ಶಿಷ್ಟಾಚಾರ, ಭದ್ರತೆ ಬದಿಗೊತ್ತಿ ಕುಟುಂಬದ ಜೊತೆ ಕುಳಿತಿದ್ದ ಅಕ್ಷತಾ ಮೂರ್ತಿ, ಆಮೇಲೆ ಆಗಿದ್ದೇನು?
ತಾಯಿಯಂತೆ ಮಗಳು, ನೂಲಿನಂತೆ ಸೀರೆ ಅನ್ನೋ ಗಾದೆ, ಸುಧಾಮೂರ್ತಿ ಹಾಗೂ ಅಕ್ಷತಾ ಮೂರ್ತಿ ಅವರ ವಿಚಾರದಲ್ಲಿ ಹೇಳಬಹುದು. ಇತ್ತೀಚೆಗೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಈ ಸಮಾರಂಭಕ್ಕೆ ಬಂದಿದ್ದ ಇಂಗ್ಲೆಂಡ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಮಧ್ಯದ ಸಾಲಿನಲ್ಲಿ ಕುಟುಂಬದ ಜೊತೆ ಕುಳಿತಿದ್ದರು.
ಬೆಂಗಳೂರು (ಏ.8): ಸಮಾಜಮುಖಿ ಕಾರ್ಯಗಳೊಂದಿಗೆ ತಮ್ಮ ಸರಳ ಸ್ವಭಾವದಿಂದ ಗುರುತಿಸಿಕೊಂಡವರು ಇನ್ಫೋಸಿಸ್ ಫೌಂಡೇಷನ್‌ನ ಮಾಜಿ ಚೇರ್ಮನ್ ಸುಧಾಮೂರ್ತಿ. ಗಂಡ ನಾರಾಯಣ ಮೂರ್ತಿ ವಿಶ್ವದ ಶ್ರೇಷ್ಠ ಕಂಪನಿ ಇನ್ಫೋಸಿಸ್‌ನ ಸಹ ಸಂಸ್ಥಾಪಕರು, ಅಳಿಯ ಇಂಗ್ಲೆಂಡ್ ಪ್ರಧಾನಿ. ಹಾಗಿದ್ದರೂ ಅವರ ಸರಳ ಸ್ವಭಾವದಲ್ಲಿ ಒಂದು ಚೂರು ಬದಲಾವಣೆ ಆಗಿಲ್ಲ. ಈಗ ಅದೇ ಸರಳತೆ ಅವರ ಮಗಳು ಹಾಗೂ ಇಂಗ್ಲೆಂಡ್‌ನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರನ್ನೂ ಕಾಣಿಸಿಕೊಂಡಿದೆ. ಸುಧಾಮೂರ್ತಿ ಅವರಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಅದಕ್ಕೂ ಮುನ್ನ ಕೆಲವು ಅಕರ್ಷಕ ಸಂಗತಿಗೆ ರಾಷ್ಟ್ರಪತಿ ಭವನದ ಆವರಣ ಸಾಕ್ಷಿಯಾಗಿತ್ತು. ಅಮ್ಮ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಬೇಕು ಎನ್ನುವ ಕಾರಣಕ್ಕೆ ಅವರ ಮಗಳು ಹಾಗೂ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಇಂಗ್ಲೆಂಡ್‌ನಿಂದ ಬಂದಿದ್ದರು. ಅವರೊಂದಿಗೆ ನಾರಾಯಣಮೂರ್ತಿ, ಪುತ್ರ ರೋಹನ್ ಹಾಗೂ ಸುಧಾಮೂರ್ತಿ ಅವರ ಸಹೋದರಿ ಡಾ. ಸುನಂದಾ ಕುಲಕರ್ಣಿ ಅವರು ಕೂಡ ಇದ್ದರು.
ಸುಧಾಮೂರ್ತಿಗೆ ಅಕ್ಷತಾ ಮೂರ್ತಿ ಮಗಳಾದರೂ ಭಾರತದ ಪಾಲಿಗೆ ಆಕೆ ಇಂಗ್ಲೆಂಡ್‌ನ ಪ್ರಥಮ ಮಹಿಳೆ. ಯಾವುದೇ ದೇಶದ ಫರ್ಸ್ಟ್ ಲೇಡಿಗೆ ಇಂಥದ್ದೇ ರೀತಿಯಲ್ಲಿ ಗೌರವ ನೀಡಬೇಕು ಎನ್ನುವುದು ದೇಶದ ಶಿಷ್ಟಾಚಾರ. ಅವರ ಭದ್ರತೆ ಸೇರಿದಂತೆ ಎಲ್ಲವನ್ನೂ ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ. ಆದರೆ, ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಅಕ್ಷತಾ ಮೂರ್ತಿ ಕಾರ್ಯಕ್ರಮದಲ್ಲಿ ಮಧ್ಯದ ಸಾಲಿನಲ್ಲಿ ತನ್ನ ಕುಟುಂಬದವರೊಂದಿಗೆ ಕುಳಿತುಕೊಂಡಿದ್ದರು. ಅವರೊಂದಿಗೆ ಯಾವುದೇ ಭದ್ರತಾ ಪಡೆಗಳೂ ಇದ್ದಿರಲಿಲ್ಲ. ಸಾಮಾನ್ಯ ಕಾರ್ಯಕ್ರಮಕ್ಕೆ ಬರುವ ವ್ಯಕ್ತಿಯಂತೆ ಮಧ್ಯದ ಸಾಲಿನಲ್ಲಿ ಯಾವುದೇ ಭದ್ರತಾ ಅಧಿಕಾರಿಗಳ ಆಡಂಬರವಿಲ್ಲದೆ, ಕ್ಯಾಮೆರಾ ಕಣ್ಣುಗಳೂ ಕಾಣದಂತೆ ಕುಳಿತುಕೊಂಡಿದ್ದರು.
