Asianet Suvarna News Asianet Suvarna News

Farm Bills’ repeal| 'ಸರ್ಕಾರದ ನಿರ್ಧಾರಕ್ಕೆ ಸ್ವಾಗತ, ಆದರೆ ಹೋರಾಟ ನಿಲ್ಲಿಸಲ್ಲ!'

* ಕನಿಷ್ಠ ಬೆಂಬಲ ಬೆಲೆ ಖಾತರಿ, ಸಂಸತ್ತಿನಲ್ಲಿ ಕಾಯ್ದೆ ರದ್ದಾಗುವವರೆಗೂ ಹೋರಾಟ

* ಸರ್ಕಾರದ ನಿರ್ಧಾರಕ್ಕೆ ಸ್ವಾಗತ, ಆದರೆ ಹೋರಾಟ ನಿಲ್ಲಿಸಲ್ಲ!

* ಪ್ರಧಾನಿ ಘೋಷಣೆ ಸ್ವಾಗತಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ, ಟಿಕಾಯತ್‌

Protest will end when farm laws repealed in Parliament Says Rakesh Tikait pod
Author
Bangalore, First Published Nov 20, 2021, 7:04 AM IST

ನವದೆಹಲಿ(ನ.20): ಮೂರು ವಿವಾದಿತ ಕೃಷಿ ಕಾಯ್ದೆ (Farm Law) ಹಿಂದಕ್ಕೆ ಪಡೆಯುವ ಕೇಂದ್ರ ಸರ್ಕಾರದ ನಿರ್ಧಾರವನ್ನು, ರೈತ ಹೋರಾಟದ ಮುಂಚೂಣಿಯಲ್ಲಿದ್ದ ಕೃಷಿ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ (Kisan Morcha) ಸ್ವಾಗತಿಸಿದೆ. ಜೊತೆಗೆ ಮುಂದಿನ ಹೋರಾಟದ ಕುರಿತು ಶೀಘ್ರವೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಘೋಷಿಸಿದೆ. ಆದರೆ ಈ ರೈತ ಹೋರಾಟದ ಮುಂಚೂಣಿ ನಾಯಕರಾಗಿದ್ದ ಭಾರತೀಯ ಕಿಸಾನ್‌ ಯೂನಿಯನ್‌ನ ನಾಯಕ ರಾಕೇಶ್‌ ಟಿಕಾಯತ್‌ (Bharatiya Kisan Union (BKU) leader Rakesh Tikait), ಸರ್ಕಾರದ ನಿರ್ಧಾರ ಸ್ವಾಗತ ಮಾಡಿದ್ದರೂ, ಹೋರಾಟ ಮುಂದುವರೆಯಲಿದೆ ಎಂದು ಘೋಷಿಸಿದ್ದಾರೆ.

ಈ ಕುರಿತು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಟಿಕಾಯತ್‌ ‘ತಕ್ಷಣಕ್ಕೆ ನಾವು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ, ನಾವು ಸಂಸತ್ತಿನಲ್ಲಿ (Parliament) ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೂ ಕಾದು ನೋಡಲಿದ್ದೇವೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಖಾತರಿಯನ್ನು ಸರ್ಕಾರ ನಮಗೆ ನೀಡಬೇಕು. ಈ ವಿಷಯ ಇತ್ಯರ್ಥವಾಗದೇ ರೈತರು ತಮ್ಮ ಮನೆಗೆ ತೆರಳುವುದಿಲ್ಲ. ಕನಿಷ್ಠ ಬೆಂಬಲ ಬೆಲೆ ವಿಷಯವು ಇಡೀ ದೇಶಕ್ಕೆ ಅನ್ವಯವಾಗುವ ವಿಷಯ. ಅಲ್ಲದೇ ರೈತರು ಪ್ರಸ್ತಾಪಿಸಿರುವ ಇತರೆ ವಿಷಯಗಳ ಕುರಿತೂ ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸಬೇಕು’ ಎಂದು ತಮ್ಮ ಕಠಿಣ ನಿಲವು ಮುಂದುವರೆಸಿದ್ದಾರೆ.

ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆಯ ಹೊರತಾಗಿಯೂ ತಮ್ಮ ಸಂಘಟನೆಗೆ ಸೇರಿದ ಯಾವುದೇ ರೈತರು ಸಂಭ್ರಮಾಚರಣೆ ನಡೆಸಬಾರದು, ಹೋರಾಟ ಇನ್ನೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಸ್ವಾಗತ:

