ಪ್ರಧಾನಿ ಭದ್ರತಾ ಲೋಪದ ಬಗ್ಗೆ ಸುಪ್ರೀಂ ಕೋರ್ಟ್ ನೇತೃತ್ವದ ಸಮಿತಿಯಿಂದ ತನಿಖೆಸ್ವತಃ ಪ್ರಧಾನಿಯ ಬಳಿ ಕ್ಷಮೆ ಕೇಳಿದ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ"ಜೋ ಹುವಾ ಉಸ್ಕೆ ಲಿಯೆ ಮುಜೇ ಖೇದ್ ಹೇ" ಎಂದು ಹೇಳಿದ ಚನ್ನಿ
ನವದೆಹಲಿ (ಜ. 13): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿಯ ವೇಳೆ ಉಂಟದ ಭದ್ರತಾ ಲೋಪದ ಪ್ರಕರಣದಲ್ಲಿ ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಕೊಂಡಿರುವ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ, ಪ್ರಕರಣದ ಕುರಿತಾಗಿ ಸ್ವತಃ ಪ್ರಧಾನಿ ಮೋದಿ ಅವರಲ್ಲಿ ಕ್ಷಮೆಯಾಚಿಸಿದ್ದಾರೆ. ಗುರುವಾರ ಪ್ರಧಾನಿ ಮೋದಿ ಅವರೊಂದಿಗೆ ಕೋವಿಡ್-19 ಸಿದ್ಧತೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಚರಣ್ ಜಿತ್ ಸಿಂಗ್ ಚನ್ನಿ ಜನವರಿ 5 ರಂದು ಸಂಭವಿಸಿದ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, "ಜೋ ಹುವಾ ಉಸ್ಕೆ ಲಿಯೆ ಮುಜೇ ಖೇದ್ ಹೇ' ಎಂದು ಪ್ರಧಾನಿ ಅವರಿಗೆ ತಿಳಿಸುತ್ತಾ ಕ್ಷಮೆಯಾಚಿಸಿದರು.
ಪ್ರಧಾನಿ ಮತ್ತು ಇತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಸಭೆಯಲ್ಲಿ ಭಾಗವಹಿಸಿದ್ದಾಗ ಪಂಜಾಬ್ ಸಿಎಂ ಕ್ಷಮೆಯಾಚನೆ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಚನ್ನಿ ಹೇಳಿಕೆ ನೀಡಿದ್ದರು. ಕೇಂದ್ರ ಗೃಹ ಸಚಿವಾಲಯ ಪ್ರಧಾನಿ ಮೋದಿ ಹಾಗೂ ಅವರ ಬೆಂಗಾವಲು ಪಡೆ ಫ್ಲೈ ಓವರ್ ನ ಮೇಲೆ 20 ನಿಮಿಷ ನಿಂತಿದ್ದು, ಪ್ರಮುಖ ಭದ್ರತಾ ಲೋಪ ಎಂದು ಪರಿಗಣಿಸಿ ತನಿಖೆ ಆರಂಭಿಸಿದ ಬಳಿಕ ಪ್ರತಿಕ್ರಿಯೆ ನೀಡಿದ್ದ ಚನ್ನಿ, "ಇದರಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಧಾನಿ ಅವರ ಮೇಲೆ ಯಾವುದೇ ದಾಳಿಯ ಪರಿಸ್ಥಿತಿ ಇದ್ದಿರಲಿಲ್ಲ' ಎಂದು ಹೇಳಿದ್ದರು.
