ಪೊರ್ಶೆ ಕಾರು ಅಪಘಾತಕ್ಕೂ ಮೊದಲು ಪಾರ್ಟಿಗಾಗಿ 48,000 ರೂ ಖರ್ಚು ಮಾಡಿದ್ದ ಉದ್ಯಮಿ ಪುತ್ರ!
ಪುಣೆ ಪೊರ್ಶೆ ಕಾರು ಅಪಘಾತಕ್ಕೆ ಅಮಾಯಕ ಟೆಕ್ಕಿಗಳಿಬ್ಬರು ಬಲಿಯಾಗಿದ್ದಾರೆ. ಈ ಅಪಘಾತಕ್ಕೂ ಮೊದಲು ಉದ್ಯಮಿಯ ಅಪ್ರಾಪ್ತ ಪುತ್ರ ಬಾರಿನಲ್ಲಿ ಮದ್ಯ ಹಾಗೂ ಫುಡ್‌ಗಾಗಿ ಬರೋಬ್ಬರಿ 48,000 ರೂಪಾಯಿ ಖರ್ಚು ಮಾಡಿರುವ ಮಾಹಿತಿ ಬಯಲಾಗಿದೆ.
ಪುಣೆ(ಮೇ.21) ಶ್ರೀಮಂತ ಉದ್ಯಮಿಯ ಅಪ್ರಾಪ್ತ ಪುತ್ರ ಮಾಡಿದ ಕಾರು ಅಪಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ದುಬಾರಿ ಪೊರ್ಶೆ ಕಾರನ್ನು 150 ಕಿ.ಮೀ ವೇಗದಲ್ಲಿ ಚಲಾಯಿಸಿ ಇಬ್ಬರ ಮೇಲೆ ಹತ್ತಿಸಿ ಹಲವರಿಗೆ ಗಾಯ ಮಾಡಿದ್ದ ಘಟನೆ ಪುಣೆಯಲ್ಲಿ ನಡೆದಿತ್ತು. ಘಟನೆ ನಡೆದ 15 ಗಂಟೆಗಳಲ್ಲೇ ಉದ್ಯಮಿ ಪುತ್ರ ವೇದಾಂತ್ ಅಗರ್ವಾಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಇದೀಗ ಪೊಲೀಸರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಬಾರಿನಲ್ಲಿ ಕುಡಿದು ಪಾರ್ಟಿ ಮಾಡಿದ್ದ. ಬಳಿಕ ಕಾರು ಚಲಾಯಿಸಿ ಅಪಘಾತ ಮಾಡಿರುವ ಸಿಸಿಟಿವಿ ವಿಡಿಯೋಗಳು ಬಹಿರಂಗವಾಗಿದೆ. ಅಪಘಾತಕ್ಕೂ ಮೊದಲು ಬಾರಿನಲ್ಲಿನ ಪಾರ್ಟಿಗೆ ಬರೋಬ್ಬರಿ 48,000 ರೂಪಾಯಿ ಖರ್ಚು ಮಾಡಿರುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಪಾರ್ಟಿ ಬಳಿಕ ಅತೀ ವೇಗದಿಂದ ಕಾರು ಚಲಾಯಿಸಿಕೊಂಡು ಬಂದ ಅಪ್ರಾಪ್ತ ವೇದಾಂತ್ ಅಗರ್ವಾಲ್ ಅಪಘಾತ ಮಾಡಿದ್ದ. ಅಪ್ರಾಪ್ತನಾಗಿರುವ ಕಾರಣ ಪೊಲೀಸರು ವೇದಾಂತ್ ಅಗರ್ವಾಲ್‌ನನ್ನು ಬಾಲಾಪರಾಧಿ ಕೇಂದ್ರಕ್ಕೆ ಒಪ್ಪಿಸಿತ್ತು. ಇತ್ತ 15 ಗಂಟೆಗಳಲ್ಲಿ ಜಾಮೀನು ಪಡೆದು ಹೊರಬಂದಿದ್ದು. ಈತನ ಸಿಸಿಟಿವಿ ವಿಡಿಯೋಗಳನ್ನು ಪೊಲೀಸರು ಪಡೆದು ತನಿಖೆ ನಡೆಸಿದ್ದಾರೆ. ಇತ್ತ ಅಪಘಾತಕ್ಕೂ ಮೊದಲು ಮಾಡಿದ ಪಾರ್ಟಿಯ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಕಾರು ಹತ್ತಿಸಿ ಇಬ್ಬರ ಸಾಯಿಸಿದ್ದ ಉದ್ಯಮಿ ಪುತ್ರನಿಗೆ ಪ್ರಬಂಧ ಬರೆಯುವ ಷರತ್ತುಬದ್ಧ ಜಾಮೀನು!