ಕೃಷಿ ಕಾಯ್ದೆ ಹಿಂಪಡೆಯುವ ಸರ್ಕಾರದ ನಿರ್ಧಾರವನ್ನು 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ ಸ್ವಾಗತಿಸಿದೆ. ‘ಸರ್ಕಾರದ ನಿರ್ಧಾರವನ್ನು ಸಂಯುಕ್ತ ಕಿಸಾನ್‌ ಮೋರ್ಚಾ ಸ್ವಾಗತಿಸುತ್ತದೆ ಮತ್ತು ಸೂಕ್ತ ಸಂಸದೀಯ ವಿಧಾನಗಳ ಮೂಲಕ ಈ ಘೋಷಣೆ ಜಾರಿಯಾಗುವುದನ್ನು ನಾವು ಕಾದು ನೋಡಲಿದ್ದೇವೆ. ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ಹಿಂದಕ್ಕೆ ಪಡೆದರೆ ಅದು ರೈತರ ಒಂದು ವರ್ಷದ ಸುದೀರ್ಘ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯವಾಗಲಿದೆ. ನಮ್ಮ ಬೇಡಿಕೆ ಕೇವಲ 3 ಕರಾಳ ಕೃಷಿ ಕಾಯ್ದೆ ರದ್ದು ಮಾತ್ರ ಆಗಿರಲಿಲ್ಲ. ಇದರ ಜೊತೆಗೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಾತ್ಮಕವಾಗಿ ಖಾತರಿಪಡಿಸುವುದು, ವಿದ್ಯುತ್‌ ತಿದ್ದುಪಡಿ ಮಸೂದೆ ರದ್ದು ಸೇರಿದಂತೆ ಇನ್ನೂ ಕೆಲವು ವಿಷಯಗಳಿಗೆ. ಈ ವಿಷಯಗಳು ಇನ್ನೂ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ನಮ್ಮ ಮುಂದಿನ ನಿರ್ಧಾರದ ಕುರಿತು ಶೀಘ್ರವೇ ನಾವು ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದೇವೆ’ ಎಂದು ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.

* ವಿವಾದಕ್ಕೆ ಕಾರಣವಾಗಿದ್ದ 3 ಕಾಯ್ದೆಗಳು

1. ರೈತರ ಬೆಳೆ ವ್ಯಾಪಾರ ಮತ್ತು ಉದ್ಯಮ (ಉತ್ತೇಜನ ಮತ್ತು ನೆರವು) ಕಾಯ್ದೆ 2020:

ಈ ಕಾಯ್ದೆಯು, ರೈತರಿಗೆ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಕಾಯ್ದೆಯಡಿ ನೊಂದಾಯಿತ ಮಾರುಕಟ್ಟೆಗಳಿಂದ ಹೊರಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತಿತ್ತು. ಈ ಕಾಯ್ದೆ ಎಲ್ಲಾ ರಾಜ್ಯಗಳ ಎಪಿಎಂಸಿ ಕಾಯ್ದೆಯನ್ನು ಅನೂರ್ಜಿತಗೊಳಿಸುತ್ತಿತ್ತು.

2. ರೈತರ (ಸಬಲೀಕರಣ ಮತ್ತು ರಕ್ಷಣೆ) ದರ ಖಾತರಿ ಒಪ್ಪಂದ ಮತ್ತು ಕೃಷಿ ಸೇವಾ ಕಾಯ್ದೆ 2020:

ಈ ಕಾಯ್ದೆಯು, ರೈತರಿಗೆ ಗುತ್ತಿಗೆ ಕೃಷಿ ಚಟುವಟಿಕೆ ಒಪ್ಪಂದಕ್ಕೆ ಅಗತ್ಯ ಕಾನೂನು ಚೌಕಟ್ಟನ್ನು ಒದಗಿಸುತ್ತಿತ್ತು. ಈ ಕಾಯ್ದೆಯಡಿ ಬಿತ್ತನೆಗೆ ಮೊದಲೇ ರೈತರು, ಖರೀದಿದಾರನ ಜೊತೆಗೆ ಪೂರ್ವ ನಿಗದಿತ ಬೆಲೆಗೆ ತನ್ನ ಉತ್ಪನ್ನ ಮಾರಾಟ ಮಾಡುವ ಸಂಬಂಧ ಒಪ್ಪಂದ ಮಾಡಿಕೊಳ್ಳಬಹುದಿತ್ತು. ಆದರೆ ಈ ಕಾಯ್ದೆಯು, ಖರೀದಿದಾರನು ರೈತನಿಗೆ ಆಫರ್‌ ಮಾಡಬೇಕಾದ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಯಾವುದೇ ಪ್ರಸ್ತಾಪ ಹೊಂದಿರಲಿಲ್ಲ.

3. ಅಗತ್ಯ ಸರಕು (ತಿದ್ದುಪಡಿ) ಕಾಯ್ದೆ, 2020:

ಈ ತಿದ್ದುಪಡಿ ಕಾಯ್ದೆಯ ಮೂಲಕ, ಅತ್ಯಂತ ಗಂಭೀರ ಪರಿಸ್ಥಿತಿ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಯಾವುದೇ ಕೃಷಿ ಉತ್ಪನ್ನಗಳ ಸಂಗ್ರಹದ ಮೇಲೆ ಮಿತಿ ಹೇರುವ ಕೇಂದ್ರ ಸರ್ಕಾರದ ಅಧಿಕಾರವನ್ನು ತೆಗೆದುಹಾಕಿತ್ತು.

Follow Us:
Download App:
  • android
  • ios