ಜನವರಿ 5 ರಂದು ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ರಸ್ತೆತಡೆಯಿಂದಾಗಿ ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಫ್ಲೈಓವರ್‌ನಲ್ಲಿ ಸಿಲುಕಿತ್ತು. ಪ್ರಧಾನ ಮಂತ್ರಿಗಳು ಫಿರೋಜ್ ಪುರದಲ್ಲಿ ಸಮಾವೇಶ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ದೆಹಲಿಗೆ ವಾಪಸಾಗಿದ್ದರು. ದೆಹಲಿಗೆ ಬರುವ ಮುನ್ನ ಬಟಿಂಡಾ ವಿಮಾನನಿಲ್ದಾಣದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, "ನಾನು ಸುರಕ್ಷಿತವಾಗಿ ವಾಪಸಾಗಿರುವುದಕ್ಕೆ, ಮುಖ್ಯಮಂತ್ರಿಯವರಿಗೆ ಥ್ಯಾಂಕ್ಸ್ ಹೇಳಿ" ಎಂದು ಹೇಳಿರುವ ಮಾತುಗಳೂ ರಾಜಕೀಯ ಕಾರಣದಿಂದಾಗಿ ಸುದ್ದಿಯಾಗಿತ್ತು.
ಪಂಜಾಬ್‌ನಲ್ಲಿ ಪ್ರಧಾನಿ ಮೋದಿಯವರ ಭದ್ರತಾ ಲೋಪವನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ಜನವರಿ 12 ರಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿದೆ.ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಎನ್‌ವಿ ರಮಣ(Chief Justice of India NV Ramana) ನೇತೃತ್ವದ ಪೀಠ ವಿಚಾರಣೆ ನಡೆಸಿ ಸ್ವತಂತ್ರ ತನಿಖೆಗೆ ಸಮಿತಿ ರಚಿಸಿತ್ತು. ಸುಪ್ರೀಂ ಕೋರ್ಟ್ ನೇಮಿಸಿ ತನಿಖಾ ಸಮಿತಿಗೆ ನಿವೃತ್ತ ಜಸ್ಟೀಸ್ ಇಂದು ಮಲ್ಹೋತ್ರ ಅಲ್ಲದೆ, ಸಮಿತಿಯಲ್ಲಿ ರಾಷ್ಟ್ರೀಯ ತನಿಖಾ ದಳದ ಡೈರೆಕ್ಟರ್ ಜನರಲ್, ಚಂಡೀಘಡ ಪೊಲೀಸ್ ಮಹಾನಿರ್ದೇಶಕ(DGP), ಪಂಜಾಬ್ ಹರ್ಯಾಣ ಕೋರ್ಟ್ ರಿಜಿಸ್ಟ್ರಾರ್ ಜನರಲ್ ಇರಲಿದ್ದಾರೆ.
42,000 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ಗೆ ಭೇಟಿ ನೀಡಿದ್ದ ವೇಳೆ ಈ ಭದ್ರತಾ ಲೋಪ ಸಂಭವಿಸಿದೆ. ಹವಾಮಾನ ವೈಪರಿತ್ಯದಿಂದ ಮೋದಿ ವಾಯುಮಾರ್ಗದಲ್ಲಿ ಸಂಚರಿಸುವ ಬದಲು ರಸ್ತೆ ಮಾರ್ಗದಲ್ಲಿ ಸಂಚರಿಸಿದ್ದಾರೆ. ಈ ವೇಳೆ ಪಂಜಾಬ್ ಪೊಲೀಸರು ರಸ್ತೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ. ಮೋದಿ ಸಂಚರಿಸುವ ರಸ್ತೆಯಲ್ಲಿ ಪ್ರತಿಭಟನಕಾರರು ಜಮಾಯಿಸಿದ್ದರು. ಹೀಗಾಗಿ ಮೋದಿ 20 ನಿಮಿಷಗಳ ಕಾಲ ಪ್ರತಿಭಟನಾಕಾರರ ನಡುವೆ ಸಿಲುಕಬೇಕಾಯಿತು. ಭದ್ರತಾ ಕಾರಣದಿಂದ ಮೋದಿ ಪಂಜಾಬ್ ಕಾರ್ಯಕ್ರಮ ಮೊಟಕುಗೊಳಿಸಿ ನೇರವಾಗಿ ದೆಹಲಿಗೆ ವಾಪಾಸ್ ಆಗಿದ್ದರು. ಈ ಪ್ರಕರಣ ದೇಶದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಇತ್ತ ಪಂಜಾಬ್ ಸರ್ಕಾರ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದಿತ್ತು.
