ತೈಲ ಬೆಲೆ ಏರಿಕೆ ಮಧ್ಯೆ ಕೋರ್ಟ್ ಮಹತ್ವದ ಆದೇಶ, ಸಾರಿಗೆ ಸಂಸ್ಥೆಗೆ ಕೊಂಚ ನೆಮ್ಮದಿ!
* ಸಗಟು ದರದಲ್ಲಿ ಪೂರೈಕೆಗೆ ಮಧ್ಯಂತರ ತಡೆ
* ಸಾರಿಗೆ ಸಂಸ್ಥೆಗೆ ಚಿಲ್ಲರೆ ದರದಲ್ಲೇ ಡೀಸೆಲ್: ಕೇರಳ ಹೈಕೋರ್ಚ್ ಆದೇಶ
ಕೊಚ್ಚಿ(ಏ.14): ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಚಿಲ್ಲರೆ ಮಾರಾಟ ದರದಲ್ಲೇ ಡೀಸೆಲ್ ಮಾರಾಟ ಮಾಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇರಳ ಹೈಕೊರ್ಚ್ ಮಧ್ಯಂತರ ಆದೇಶ ನೀಡಿದೆ. ಕಳೆದ ತಿಂಗಳು ಡೀಸೆಲ್ ಸಗಟು ಖರೀದಿಯ ಮೇಲಿನ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಹಾಗಾಗಿ ಚಿಲ್ಲರೆ ಮಾರಾಟ ದರ ಮತ್ತು ಸಗಟು ಮಾರಾಟದ ನಡುವೆ 22 ರು.ಗಳ ವ್ಯತ್ಯಾಸ ಉಂಟಾಗಿತ್ತು. ಸಗಟು ದರದಲ್ಲಿ ಡೀಸೆಲ್ ಖರೀದಿಸುತ್ತಿದ್ದ ಸಾರಿಗೆ ಸಂಸ್ಥೆಗೆ ಇದು ಭಾರೀ ಪರಿಣಾಮ ಬೀರಿತ್ತು.
ಈ ಬೆಲೆ ವ್ಯತ್ಯಾಸ ಪ್ರಶ್ನಿಸಿ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎನ್. ನಗರೇಶ್, ‘ಬೆಲೆ ಹೆಚ್ಚಳದ ಕುರಿತು ಅಳವಡಿಸಿಕೊಂಡಿರುವ ಕಾರ್ಯ ವಿಧಾನಗಳು ಏನೇ ಇರಲಿ, ಪ್ರಾಥಮಿಕವಾಗಿ ವಿಧಿಸಿರುವ ದರ ವಿಪರೀತವಾಗಿದೆ. ಇದು ಯಾವುದೇ ಒಪ್ಪಂದದ ಅನುಸಾರವಾಗಿದ್ದರೂ ಸಹ ಅಸಮರ್ಥನೀಯವಾಗಿದೆ. ಹಾಗಾಗಿ ಚಿಲ್ಲರೆ ಮಾರಾಟ ದರದಲ್ಲೇ ಸಾರಿಗೆ ಸಂಸ್ಥೆಗೆ ಡೀಸೆಲ್ ಪೂರೈಸಬೇಕು’ ಎಂದರು.
ಮಾ.22ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಚ್, ತೈಲ ಕಂಪನಿಗಳ ಬೆಲೆ ಏರಿಕೆಯ ಕುರಿತಾಗಿ ವಿವರ ಸಲ್ಲಿಸುವಂತೆ ಸೂಚನೆ ನೀಡಿತ್ತು. ‘ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹಲವು ಅಂಶಗಳನ್ನು ಆಧರಿಸಿರುತ್ತದೆ. ಅಂತಾರಾಷ್ಟ್ರೀಯ ಬೆಲೆ ಏರಿಕೆಯೂ ಇದರ ಮೇಲೆ ಪರಿಣಾಮ ಬೀರುತ್ತದೆ’ ಎಂದು ತೈಲ ಕಂಪನಿಗಳು ಬುಧವಾರ ಕೋರ್ಚ್‌ಗೆ ವರದಿ ನೀಡಿದವು.