PM Modi security breach: ಪಂಜಾಬ್ ಸರ್ಕಾರದಿಂದ ತನಿಖೆ, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ!
ಪ್ರಧಾನಮಂತ್ರಿ ಭದ್ರತೆಯಲ್ಲಿ ಲೋಪ
ಪಂಜಾಬ್ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ, 3 ದಿನಗಳ ಒಳಗೆ ಸಲ್ಲಿಕೆ
ಸುಪ್ರೀಂ ಕೋರ್ಟ್ ನಲ್ಲಿ ನಾಳೆ ಅರ್ಜಿ ವಿಚಾರಣೆ
ನವದೆಹಲಿ (ಜ.6): ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi)ಅವರ ಭದ್ರತೆಯಲ್ಲಿ ಭಾರೀ ಲೋಪವಾದ (security breach) ಪ್ರಕರಣದಲ್ಲಿ ಪಂಜಾಬ್ ಸರ್ಕಾರದ (Punjab government ) ಮೇಲೆ ದೊಡ್ಡ ಮಟ್ಟದ ಟೀಕೆಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಇದರ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ (high level committee) ನೇಮಕ ಮಾಡಿದೆ. ಭದ್ರತಾ ಲೋಪದ ಕಾರಣದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪಂಜಾಬ್ ಭೇಟಿಯನ್ನು ಮೊಟಕುಗೊಳಿಸಿ ದೆಹಲಿಗೆ ವಾಪಸಾಗಿದ್ದರು. ರಾಜ್ಯ ಸರ್ಕಾರದಿಂದ ಆದ ಈ ಲೋಪಗಳನ್ನು ಉನ್ನತ ಮಟ್ಟದ ಸಮಿತಿ ನೇಮಕ ಮಾಡಲಿದ್ದು, ಮೂರು ದಿನಗಳಲ್ಲಿ ಈ ಕುರಿತಂತೆ ಸಮಿತಿ ತನ್ನ ವರದಿಯನ್ನು ಸಲ್ಲಿಕೆ ಮಾಡಲಿದೆ. ಇದರ ನಡುವೆ ಪಂಜಾಬ್ ಸರ್ಕಾರದ ವರ್ತನೆಯ ಕುರಿತಾಗಿ ಸುಪ್ರೀಂ ಕೋರ್ಟ್ ನಲ್ಲಿ ಸೂಕ್ತ ತನಿಖೆಗಾಗಿ ಅರ್ಜಿ ದಾಖಲಿಸಲಾಗಿದ್ದು, ಪೊಲೀಸ್ ಮುಖ್ಯಸ್ಥ ಹಾಗೂ ಮುಖ್ಯ ಕಾರ್ಯದರ್ಶಿಯನ್ನು ವಜಾ ಮಾಡುವಂತೆ ಕೇಳಲಾಗಿದೆ. ಈ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ (Supreme Court) ನಾಳೆ ನಡೆಯಲಿದೆ.
ನಿನ್ನೆ ಫಿರೋಜ್‌ಪುರಕ್ಕೆ ಪ್ರಧಾನಿಯವರ ಭೇಟಿಯ ವೇಳೆ ಉಂಟಾದ ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕಚೇರಿ ಇಂದು ತಿಳಿಸಿದೆ. ಸಮಿತಿಯು ನ್ಯಾಯಮೂರ್ತಿ (ನಿವೃತ್ತ) ಮೆಹ್ತಾಬ್ ಸಿಂಗ್ ಗಿಲ್, ಗೃಹ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಮತ್ತು ನ್ಯಾಯಮೂರ್ತಿ ಅನುರಾಗ್ ವರ್ಮಾ ಅವರನ್ನು ಒಳಗೊಂಡಿರುತ್ತದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಸಮಿತಿಯು ಮೂರು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಸೂಕ್ತ ತನಿಖೆಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ: ಪ್ರಧಾನಿ ಭೇಟಿಯ ವೇಳೆ ಉಂಟಾದ ಭದ್ರತಾ ಲೋಪದ ಕುರಿತಂತೆ ಸೂಕ್ತ ತನಿಖೆಗಾಗಿ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಶುಕ್ರವಾರ ಇದರ ವಿಚಾರಣೆ ನಡೆಸಲಿದೆ. ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪ್ರತಿಯನ್ನು ಇಂದು ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳಿಗೆ ಸಲ್ಲಿಸುವಂತೆ ಸಿಂಗ್ ಅವರಿಗೆ ನ್ಯಾಯಾಲಯ ಹೇಳಿದೆ.
