‌ನ ವಿಮಾನ ತಯಾರಿಕಾ ಕಂಪನಿ ಪಿಲಾಟಸ್‌ನಿಂದ 75 ತರಬೇತಿ ವಿಮಾನಗಳನ್ನು ರಕ್ಷಣಾ ಸಚಿವಾಲಯ ಖರೀದಿಸುವ ಸಂದರ್ಭದಲ್ಲಿ ಭಂಡಾರಿ ದಲ್ಲಾಳಿ ಪಾತ್ರ ವಹಿಸಿದ್ದ. ಈ ವೇಳೆ ವಾಯುಪಡೆ ಅಧಿಕಾರಿಗಳಿಗೆ ಲಂಚ ಸಂದಾಯವಾಗಿತ್ತು. 2895 ಕೋಟಿ ರು. ಮೊತ್ತದ ಈ ಗುತ್ತಿಗೆ ಹಿಡಿಯಲು ಪಿಲಾಟಸ್‌ ಏರ್‌ಕ್ರಾಫ್ಟ್ ಕಂಪನಿ ದುಬೈ ಮೂಲದ ಕಂಪನಿಯಾಗಿರುವ ಆಫ್‌ಸೆಟ್‌ ಇಂಡಿಯಾ ಸಲೂಷನ್ಸ್‌ ಕಂಪನಿಗೆ ಹಣ ಸಂದಾಯ ಮಾಡಿತ್ತು ಎಂಬ ಆರೋಪವಿದೆ.

2016ರ ಅಕ್ಟೋಬರ್‌ನಲ್ಲಿ ಆತನ ನಿವಾಸದ ಮೇಲೆ ದಾಳಿ ನಡೆಸಿದಾಗ ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಪತ್ತೆಯಾಗಿದ್ದವು. ಈ ಸಂಬಂಧ ಆತನ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಲುಕೌಟ್‌ ನೋಟಿಸ್‌ ಕೂಡ ಹೊರಡಿಸಲಾಗಿತ್ತು. ಆದಾಗ್ಯೂ ಆತ 2016ರಲ್ಲಿ ದೇಶದಿಂದ ಪರಾರಿಯಾಗಿದ್ದ. ಭಾರತದ ಗಡೀಪಾರು ವಾರಂಟ್‌ ಹಿನ್ನೆಲೆಯಲ್ಲಿ 2020ರ ಜು.15ರಂದು ಆತನನ್ನು ಲಂಡನ್‌ನಲ್ಲಿ ಬಂಧಿಸಲಾಗಿತ್ತು.

ಇದಲ್ಲದೆ 2015ರಿಂದ 2017ರವರೆಗೆ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್‌ನಲ್ಲಿ ಉದ್ದೇಶಪೂರ್ವಕವಾಗಿ ಆತ ವಿದೇಶಿ ಆಸ್ತಿ, ವಿದೇಶಿ ಆದಾಯದ ವಿವರವನ್ನು ಬಚ್ಚಿಟ್ಟಿದ್ದ. ಅಘೋಷಿತ ಆಸ್ತಿ ಘೋಷಣೆಗೆ ಅವಕಾಶ ನೀಡಿದರೂ ಬಳಸಿಕೊಂಡಿರಲಿಲ್ಲ. ಇದಲ್ಲದೆ ಆತನ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೂಡ ಇತ್ತು. ಸಿಬಿಐ ಹಾಗೂ ಇ.ಡಿ. ಕೂಡ ಸಂಜಯ್‌ ಭಂಡಾರಿ ವಿರುದ್ಧ ಪ್ರಕರಣವನ್ನು ದಾಖಲಿಸಿವೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಜತೆ ಸಂಜಯ್‌ ಭಂಡಾರಿಗೆ ವ್ಯವಹಾರಿಕ ಸಂಬಂಧವಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅದನ್ನು ವಾದ್ರಾ ನಿರಾಕರಿಸಿದ್ದರು.
 

Follow Us:
Download App:
  • android
  • ios