ಪುಣೆ(ಮೇ.08): ಮೈಮೇಲೆ 10 ಕಿಲೋ ಗ್ರಾಂಗೂ ಅಧಿಕ ಬಂಗಾರ ಹಾಕಿಕೊಂಡು ಒಡಾಡುತ್ತಿದ್ದ ಖ್ಯಾತ ಬ್ಯುಸಿನೆಸ್‌ಮನ್ ಪುಣೆಯ ಸಮ್ರಾಟ್ ಮೊಜೆ(39 ವರ್ಷ) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ದೇಶಾದ್ಯಂತ 'ಗೋಲ್ಡ್‌ ಮ್ಯಾನ್' ಎಂದೇ ಪ್ರಖ್ಯಾತಿಯಾಗಿದ್ದ ಸಮ್ರಾಟ್ ಮೊಜೆ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ(ಮೇ.05)ದಂದು ಕೊನೆಯುಸಿರೆಳೆದಿದ್ದಾರೆ.  ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಅವರ ಅಂತ್ಯಕ್ರಿಯೆಯನ್ನು ಪುಣೆಯ ಯರವಾಡದ ಬಳಿ ಕೆಲವೇ ಜನರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಗೋಲ್ಡ್ ಮ್ಯಾನ್ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪುಣೆ ನಗರದಾದ್ಯಂತ ಖ್ಯಾತ ಬ್ಯುಸಿನೆಸ್‌ಮನ್ ಆಗಿ ಮೊಜೆ ಗುರುತಿಸಿಕೊಂಡಿದ್ದರು. ಕತ್ತಿನಲ್ಲಿ ಎಂಟರಿಂದ ಹತ್ತು ಕೆ.ಜಿ ಚಿನ್ನವನ್ನು ಧರಿಸುವ ಮೂಲಕ ಗೋಲ್ಡ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದರು. ಮೊಜೆ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಅಭಿಲಾಷೆ ಹೊಂದಿದ್ದರು. ಆದರೆ ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ.

ಐತಿಹಾಸಿಕ ಏರ್‌ಲಿಫ್ಟ್‌ ಆರಂಭ; ಕೇರಳಕ್ಕೆ ಬಂದಿಳಿದ 2 ವಿಮಾನಗಳು

ಗೋಲ್ಡ್‌ ಮ್ಯಾನ್ ಎಂದು ಗುರುತಿಸಿಕೊಂಡು ಅತಿ ಕಡಿಮೆ ವಯಸ್ಸಿನಲ್ಲಿ ಮೃತಪಟ್ಟವರ ಪೈಕಿ ಸಮ್ರಾಟ್‌ ಮೊಜೆ ಮೊದಲಿಗರೇನಲ್ಲ. ಈ ಮೊದಲು 2011ರಲ್ಲಿ ರಮೇಶ್ ವಂಜಾಲೆ ಎಂಬಾತ ಕೂಡಾ ಗೋಲ್ಡ್‌ ಮ್ಯಾನ್ ಎಂಬ ಹೆಸರಿನಿಂದಲೇ ಪ್ರಖ್ಯಾತನಾಗಿದ್ದ. ಆದರೆ ಆತ ಕೂಡಾ 45ನೇ ವಯಸ್ಸಿಗೆ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದರು. ಇವರ ಅಂತ್ಯಕ್ರಿಯೆಗೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಸೇರಿದಂತೆ ಹಲವರು ಭಾಗವಹಿಸಿದ್ದರು.

ಒಟ್ಟಿನಲ್ಲಿ ಎಷ್ಟು ಒಡವೇ ಆಭರಣಗಳು ಮೈಮೇಲೆ ಹಾಕಿಕೊಂಡಿದ್ದರೂ ಸಾವು ಮಾತ್ರ ತಪ್ಪಿದ್ದಲ್ಲ, ವಿಪರ್ಯಾಸವೆಂದರೆ ಲಾಕ್‌ಡೌನ್‌ನಿಂದಾಗಿ ಜನಪ್ರಿಯ ವ್ಯಕ್ತಿಯ ನಿಧನದಲ್ಲಿ ಕಣ್ಣೀರು ಸುರಿಸಲು ಸಂಬಂಧಿಕರು ಇದ್ದರೋ ಇಲ್ಲವೋ ದೇವರೇ ಬಲ್ಲ.