PM Modi security lapse : ಮುಖ್ಯ ಕಾರ್ಯದರ್ಶಿಗೆ ಕೋವಿಡ್ ಪಾಸಿಟಿವ್, ಆ ಕಾರಣದಿಂದ ಪ್ರಧಾನಿ ಸ್ವಾಗತಕ್ಕೆ ಬಂದಿರಲಿಲ್ಲ!
ಬುಧವಾರ ಪಂಜಾಬ್ ಭೇಟಿಯ ವೇಳೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಮೇಲ್ಸೇತುವೆಯೊಂದರ ಮೇಲೆ ಪ್ರಧಾನಿ ಹಾಗೂ ಅವರ ಬೆಂಗಾವಲು ಪಡೆಯ ವಾಹನ 15-20 ನಿಮಿಷಗಳ ಕಾಲ ಸಿಲುಕಿಕೊಂಡಿತ್ತು. ಈ ವೇಳೆ ಕೆಲ ಖಾಸಗಿ ಕಾರುಗಳು ಪ್ರಧಾನಿ ಮೋದಿ ಅವರ ಮಾರ್ಗದಲ್ಲಿ ಸಂಚರಿಸುತ್ತಿರುವುದು ವಿಡಿಯೋಗಳ ಮೂಲಕ ಪ್ರಸಾರವಾಗಿತ್ತು. ಪಂಜಾಬ್ ಭೇಟಿಗಾಗಿ ದೆಹಲಿಯಿಂದ ಬಟಿಂಡಾ ವಿಮಾನನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ವಾಯುಮಾರ್ಗದ ಮೂಲಕ ತೆರೆಳುವುದು ನಿಗದಿಯಾಗಿತ್ತಾದರೂ, ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ರಸ್ತೆಮಾರ್ಗದಲ್ಲಿ ಹೋಗಲು ನಿರ್ಧಾರ ಮಾಡಿದ್ದರು. ಈ ವೇಳೆ ಭದ್ರತಾ ಲೋಪ ಉಂಟಾಗಿದ್ದರಿಂದ ಮೇಲ್ಸೇತುವೆಯಿಂದಲೇ ಬಟಿಂಡಾಕ್ಕೆ ಮರಳಿ ದೆಹಲಿಗೆ ವಾಪಸಾಗಿದ್ದರು.
Modi Security Breach ಮೋದಿಗೆ ಭದ್ರತಾ ಲೋಪ, ಪಂಜಾಬ್ ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ
ಫಿರೋಜ್ ಪುರದಲ್ಲಿ ಸಮಾವೇಶದಲ್ಲಿ ಭಾಗಿಯಾಗುವುದು ಮಾತ್ರವಲ್ಲದೆ, ಕೆಲವು ಯೋಜನೆಗಳಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮಗಳೂ ನಿಗದಿಯಾಗಿದ್ದವು. "ಪ್ರಧಾನಿ ನಿಮ್ಮೆಲ್ಲರನ್ನು ಭೇಟಿಯಾಗಲು ಬಯಸಿದ್ದರು, ಆದರೆ ಕೆಲವು ಕಾರಣಗಳಿಂದ ಅವರು ಇಂದು ನಮ್ಮೊಂದಿಗೆ ಇರುವುದಿಲ್ಲ. ಈ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಲಾಗಿದೆ, ರದ್ದು ಮಾಡಿಲ್ಲ ಎಂದು ಪ್ರಧಾನಿ ತಿಳಿಸಿದ್ದಾರೆ' ಎಂದು ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವಿಯಾ ಫಿರೋಜ್ ಪುರ ಸಮಾವೇಶದಲ್ಲಿ ಭಾಗವಹಿಸಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಹೇಳಿದ್ದರು.
ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಭದ್ರತಾ ಲೋಪದ ಕುರಿತಾಗಿ ಸಂಪೂರ್ಣ ವಿವರವಾದ ವರದಿಯನ್ನು ಪಂಜಾಬ್ ಸರ್ಕಾರದಿಂದ ಕೇಳಿದ್ದು, ಸೂಕ್ತ ವ್ಯಕ್ತಿಗಳು ಇದರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.