ಬಾರಿನಲ್ಲಿ ವೇದಾಂತ್ ಅಗರ್ವಾಲ್ ಹಾಗೂ ಇತರ ಮೂವರು ಪಾರ್ಟಿ ಮಾಡಿದ್ದಾರೆ. ಮದ್ಯ, ಆಹಾರ ಸೇವಿಸಿದ್ದಾರೆ. ಈ ಪಾರ್ಟಿಯ ಬಿಲ್ 48,000 ರೂಪಾಯಿ. ಕೆಲವೇ ಗಂಟೆಗಳಲ್ಲಿ 48,000 ರೂಪಾಯಿ ಖರ್ಚು ಮಾಡಿದ ವೇದಾಂತ್ ಬಳಿಕ ಪೊರ್ಶೆ ಕಾರಿನ ಮೂಲಕ ವೇಗವಾಗಿ ತೆರಳಿ ಅಪಘಾತ ಮಾಡಿದ್ದಾನೆ. ಹೀಗಾಗಿ ಈತನನ್ನು 15 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲು ಕೋರ್ಟ್‌ಗೆ ಮನವಿ ಮಾಡಲು ಪುಣೆ ಪೊಲೀಸರು ಸಜ್ಜಾಗಿದ್ದಾರೆ.
ಇತ್ತ ಪುತ್ರನ ತಂದೆ, ಉದ್ಯಮಿನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಪ್ರಾಪ್ತ ಬಾಲಕನಿಗೆ ಮದ್ಯ ನೀಡಿದ್ದಕ್ಕೆ ಎರಡು ಹೋಟೆಲ್‌ನ ಮೂವರು ಸಿಬ್ಬಂದಿಗಳನ್ನು ಕೂಡ ಬಂಧಿಸಲಾಗಿದ್ದು, ಬಾರ್ ಅನ್ನು ಪೊಲೀಸರು ಸೀಲ್ ಮಾಡಿದ್ದಾರೆ.ಬಾಲಕನ ತಂದೆಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನ್ನ ಮಗನಿಗೆ ವಾಹನ ಪರಾವಾನಗಿ ಇಲ್ಲ ಎನ್ನುವ ವಿಚಾರ ತಿಳಿದಿದ್ದರೂ ಕೂಡ ಕಾರು ನೀಡಿದ್ದಕ್ಕೆ ಕೇಸ್ ದಾಖಲಿಸಿ ಬಂಧಿಸಿದ್ದಾರೆ. ಇದರ ಜೊತೆಗೆ ಬಾರ್‌ನಲ್ಲಿ ಬಾಲಕ ಮದ್ಯ ಸೇವಿಸಿರುವುದು ಸಿಸಿಟಿವಿಯಲ್ಲಿ ದೃಢವಾಗಿತ್ತು, ಹೀಗಾಗಿ ಅಪ್ರಾಪ್ತರಿಗೆ ಮದ್ಯ ವಿತರಿಸಿದ ಕಾರಣಕ್ಕೆ ಹೋಟೆಲ್ ಮಾಲೀಕನೂ ಸೇರಿದಂತೆ ಮೂವರ ಬಂಧನವಾಗಿದೆ.
ಪೋರ್ಶೆ ಕಾರು ಹತ್ತಿಸಿ ಇಬ್ಬರ ಕೊಂದ ಬಿಲ್ಡರ್ ಪುತ್ರ: ಹಿಗ್ಗಾಮುಗ್ಗಾ ಥಳಿಸಿದ ಜನ