ಕಾಶ್ಮೀರದಲ್ಲಿ ತಪ್ಪಿತು ಭಾರೀ ಸ್ಪೋಟ: 7 ಉಗ್ರರ ಬಂಧನ!
ಜಮ್ಮು ಮತ್ತು ಕಾಶ್ಮೀರದ ಎರಡು ಸ್ಥಳಗಳಲ್ಲಿ ಬೃಹತ್ ಸ್ಫೋಟಕ್ಕೆ ಸಂಚು| ಕಾಶ್ಮೀರದಲ್ಲಿ 7 ಉಗ್ರರ ಬಂಧನ, ತಪ್ಪಿದ ಕಾರು ಸ್ಫೋಟ| ಜೈಷ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ 7 ಉಗ್ರರು ಸೆರೆ
ಶ್ರೀನಗರ(ಮಾ.11): ಜಮ್ಮು ಮತ್ತು ಕಾಶ್ಮೀರದ ಎರಡು ಸ್ಥಳಗಳಲ್ಲಿ ಬೃಹತ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಜೈಷ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ 7 ಉಗ್ರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕಾರೊಂದನ್ನು ಬಳಸಿ ನಡೆಸಲು ಉದ್ದೇಶಿಸಿದ್ದ ದೊಡ್ಡ ವಿಧ್ವಂಸಕ ಮತ್ತು ಸುಧಾರಿತ ಸ್ಫೋಟಕಗಳನ್ನು ಬಳಸಿ ನಡೆಸಲು ಉದ್ದೇಸಿದ್ದ ದುಷ್ಕೃತ್ಯವೊಂದು ತಪ್ಪಿದೆ.
ಬಂಧಿತರಲ್ಲಿ ಜೈಷ್ ಸಂಘಟನೆಗೆ ಸೇರಿದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಸಾಹಿಲ್ ನಜೀರ್, ಕೈಸರ್, ಯೂನಿಸ್ ಮತ್ತು ಯಾಸಿರ್ ಅಹಮದ್ ವಾನಿ ಸೇರಿದ್ದಾರೆ. ಈ ಪೈಕಿ ಸಾಹಿಲ್‌ನನ್ನು ಜೈಷ್ ಉಗ್ರ ಸಂಘಟನೆಯು ಟೆಲಿಗ್ರಾಮ ಆ್ಯಪ್ ಮೂಲಕ ಉಗ್ರ ಕೃತ್ಯಕ್ಕೆ ಪ್ರೋತ್ಸಾಹಿಸಿತ್ತು. ಅದರಿಂದ ಪ್ರಭಾವಿತನಾಗಿದ್ದ ಆತ ಹಳೆಯ ಕಾರೊಂದನ್ನು ಬಳಸಿ, ಅದಕ್ಕೆ ಸ್ಫೋಟಕಗಳನ್ನು ಅಳವಡಿಸಿ ಸ್ಫೋಟ ನಡೆಸಲೆಂದು ಉತ್ತರ ಕಾಶ್ಮೀರಕ್ಕ ತಂದಿದ್ದ. ಈ ಕುರಿತು ಖಚಿತ ಮಾಹಿತಿ ಹೊಂದಿದ್ದ ನಾವು ಆತನನ್ನು ಬಂಧಿಸಿದ್ದೆವು. ಆತ ನೀಡಿದ ಮಾಹಿತಿ ಮೇರೆಗೆ ಆತನ ಮೂವರು ಸಹಚರರನ್ನು ಕೂಡಾ ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಅವಂತಿಪೋರಾದ ಎಂಸಿ ಕಟ್ಟಡದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಮುಸೇಬ್ ಅಹಮದ್, ಮನೀಬ್, ಶಾಹಿದ್ ಎಂಬ ಮೂವರು ಲಷ್ಕರ್ ಉಗ್ರರನ್ನು ಬಂಧಿಸಲಾಗಿದೆ. ಮುಸೇಬ್‌ನ ಮನೆಯಿಂದ ಸ್ಫೋಟಕ್ಕೆ ಬಳಸಲು ತಂದಿಡಲಾಗಿದ್ದ 25 ಕೆಜಿ ಅಮೋನಿಯಂ ಪೌಡರ್ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.