ಲಂಚ ಪ್ರಕರಣದಲ್ಲಿ ಅಪ್ 2ನೇ ಶಾಸಕನ ಬಂಧನ: ಅಬಕಾರಿ ಹಗರಣದಲ್ಲಿ ಕೇಜ್ರಿ ಆಪ್ತನ ವಿಚಾರಣೆ
ಪಂಜಾಬ್‌ನ ಆಡಳಿತ ಪಕ್ಷ ಆಮ್ ಆದ್ಮಿಯ ಶಾಸಕ ಅಮೃತ್ ರತನ್ ಕೋಟ್‌ಫಟ್ಟಾ (Amrit Ratan Kotphatta)ಅವರನ್ನು ಲಂಚ ಪ್ರಕರಣದಲ್ಲಿ ರಾಜ್ಯ ವಿಚಕ್ಷಣಾ ದಳ ಗುರುವಾರ ಬಂಧಿಸಿದೆ. ಇನ್ನೊಂದೆಡೆ ದೆಹಲಿ ಅಬಕಾರಿ ಹಗರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆಪ್ತ ಸಹಾಯಕ ಬಿಭವ್ ಕುಮಾರ್‌ನನ್ನು ಇಡಿ ವಿಚಾರಣೆ ನಡೆಸಿದೆ.
ಚಂಡೀಗಢ: ಪಂಜಾಬ್‌ನ ಆಡಳಿತ ಪಕ್ಷ ಆಮ್ ಆದ್ಮಿಯ ಶಾಸಕ ಅಮೃತ್ ರತನ್ ಕೋಟ್‌ಫಟ್ಟಾ (Amrit Ratan Kotphatta)ಅವರನ್ನು ಲಂಚ ಪ್ರಕರಣದಲ್ಲಿ ರಾಜ್ಯ ವಿಚಕ್ಷಣಾ ದಳ ಗುರುವಾರ ಬಂಧಿಸಿದೆ. ಇತ್ತೀಚಿಗೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬಂಧಿತರಾದ ರಶೀಮ್ ಗರ್ಗ್ (Rashim Garg) ಅವರೊಂದಿಗೆ ಅಮೃತ್ ಆಪ್ತ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಅಮೃತ್‌ರನ್ನು ಬಂಧಿಸಲಾಗಿದೆ. ಇವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 4 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ. ಅಮೃತ್ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟ2ನೇ ಆಪ್ ಶಾಸಕರಾಗಿದ್ದಾರೆ. ಕಳೆದ ವರ್ಷ ಆರೋಗ್ಯ ಸಚಿವ ವಿಜಯ್ ಸಿಂಘ್ಲಾರನ್ನು (Vijay Singhla) ಬಂಧಿಸಲಾಗಿತ್ತು.
ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಆಪ್ತನ ವಿಚಾರಣೆ
ಮತ್ತೊಂದೆಡೆ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು (ED.) ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆಪ್ತ ಸಹಾಯಕ ಬಿಭವ್ ಕುಮಾರ್‌ನನ್ನು ವಿಚಾರಣೆ ನಡೆಸಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಬಿಭವ್ ಕುಮಾರ್ ಸೇರಿದಂತೆ 36 ಜನ ಆರೋಪಿಗಳು ಸಾವಿರಾರು ಕೋಟಿ ರು.ಗಳ ಅಕ್ರಮ ನಡೆಸಲು ಬಳಸಿದ್ದರೆನ್ನಲಾದ 170 ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ ಆರೋಪ ಹೊತ್ತಿದ್ದಾರೆ. ಇ.ಡಿ.ಯು ಈ ಹಿಂದೆ ಕೋರ್ಟ್‌ಗೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಬಿಭವ್ ಕುಮಾರ್ ಮೊಬೈಲ್‌ನ ಐಎಮ್‌ಇಐ (IMEI) ಸಂಖ್ಯೆಯು 2021ರಿಂದ 2022ರ ವರೆಗೆ 4 ಬಾರಿ ಬದಲಾವಣೆಗೊಂಡಿದೆ ಎಂದು ಉಲ್ಲೇಖಿಸಿತ್ತು.