ಇದನ್ನು ಗಮನಿಸಿದ ರಾಷ್ಟ್ರಪತಿ ಭವನದ ಅಧಿಕಾರಿಗಳು, ಅಕ್ಷತಾ ಮೂರ್ತಿ ಅವರಿಗೆ ಮುಂದಿನ ಸಾಲಿನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಶಿಷ್ಟಾಚಾರದ ಪ್ರಕಾರ, ವಿದೇಶದ ಅತಿಥಿಗಳು ಭಾರತ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಾಗ ವಿದೇಶಾಂಗ ಸಚಿವರ ಪಕ್ಕದಲ್ಲಿ, ಮುಂದಿನ ಸಾಲಿನಲ್ಲಿಯೇ ಕುಳಿತುಕೊಳ್ಳಬೇಕು ಅನ್ನೋದು ಶಿಷ್ಟಾಚಾರ. ಆದರೆ, ಅಕ್ಷತಾ ಮೂರ್ತಿ ತಾವು ಇಲ್ಲಿ ಒಂದು ಇಂಗ್ಲೆಂಡ್‌ನ ಪ್ರಥಮ ಮಹಿಳೆಯಾಗಿ ಬಂದಿಲ್ಲ, ತಾಯಿಯೊಬ್ಬಳ ಮಗಳಾಗಿ ಬಂದಿದ್ದೇನೆ ಎಂದು ಅನಿಸಿರಬೇಕು. ಯಾವುದೇ ಆಡಂಬರಕ್ಕೆ ಎಡೆಮಾಡಿಕೊಡದೆ ಮಧ್ಯದ ಸಾಲಿನಲ್ಲಿ ಹೋಗಿ ಕುಳಿತಿದ್ದರು.
ಸುಧಾಮೂರ್ತಿ, ಎಸ್‌ಎಲ್ ಭೈರಪ್ಪ ಸೇರಿ ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ಮುರ್ಮು!
ಒಂದು ಸಣ್ಣ ಪುಡಿ ರಾಜಕೀಯ ನಾಯಕನ ಸಂಪರ್ಕವಿದ್ದರೆ ಸಾಕು, ನನಗೆ ಅವರು ಗೊತ್ತು, ನನಗೆ ಇವರು ಗೊತ್ತು ಎಂದು ದೌಲತ್ತು ಕೊಚ್ಚುವವರ ನಡುವೆ, ಇಂಗ್ಲೆಂಡ್‌ನಂಥ ದೇಶದ ಪ್ರಥಮ ಮಹಿಳೆಯ ಸ್ಥಾನದಲ್ಲಿದ್ದರೂ, ಅಕ್ಷತಾ ಮೂರ್ತಿ ಒಂಚೂರು ಅಹಂ ಇಲ್ಲದೆ ಅಮ್ಮನ ಖುಷಿಯಲ್ಲಿ ತಾವೂ ಖುಷಿ ಕಂಡಿದ್ದರು. ಮಗಳಾಗಿ ಹಾಗೂ ಒಂದು ದೇಶದ ಪ್ರಥಮ ಮಹಿಳೆಯಾಗಿ ಎರಡೂ ಜವಾಬ್ದಾರಿಯನ್ನು ಏಕಕಾಲದಲ್ಲಿ ನಿಭಾಯಿಸಿದ ಅಕ್ಷತಾ ಮೂರ್ತಿ ಶ್ಲಾಘನೆಗೆ ಅರ್ಹರು.
ರಸ್ತೆ ಮೇಲೆ ಪೊಂಗಲ್ ಮಾಡಿದ ಸುಧಾಮೂರ್ತಿ.. ಸರಳತೆಯೇ ಶಕ್ತಿ, ಸೇವೆಯೇ ಭಕ್ತಿ
ಸಮಾಜಮುಖಿ ಕಾರ್ಯಗಳ ಮೂಲಕವೇ ಹೆಸರು ಪಡೆದಿರುವ ಸುಧಾಮೂರ್ತಿ ಲೇಖಕಿ ಕೂಡ ಹೌದು. ಅವರು ಆರೋಗ್ಯ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ, ಪ್ರಾಣಿ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ಅನೇಕ ಯೋಜನೆಗಳನ್ನು ಆರಂಭಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸುಧಾ ಮೂರ್ತಿ, ಈ ಪ್ರಶಸ್ತಿಗೆ ನಾನು ಭಾರತದ ಜನತೆಗೆ ಋಣಿಯಾಗಿದ್ದೇನೆ. ಇಂದಿನ ನನ್ನ ಮನ್ನಣೆಯು ಯುವ ಪೀಳಿಗೆಯನ್ನು ಸಾಮಾಜಿಕ ಕಲ್ಯಾಣವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಮಹಾನ್ ರಾಷ್ಟ್ರದ ನಿರಂತರ ಅಭಿವೃದ್ಧಿಗೆ ಇದು ಅಗತ್ಯವಿದೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ' ಎಂದು ಹೇಳಿದ್ದರು. ಡಿಸೆಂಬರ್ 2021 ರವರೆಗೆ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷರಾಗಿದ್ದ ಸುಧಾಮೂರ್ತಿ ಅವರು 25 ವರ್ಷಗಳಿಗೂ ಹೆಚ್ಚು ಕಾಲ ಸಮಾಜಸೇವೆಯಲ್ಲಿದ್ದಾರೆ.