ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಗಾಳಿ; ರಾಜೀನಾಮೆಗೆ ಮುಂದಾದ ಸಿಎಂ ಅಮರಿಂದರ್!
- ಪಂಜಾಬ್ ಕಾಂಗ್ರೆಸ್‌ನಲ್ಲಿ ಭಿನ್ನಮತ, ಬಣಗಳ ನಡುವಿನ ಜಗಳ ತಾರಕಕ್ಕೆ
- ಸಿಧು ವಿರುದ್ಧ ಮತ್ತೆ ಗುಡುಗಿದ ಅಮರಿಂದರ್, ಹೈಕಮಾಂಡ್ ನಿರ್ಲಕ್ಷ್ಯ
- ಸಿಎಂ ಸ್ಥಾನಕ್ಕೆ ರಾಜೀರಾಮೆ ನೀಡಲು ಮುಂದಾದ ಕ್ಯಾಪ್ಟನ್ ಅಮರಿಂದರ್
ಪಂಜಾಬ್(ಸೆ.18): ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯಗಳಲ್ಲಿನ ಒಳಜಗಳ ನಿಯಂತ್ರಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಕರ್ನಾಟಕ, ಪಂಜಾಬ್, ರಾಜಸ್ಥಾನ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಒಳಜಗಳವನ್ನು ಒಂದು ಹಂತಕ್ಕೆ ನಿಯಂತ್ರಿಸಲಾಗಿತ್ತು. ಆದರೆ ಪಂಜಾಬ್‌ನಲ್ಲಿ ಮಾತ್ರ ಭಿನ್ನಮತ ಶಮನಗೊಂಡಿಲ್ಲ. ಇದೀಗ ಪಂಜಾಬ್ ಕಾಂಗ್ರೆಸ್‌ನಲ್ಲಿ ಮತ್ತೆ ಜಗಳ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆಗೆ ಮುಂದಾಗಿದ್ದಾರೆ.
ಹೈಕಮಾಂಡ್‌ಗೇ ಸಿಧು ಸಡ್ಡು: ಪಂಜಾಬ್ 'ಕೈ' ಬಿಕ್ಕಟ್ಟು ತೀವ್ರ!
ಪಕ್ಷ ತೊರೆಯುವ ಬೆದರಿಕೆ ಮೂಲಕ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ನವಜೋತ್ ಸಿಂಗ್ ಸಿಧು ತಮ್ಮ ಅಧಿಕಾರ ಚಲಾವಣೆಗೆ ಮುಂದಾಗಿದ್ದಾರೆ. ಮೊದಲೇ ಸಿಧು ವಿರುದ್ಧ ಅಸಮಾಧಾನಗೊಂಡಿರುವ ಅಮರಿಂದರ್ ಸಿಂಗ್ ಇದೀಗ ಯಾವುದೇ ದಾರಿ ತೋಚದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳೆಗಿಳಿಯುವ ಸೂಚನೆ ನೀಡಿದ್ದಾರೆ. ಇಂದು ಸಂಜೆ 4 ಗಂಟೆಗೆ ರಾಜಭನಕ್ಕೆ ತೆರಳಲಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್, ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಜೊತೆ ಚರ್ಚೆ ನಡೆಸಲಿದ್ದಾರೆ. ಮೂಲಗಳ ಪ್ರಕಾರ ಕ್ಯಾಪ್ಟನ್ ಅಮರಿಂದರ್ ರಾಜೀನಾಮೆ ನೀಡಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಸಿಧು ಜೊತೆಗಿನ ಜಗಳದಿಂದ ಇದೀಗ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಸಿಎಂ ಸ್ಥಾನ ಮಾತ್ರವಲ್ಲ, ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಸಿಎಂ ಅಮರಿಂದರ್ ಸಿಂಗ್ ತಮ್ಮ ಆಪ್ತರನ್ನು ಮನೆಗೆ ಕರೆಸಿಕೊಂಡು ಮಹತ್ವದ ಸಭೆ ನಡೆಸಿದ್ದಾರೆ. ಇದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಅಮರೀಂದರ್ ವಿರುದ್ಧ 4 ಸಚಿವರು, 23 ಶಾಸಕರ ಬಂಡಾಯ!
ಕಳೆದ ರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸಚಿವ ಅಜಯ್ ಮಕೇನ್ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಿಧು ಕಾಂಗ್ರೆಸ್ ಪಕ್ಷದ ಅಧ್ಯಕ್ಷಸ್ಥಾನಕ್ಕೇರಿದ ಬಳಿಕ ಪಂಜಾಬ್ ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಸಿಧು ಬಣ ಹಾಗೂ ಅಮರಿಂದರ್ ಬಣ ಪ್ರಾಬಲ್ಯ ಸಾಧಿಸಲು ಹೋರಾಟ ನಡೆಸುತ್ತಲೆ ಇದೆ. ಇದೀಗ ತಾರಕಕ್ಕೇರಿದ್ದು, ಅಮರಿಂದರ್ ವಿಕೆಟ್ ಪತನದ ಮೂಲಕ ಬಿಕ್ಕಟ್ಟು ಶಮನವಾಗುವ ಸಾಧ್ಯತೆಗಳು ದಟ್ಟವಾಗಿದೆ.
ಕಾಶ್ಮೀರ ಭಾರತದ್ದಲ್ಲ ಎಂದ ಸಿಧು ಸಲಹೆಗಾರನಿಗೆ ಕ್ಯಾಪ್ಟನ್ ಕ್ಲಾಸ್!
ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಸ್ಥಾನದಿಂದ ಕೆಳಗಿಳಿದರೆ ಪಂಜಾಬ್ ಕ್ಯಾಬಿನೆಟ್‌ನಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಇತ್ತ ಸಿಎಂ ಸ್ಥಾನದ ರೇಸ್‌ನಲ್ಲಿ ಪ್ರತಾಪ್ ಸಿಂಗ್ ಬಾಜ್ವ, ಸುನಿಲ್ ಜಕಾರ್, ರಾಜ್ ಕುಮಾರ್ ವರ್ಕಾ, ಇಂದ್ರಜಿತ್ ಸೇರಿದಂತೆ ಕೆಲ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.